ಕೊಪ್ಪಳ: ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳ ಮೂಲಕ ಜಾಗೃತಿ ಮೂಡಿಸಿ ಬಾಲ್ಯವಿವಾಹ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ.ರಾಮತ್ನಾಳ ಹೇಳಿದರು.
ಮಕ್ಕಳ ಮೇಲಿನ ಲೈಂಗಿಕ ಅಪರಾಧ ತಡೆಗಟ್ಟಲು ಸರ್ಕಾರ ಹಲವು ಕಾನೂನು ಜಾರಿಗೆ ತಂದಿದ್ದು, ಅದರಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ (ಪೋಕ್ಸೊ)-2012 ಪ್ರಮುಖವಾಗಿದೆ. ಈ ಕಾಯ್ದೆಯ ಪ್ರಕಾರ 18 ವರ್ಷದೊಳಗಿನ ಮಕ್ಕಳ ಮೇಲಿನ ಗಂಭೀರ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಹಾಗೂ ದಂಡ ವಿಧಿಸುವ ವ್ಯವಸ್ಥೆ ಇದೆ. ಲೈಂಗಿಕ ಕಿರುಕುಳವೆಂದರೆ ಮಕ್ಕಳಿಗೆ ಶಾರೀರಿಕ, ಮಾನಸಿಕ ಅಥವಾ ಭಾಷಿಕವಾಗಿ ಗೌರವಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಕೃತ್ಯವಾಗಿದ್ದು, ಅಂತಹ ಪ್ರಕರಣಗಳಿಗೆ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ, ಇತರೆ ಮಾಧ್ಯಮಗಳ ಪ್ರಭಾವದಿಂದ ಪ್ರೀತಿ-ಪ್ರೇಮದ ಹೆಸರಿನಲ್ಲಿ ಅಪ್ರಾಪ್ತ ವಯಸ್ಸಿನ ಮಕ್ಕಳು ಕಾನೂನು ಸಮಸ್ಯೆಗಳಲ್ಲಿ ಸಿಲುಕುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದವರು, ಅದರಲ್ಲಿ ಭಾಗಿಯಾದವರು ಹಾಗೂ ಪ್ರೋತ್ಸಾಹಿಸಿದವರು ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿಯಲ್ಲಿ ಶಿಕ್ಷೆಗೆ ಒಳಗಾಗುತ್ತಾರೆ ಎಂದು ಹೇಳಿದರು.ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಕೆಲವು ಪ್ರಕರಣ ಮಕ್ಕಳನ್ನು ಜನಿಸಿದ ನಂತರ ತೊರೆದು ಹೋಗುವ ಘಟನೆಗಳು ವರದಿಯಾಗಿರುವುದನ್ನು ನೋಡಬಹುದು. ಮಗು ಬೇಡವಾದಲ್ಲಿ ಅದನ್ನು ಎಲ್ಲೆಂದರಲ್ಲಿ ಬಿಟ್ಟು ಹೋಗದೆ ಮಕ್ಕಳ ಸಹಾಯವಾಣಿ 1098 ಗೆ ಮಾಹಿತಿ ನೀಡಬಹುದು ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಬಹುದು. ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಪ್ರಕಾರ ಅಂತಹ ಮಕ್ಕಳಿಗೆ ಈ ಸಮಿತಿಯು ಸೂಕ್ತ ಪುನರ್ವಸತಿ ಕ್ರಮ ಕೈಗೊಳ್ಳುತ್ತದೆ. ಅಕ್ರಮ ದತ್ತು ಪಡೆಯುವುದು ಸಹ ಶಿಕ್ಷಾರ್ಹ ಅಪರಾಧವಾಗಿದ್ದು, ನಿಯಮಬಾಹಿರವಾಗಿ ದತ್ತು ಪಡೆದವರಿಗೂ ಮತ್ತು ನೀಡಿದವರಿಗೂ ಶಿಕ್ಷೆ ವಿಧಿಸಲಾಗುತ್ತದೆ. ಆದ್ದರಿಂದ ಕಾನೂನುಬದ್ಧ ದತ್ತು ಪ್ರಕ್ರಿಯೆಗಳ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮುಂದಾಗಬೇಕು ಎಂದು ತಿಳಿಸಿದರು.
ಶಿವಲೀಲಾ ವನ್ನೂರು, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ–2012ರ ಕುರಿತು, ರವಿಕುಮಾರ ಪವಾರ ಬಾಲ್ಯವಿವಾಹ ನಿಷೇಧ ಕಾಯ್ದೆ–2006 ಹಾಗೂ ಕರ್ನಾಟಕ ತಿದ್ದುಪಡಿ–2016ರ ಬಗ್ಗೆ ಮತ್ತು ಪ್ರತಿಭಾ ಕಾಶಿಮಠ ಗ್ರಾಮ ಮಟ್ಟದ ಮಕ್ಕಳ ರಕ್ಷಣಾ ಸಮಿತಿಗಳ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಎಲ್ಲ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.