ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಕೆಲಸ ಮಾಡಿ: ನಲಿನ್ ಅತುಲ್

KannadaprabhaNewsNetwork |  
Published : Nov 08, 2024, 12:31 AM IST
7ಕೆಪಿಎಲ್26 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆ | Kannada Prabha

ಸಾರಾಂಶ

ಸ್ವಯಂ ಸೇವಾ ಮನೋಭಾವನೆ, ಶಿಸ್ತು, ಸಮಯ ಪಾಲನೆಯನ್ನು ಕಲಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಮಹಾಸಭೆಕನ್ನಡಪ್ರಭ ವಾರ್ತೆ ಕೊಪ್ಪಳ

ಸ್ವಯಂ ಸೇವಾ ಮನೋಭಾವನೆ, ಶಿಸ್ತು, ಸಮಯ ಪಾಲನೆಯನ್ನು ಕಲಿಸುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಬೇಕು ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ 2023-24ನೇ ಸಾಲಿನ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿ ದಿಸೆಯಲ್ಲಿ ಸ್ಕೌಟ್ ಮತ್ತು ಗೈಡ್ ಚಟುವಟಿಕೆ ಸದಾ ಅವಶ್ಯಕವಾಗಿವೆ. ಜಿಲ್ಲೆಯ ಶಾಲಾ ಮತ್ತು ಕಾಲೇಜುಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳನ್ನು ಹೆಚ್ಚಾಗಿ ಸ್ಥಾಪಿಸಿ. ಈಗಾಗಲೇ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಿಗೆ ನಿಯಮಿತವಾಗಿ ಕ್ಯಾಂಪ್‌ಗಳನ್ನು ಹಮ್ಮಿಕೊಂಡು ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣಗಳು ಹಾಗೂ ಇತರೆ ಸ್ಥಳಗಳ ಸಂದರ್ಶನವನ್ನು ಮಾಡಿಸಿ ಅಲ್ಲಿನ ಇತಿಹಾಸದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಬೇಕು ಮತ್ತು ಆಗಾಗ ಕ್ಯಾಂಪ್‌ಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಮೂಡಿಸುವ ಕೆಲಸ ಮಾಡಬೇಕು. ಎಲ್ಲಾ ವಿದ್ಯಾರ್ಥಿಗಳು ಕ್ಯಾಂಪ್‌ಗಳಲ್ಲಿ ಭಾಗವಹಿಸುವಂತಾಗಬೇಕು ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪ್ರಮುಖ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅಭ್ಯರ್ಥಿಗಳು ಸ್ವಯಂ ಪ್ರೇರಿತವಾಗಿ ಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಜಿಲ್ಲಾ ಸಂಸ್ಥೆಯಿಂದ ಶಾಲಾ ಹಾಗೂ ಕಾಲೇಜುಗಳಲ್ಲೂ ಆಸಕ್ತ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ, ಸಮವಸ್ತ್ರವನ್ನು ಒದಗಿಸಿ, ಶಿಕ್ಷಣದೊಂದಿಗೆ ಬದುಕಿನಲ್ಲಿ ಶಿಸ್ತು ಕಲಿಸಲು ಇಂತಹ ತರಬೇತಿಗಳನ್ನು ನೀಡಲು ಕ್ರಮ ವಹಿಸಬೇಕು. ಈ ಹಿನ್ನೆಲೆ ಸ್ಕೌಟ್ಸ್ ಮತ್ತು ಗೈಡ್ಸ್‌ ಶಿಕ್ಷಣ ಇಲಾಖೆಯರು ಅಗತ್ಯ ಸಹಕಾರ ನೀಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಮುಖ್ಯ ಆಯುಕ್ತ ಎಚ್.ಎಂ. ಸಿದ್ದರಾಮಸ್ವಾಮಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ 82 ಕಬ್, 49 ಫ್ಲಾಕ್, 334 ಸ್ಕೌಟ್ಸ್, 258 ಗೈಡ್ಸ್, 66 ರೋರ್ಸ್ ಸೇರಿದಂತೆ ಒಟ್ಟು 818 ನಮ್ಮ ಸಂಸ್ಥೆಯ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು.

ಧ್ವಜ ಚೀಟಿ ಬಿಡುಗಡೆ:

ಸ್ಕೌಟ್ಸ್ ಮತ್ತು ಗೈಡ್ಸ್ ಧ್ವಜ ಸ್ಥಾಪನಾ ದಿನಾಚರಣೆ ನಿಮಿತ್ತ ಧ್ವಜ ಚೀಟಿಗಳನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್ ಬಿರಾದಾರ್, ಜಿಲ್ಲಾ ವಾರ್ತಾಧಿಕಾರಿ ಡಾ. ಸುರೇಶ್ ಜಿ., ಕೊಪ್ಪಳ ಜಿಲ್ಲಾ ಗೈಡ್ಸ್ ಆಯುಕ್ತೆ ಅರುಣಾ ವಸ್ತ್ರದ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಮಾರುತಿ ಆರೇರ್, ಜಿಲ್ಲಾ ಖಜಾಂಚಿ ಪ್ರಹ್ಲಾದ್ ಬಡಿಗೇರ್, ಜಿಲ್ಲಾ ಜಂಟಿ ಕಾರ್ಯದರ್ಶಿ ದಾಕ್ಷಾಯಣಿ ಬಂಡಿ ಸೇರಿದಂತೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ವಚ್ಛತಾ ಮತ್ತು ಆರೋಗ್ಯ ಜಾಗೃತಿ ಜಾಥಕ್ಕೆ ಚಾಲನೆ:

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಚ್ಛತಾ ಮತ್ತು ಆರೋಗ್ಯ ಜಾಗೃತಿ ಜಾಥಾಕ್ಕೆ ಜಿಲ್ಲಾಧಿಕಾರಿ ಜಿಲ್ಲಾಡಳಿತದ ಭವನದ ಆವರಣದಲ್ಲಿ ಚಾಲನೆ ನೀಡಿದರು. ಈ ವೇಳೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳಿದ್ದರು.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''