ಮಕ್ಕಳಲ್ಲಿ ನೈತಿಕ ಮೌಲ್ಯ ಬಿತ್ತುವ ಕೆಲಸವಾಗಲಿ

KannadaprabhaNewsNetwork |  
Published : Nov 06, 2024, 11:57 PM IST
ಬಳ್ಳಾರಿಯ ಶ್ರೀವಾಸವಿ ವಿದ್ಯಾಶಾಲೆಯಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಜ್ಞಾನಯೋಗಾನಂದ ಅವರು ಮಾತನಾಡಿದರು.  | Kannada Prabha

ಸಾರಾಂಶ

ವಿದ್ಯಾರ್ಥಿ ದಿಸೆಯಲ್ಲಿಯೇ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು.

ಬಳ್ಳಾರಿ: ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಂಡಲ್ಲಿ ಮಾತ್ರ ಪೂರ್ಣ ಪ್ರಮಾಣದ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಜ್ಞಾನಯೋಗಾನಂದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಗರದ ಶ್ರೀವಾಸವಿ ವಿದ್ಯಾಶಾಲೆಯಲ್ಲಿ ಶ್ರೀವಾಸವಿ ಎಜ್ಯುಕೇಷನ್ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣದ ಮಹತ್ವ ಕುರಿತು ಉಪನ್ಯಾಸ ನೀಡಿದರು.

ವಿದ್ಯಾರ್ಥಿ ದಿಸೆಯಲ್ಲಿಯೇ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಸಕಾರಾತ್ಮಕ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಆತ್ಮ ವಿಶ್ವಾಸ ಹೆಚ್ಚುತ್ತದೆ. ಕಲಿಕೆಯ ವಿಧಾನವೂ ಬದಲಾಗುತ್ತದೆ. ಮಕ್ಕಳು ದೇಶದ ಭವಿಷ್ಯ ಎಂಬುದನ್ನು ಪ್ರತಿಯೊಬ್ಬರು ಅರಿತಿದ್ದೇವೆ. ಆದರೆ, ಅವರಿಗೆ ಯಾವ ರೀತಿಯ ನೈತಿಕ ಶಿಕ್ಷಣವನ್ನು ನೀಡಬೇಕು ಎಂಬುದರ ಕಡೆ ಗಮನ ಹರಿಸಬೇಕು. ಬರೀ ಪಠ್ಯಪುಸ್ತಕಗಳ ವಿಷಯಗಳಿಗೆ ಮಕ್ಕಳನ್ನು ಸೀಮಿತಗೊಳಿಸಬಾರದು. ಜ್ಞಾನಾರ್ಜನೆಯ ನೆಲೆಯಲ್ಲಿ ವಿವಿಧ ಚಟುವಟಿಕೆಯಲ್ಲಿ ತೊಡಗಿಸಬೇಕು. ಪ್ರಮುಖವಾಗಿ ಬದುಕಿನ ಬಗ್ಗೆ ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವನ್ನು ಶಿಕ್ಷಕರಾದವರು ಮಾಡಬೇಕು. ಶ್ರದ್ಧೆ, ಪ್ರಾಮಾಣಿಕತೆ, ಶಿಸ್ತು ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಬಿತ್ತಬೇಕು. ನಮ್ಮ ದೇಶದ ಸುಸ್ಥಿರತೆ ಮತ್ತು ಸಮೃದ್ಧಿಗೆ ವಿದ್ಯಾರ್ಥಿಗಳು ಶಕ್ತಿಯಾಗಬೇಕು ಎಂದರು.

ಶ್ರೀವಾಸವಿ ಎಜ್ಯುಕೇಷನ್ ಟ್ರಸ್ಟಿನ ಕಾರ್ಯದರ್ಶಿ ಪಿ.ಎನ್. ಸುರೇಶ್, ಜಂಟಿ ಕಾರ್ಯದರ್ಶಿ ಬಿಂಗಿ ಸುರೇಶ್, ಶಾಲೆಯ ಮುಖ್ಯಗುರು ವೀರೇಶ್, ಶಾಲಾ ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿ ಬಸವರಾಜೇಶ್ವರಿ, ವಿದ್ಯಾರ್ಥಿಗಳಾದ ಹರಣಿ, ಬಿಲ್ವಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಸ್ವಾಮಿ ವಿವೇಕಾನಂದ ಹಾಗೂ ಶ್ರೀವಾಸವಿ ಮಾತೆ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಸ್ವಾಮಿ ಜ್ಞಾನಯೋಗಾನಂದ ಸ್ವಾಮಿ ವಿವೇಕಾನಂದರ ಜೀವನಚರಿತ್ರೆ ಸೇರಿದಂತೆ ಅನೇಕ ಮಹನೀಯರ ಬಗ್ಗೆ ಓದಬೇಕು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸತತ ಅಧ್ಯಯನದ ಮೂಲಕ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇದೇ ವೇಳೆ ವಾಸವಿ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಶ್ರೀಗಳನ್ನು ಸನ್ಮಾನಿಸಲಾಯಿತು.

ಬಳ್ಳಾರಿಯ ಶ್ರೀವಾಸವಿ ವಿದ್ಯಾಶಾಲೆಯಲ್ಲಿ ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರು ರಾಮಕೃಷ್ಣಾಶ್ರಮದ ಸ್ವಾಮಿ ಜ್ಞಾನಯೋಗಾನಂದ ಮಾತನಾಡಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ