- ಪದವಿ ಪ್ರದಾನ ಹಾಗೂ ಯುವ ಸಾಧಕರಿಗೆ ಪುರಸ್ಕಾರ ಸಮಾರಂಭ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಆಧುನಿಕ ಶಿಕ್ಷಣ ಪದ್ಧತಿ ವಿದ್ಯಾರ್ಥಿಗಳನ್ನು ಯಂತ್ರಗಳಂತೆ ಸಿದ್ಧಪಡಿಸುತ್ತಿದೆ. ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಪೋಷಿಸುವ ಕಾರ್ಯ ನಡೆಯಬೇಕು. ಈ ನಿಟ್ಟಿನಲ್ಲಿ ಸಂಘಟನೆ ಕಾರ್ಯಪ್ರವೃತ್ತವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ನಗರದ ಹೇಮಾಂಗಣ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ನೂತನ ಚಿಕ್ಕಮಗಳೂರು ಘಟಕದ ಪದವಿ ಪ್ರದಾನ ಹಾಗೂ ಯುವ ಸಾಧಕರಿಗೆ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. 1999 ರಲ್ಲಿ 70,000 ಕ್ಕಿಂತ ಹೆಚ್ಚು ಯುವಕರ ಸಂಘಗಳಿದ್ದವು, ಆದರೆ, ಇದೀಗ 2-3 ಸಾವಿರ ಯುವಕ ಸಂಘಗಳಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಕಾಯ್ದೆ ಕಡ್ಡಾಯ ಮಾಡಿದ ಪರಿಣಾಮ ಯುವ ಸಂಘಗಳು ಕ್ಷೀಣಿಸಿವೆ. ಸ್ಥಿರ ನಿಧಿಯನ್ನು ನೀಡದಿರುವ ಕಾರಣ ಸಂಘಗಳಿಗೆ ಯಾವ ಪ್ರಯೋಜನವಿಲ್ಲ, ಈ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪಿಸುವೆ ಎಂದು ಭರವಸೆ ನೀಡಿದರು.ಕಲೆಯನ್ನೇ ಆರಾಧಿಸಿ ಬದುಕಿದ ಹಲವಾರು ಕಲಾವಿದರಿಗೆ ಮಾಸಾಶನ ಸರಿಯಾಗಿ ಬರುತ್ತಿಲ್ಲ. ಕೂಡಲೇ ಇದರತ್ತ ಗಮನಹರಿಸಿ ಅವರ ವೃದ್ಧಾಪ್ಯ ಕಾಲದಲ್ಲಿ ಸರ್ಕಾರ ಮಾಶಾಸನ ನೀಡಿ ನೆರವಾಗಬೇಕು. ಕಲೆ ಯನ್ನು ನಂಬಿಕೊಂಡು ಬದುಕು ಸಾಗಿಸುವ ಕಲಾವಿದರಿಗೆ ಸ್ಪಂದಿಸುವ ಜೊತೆಗೆ ಆರ್ಥಿಕ ಶಕ್ತಿ ತುಂಬಲು ಮಾಶಾಸನದ ಅವಶ್ಯಕತೆಯಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಇತ್ತೀಚಿನ ದಿನಗಳಲ್ಲಿ ರಾಜ್ಯದ ಯುವ ಜನ ಮೇಳಗಳು, ರಾಜ್ಯ ಜಿಲ್ಲಾ ಯುವ ಪ್ರಶಸ್ತಿಗಳು, ಯುವ ಸಂಪರ್ಕ ಸಭೆಗಳು, ಸಂಘಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಸಾಮಗ್ರಿಗಳ ಯೋಜನೆ, ಗರುಡಿ ಮನೆ ಉಪಕರಣಗಳು ನೀಡುವುದನ್ನು ಸರ್ಕಾರ ಪುನರಾರಂಭಿಸಬೇಕು ಎಂದು ಹೇಳಿದರು.ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಮಾತನಾಡಿ, ಕನ್ನಡ ಮತ್ತು ಕರ್ನಾಟಕದ ಹಿರಿಮೆಯನ್ನು ಜಾಗೃತಿ ಮೂಡಿಸುವ ಕಾಲಘಟ್ಟಕ್ಕೆ ಬಂದಿದ್ದೇವೆ. ಕನ್ನಡ ಎಂದಿಗೂ ಜೀವಂತವಾಗಿರಲಿದೆ ಎಂದರು,.ಇದೇ ವೇಳೆ ಒಕ್ಕೂಟದ ನೂತನ ಜಿಲ್ಲಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗೆ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪದವಿ ಪತ್ರ ವಿತರಿಸಿದರು. ತಾಲೂಕಿನ ಯುವ ಸಂಘಟಕ ಹೇಮಂತ್ ಕುಮಾರ್ ಹಾಗೂ ಮೂಡಿಗೆರೆ ಯುವ ಕಲಾವಿದೆ ಶುಭಾ ಹೊಸಕೆರೆ ಅವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.ನೂತನ ಪದಾಧಿಕಾರಿಗಳು:
ವಿಜಯ್ (ಅಧ್ಯಕ್ಷರು), ಪ್ರತಿಭಾ (ಉಪಾಧ್ಯಕ್ಷರು), ರಂಜಿತ್ (ಪ್ರಧಾನ ಕಾರ್ಯದರ್ಶಿ ), ಎಸ್. ಹರ್ಷಿತ್‌ಕುಮಾರ್ (ಖಜಾಂಚಿ), ಎನ್.ಎಂ.ಮಹೇಶ್ (ಜಂಟಿ ಕಾರ್ಯದರ್ಶಿ), ಭರತ್ (ಸಂಘಟನಾ ಕಾರ್ಯದರ್ಶಿ), ವಿಜಯಲಕ್ಷ್ಮೀ (ಪತ್ರಿಕಾ ಕಾರ್ಯದರ್ಶಿ), ಎಂ.ಎಂ.ದಿವ್ಯಾ (ಕ್ರೀಡಾ ಕಾರ್ಯದರ್ಶಿ), ಗಿರೀಶ್ (ಸಂಚಾಲಕ) ತೇಜೇಸ್ (ಸಹ ಸಂಚಾಲಕ), ಜೋಯಲ್, ಕೀರ್ತಿ (ಸದಸ್ಯರು).ಕಾರ್ಯಕ್ರಮದಲ್ಲಿ ದ.ಸಾ.ಪ. ಜಿಲ್ಲಾಧ್ಯಕ್ಷ ಶಾಂತಮೂರ್ತಿ, ಜಿ.ಸಾಂ.ಕಲಾವಿದರ ಸಂಘ ಗೌರವಾಧ್ಯಕ್ಷ ಎಸ್.ಎಸ್.ಶಿವಣ್ಣ, ಅಧ್ಯಕ್ಷ ಜಯಪ್ರಕಾಶ್, ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ, ಮೂಡಿಗೆರೆ ಅಧ್ಯಕ್ಷ ಎಚ್.ಎಸ್.ರವಿ, ಜನಪವ ಯುವ ಬ್ರಿಗೇಡ್ ಗ್ರಾಮೀಣ ಸಂಚಾಲಕ ದಿಲೀಪ್, ನಗರ ಸಂಚಾಲಕ ಅಮಿತ್, ಮುಖಂಡರಾದ ಸುರೇಶ್, ಪವಿತ್ರಾ ವಿಜಯ್, ಬಿ.ಜಿ.ಮಧು ಉಪಸ್ಥಿತರಿದ್ದರು. 27 ಕೆಸಿಕೆಎಂ 2ಚಿಕ್ಕಮಗಳೂರಿನ ಹೇಮಾಂಗಣ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಚಿಕ್ಕಮಗಳೂರು ಘಟಕದ ಪದವಿ ಪ್ರದಾನ ಹಾಗೂ ಯುವ ಸಾಧಕರಿಗೆ ಪುರಸ್ಕಾರ ಸಮಾರಂಭವನ್ನು ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಜಾನಪದ ಬಾಲಾಜಿ ಅವರು ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಇದ್ದರು.