ಬೇಸಿಗೆಯಲ್ಲಿ ನೀರಿನ ಸಮಸ್ಯೆ ತಲೆದೊರದಂತೆ ಕೆಲಸ ಮಾಡಿ: ಭಂವರಸಿಂಗ್

KannadaprabhaNewsNetwork |  
Published : Jan 09, 2024, 02:00 AM IST
ಜಿ.ಪಂ ಸಿಇಒ ಭಂವರಸಿಂಗ್ ಮೀನಾ ಅಫಜಲ್ಪುರ ತಾ.ಪಂ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.  | Kannada Prabha

ಸಾರಾಂಶ

ಅಫಜಲ್ಪುರ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತಗ್ಗಿದ್ದು ಬೇಸಿಗೆಯಲ್ಲಿ ನೀರಿನ ಬವಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ನೀರಿನ ಸಮಸ್ಯೆಗೆ ಪರ್ಯಾಯ ಪರಿಹಾರೋಪಾಯಗಳನ್ನು ಮಾಡಿ ಎಂದು ಪಿಡಿಒಗಳಿಗೆ ಜಿಪಂ ಸಿಇಒ ಭಂವರಸಿಂಗ ಮೀನಾ ತಾಕೀತು.

ಕನ್ನಡಪ್ರಭ ವಾರ್ತೆ ಚವಡಾಪುರ

ಕಳೆದ ಮುಂಗಾರು, ಹಿಂಗಾರು ಹಂಗಾಮಿನ ಮಳೆಗಳು ವಾಡಿಕೆಯಷ್ಟು ಬಾರದೇ ಇರುವುದರಿಂದ ಅಫಜಲ್ಪುರ ತಾಲೂಕಿನಲ್ಲಿ ಅಂತರ್ಜಲ ಮಟ್ಟ ತಗ್ಗಿದ್ದು ಬೇಸಿಗೆಯಲ್ಲಿ ನೀರಿನ ಬವಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಈಗಿನಿಂದಲೇ ನೀರಿನ ಸಮಸ್ಯೆಗೆ ಪರ್ಯಾಯ ಪರಿಹಾರೋಪಾಯಗಳನ್ನು ಮಾಡಿ ಎಂದು ಪಿಡಿಒಗಳಿಗೆ ಜಿಪಂ ಸಿಇಒ ಭಂವರಸಿಂಗ ಮೀನಾ ತಾಕೀತು ಮಾಡಿದರು.

ಅಫಜಲ್ಪುರ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಪಿಡಿಒಗಳ ಸಭೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಇರುವ ಹಳ್ಳಿಗಳನ್ನು ಗುರುತಿಸಿಕೊಂಡು ಅಲ್ಲಿ ಏನೆಲ್ಲಾ ಮುಂಜಾಗೃತೆ ಕ್ರಮಗಳನ್ನು ವಹಿಸಲು ಸಾಧ್ಯವಿದೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಿ. ಬೇಸಿಗೆ ಬಂದಾಗ ಜನ ನೀರಿಗಾಗಿ ಪರಿತಪಿಸುವಾಗ ಬಾವಿ ತೋಡುವ ಕೆಲಸ ಮಾಡಬೇಡಿ. ಅಲ್ಲದೆ ಪಂಚಾಯಿತಿಗಳಲ್ಲಿರುವ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬೇರೆ ಯಾವುದೇ ಕಾಮಗಾರಿಗಳಿಗೆ ಬಳಕೆ ಮಾಡದೆ ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿ ಎಂದು ಸೂಚಿಸಿದರು.

ಇನ್ನೂ ಜನ ಗೂಳೆ ಹೋಗದಂತೆ ತಡೆಯಲು ನರೇಗಾ ಯೋಜನೆಗೆ ಹೆಚ್ಚು ಒತ್ತು ನೀಡಿ. ಕೂಲಿ ಕಾರ್ಮಿಕರಿಗೆ ಕೆಲಸ ನೀಡಿ ಗ್ರಾಮದಲ್ಲಿನ ಕೆರೆ ಕಟ್ಟೆಗಳು, ಕಲ್ಯಾಣಿಗಳನ್ನು ಪುನರುಜ್ಜಿವನಗೊಳಿಸಿ, ಇದರಿಂದ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪ್ರೇರಣೆಯಾಗಲಿದೆ. ತಾಲೂಕಿನ 28 ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಅವುಗಳನ್ನು ಜ.26ರೊಳಗೆ ಕಾಮಗಾರಿ ಮುಗಿಸಿ 26ರಂದು ಉದ್ಘಾಟನೆ ಮಾಡಿಸಿ. ಅಲ್ಲದೆ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ವಯಕ್ತಿಕ ಶೌಚಾಲಯ ಕಟ್ಟಿಕೊಳ್ಳುವವರ ಅರ್ಜಿಗಳನ್ನು ಸ್ವಿಕರಿಸಿ, ನರೇಗಾ ಅಡಿ ಕೂಲಿ ಮಾಡುವ 6 ತಿಂಗಳಿಂದ 3 ವರ್ಷದೊಳಗಿನ ಕೂಸಿನ ತಾಯಂದಿರ ಮಾಹಿತಿ ಸಂಗ್ರಹಿಸಿ ತಾ.ಪಂ ಕಚೇರಿಗೆ ಸಲ್ಲಿಸಿ ಎಂದು ತಿಳಿಸಿದ ಅವರು ಗ್ರಾ.ಪಂ ಕರವಸೂಲಿಗಾರರು ನಿತ್ಯ 100ರಿಂದ 150 ಮನೆಗಳಿಗೆ ಭೇಟಿ ನೀಡಿ ಕರ ವಸೂಲಿ ಮಾಡಿ, ಆನ್ಲೈನ್‌ನಲ್ಲಿ ದಾಖಲಿಸಿ. ಗ್ರಾ.ಪಂ ಗ್ರಂಥಾಲಯಗಳಿಗೆ ಬಯೋಮೇಟ್ರಿಕ್ ವ್ಯವಸ್ಥೆ ಅಳವಡಿಸಿ ಗ್ರಂಥಪಾಲಕರ ಬಯೋಮೇಟ್ರಿಕ್ ವ್ಯವಸ್ಥೆಗೆ ಚಾಲನೆ ನೀಡಿ ಅದರನ್ವಯವೇ ಅವರಿಗೆ ವೇತನ ಪಾವತಿಯಾಗಲಿದೆ ಎಂದರು.

ಪಿಡಿಒಗಳು ತಮ್ಮ ಕಾರ್ಯಸ್ಥಾನದಲ್ಲಿದ್ದು ಸದಾ ಜನರ ಸಂಪರ್ಕದಲ್ಲಿದ್ದು ಕೆಲಸ ಮಾಡಿ. ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಫೋನ್‌ಗಳನ್ನು ಬಂದ ಮಾಡಿಡಬೇಡಿ. ಜನಸಾಮಾನ್ಯರು ನಿಮಗೆ ಯಾವುದೇ ಮಾಹಿತಿ ಕೇಳಿದಾಗ ಸಮಾಧಾನದಿಂದ ಉತ್ತರಿಸಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಸಮಸ್ಯೆ ಸರಿಪಡಿಸುವ ಬದಲಾಗಿ ಜಾರಿಕೊಳ್ಳುವ ಕೆಲಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಪ್ರಭಾರಿ ತಾ.ಪಂ ಇಒ ಬಾಬುರಾವ್ ಜ್ಯೋತಿ, ಎಡಿ ರಮೇಶ ಪಾಟೀಲ್, ಪಿಡಿಒಗಳಾದ ಮಹಾಂತೇಶ ಯಾಡಗಿ, ಶಂಕರ ದ್ಯಾಮಣ್ಣವರ್, ಚಿದಾನಂದ ಆಲೆಗಾಂವ್, ಮಹಾಂತೇಶ ಸಾಲಿಮಠ, ಅಖಂಡೆಪ್ಪ ಹುಗ್ಗಿ, ಚಂದ್ರಶೇಖರ ಕಂಬಾರ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ