ಟಿಕೆಟ್‌ ಯಾರಿಗೆ ಕೊಟ್ರೂ ಮೈತ್ರಿಯಿಂದ ಒಗ್ಗೂಡಿ ಕೆಲಸ

KannadaprabhaNewsNetwork | Published : Mar 11, 2024 1:15 AM

ಸಾರಾಂಶ

ಲೋಕಾಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಮೋದಿ ಅವರನ್ನು ಪ್ರಧಾನಿ ಮಾಡಲು ಟಿಕೆಟ್ ಕೊಡುವ ವಿಚಾರದಲ್ಲಿ ಹೈ ಕಮಾಂಡ್ ಯಾವ ತೀರ್ಮಾನ ಕೈಗೊಂಡರೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನಲೋಕಾಸಭಾ ಚುನಾವಣೆಯಲ್ಲಿ ಮೂರನೇ ಬಾರಿ ಮೋದಿ ಅವರನ್ನು ಪ್ರಧಾನಿ ಮಾಡಲು ಟಿಕೆಟ್ ಕೊಡುವ ವಿಚಾರದಲ್ಲಿ ಹೈ ಕಮಾಂಡ್ ಯಾವ ತೀರ್ಮಾನ ಕೈಗೊಂಡರೂ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಪ್ರಾಣೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿ, ಮೋದಿ ಅವರು ಈ ಹಿಂದೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿ ಇದೀಗ ಮುಂದಿನ ಚುನಾವಣೆಗೆ ಸಜ್ಜಾಗಿದ್ದಾರೆ, ವಿರೋಧ ಪಕ್ಷಗಳು ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರು ಏನೇ ಪ್ರಯತ್ನ ಮಾಡಿದರು ದೇಶದ ಬಗ್ಗೆ ಯೋಚಿಸುವ, ಜನಸಾಮಾನ್ಯರು, ಮತದಾರರು ಮೋದಿಯವರಿಗೆ ಮತ ನೀಡುವ ಮೂಲಕ ಮತ್ತೆ ಮೂರನೇ ಭಾರಿ ಪ್ರಧಾನಮಂತ್ರಿ ಮಾಡುವುದು ನಿಶ್ಚಿತ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 400 ಸೀಟ್‌ಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ಈಗಾಲೇ ಬಿಜೆಪಿ ವಿವಿಧ ನಾಯಕರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದು, ರಾಜ್ಯದಲ್ಲಿ ಈ ಬಾರಿ ಬಿಜೆಪಿ ಬಗ್ಗೆ ಜನರ ಒಲವು ಹೆಚ್ಚಾಗಿದೆ ಎಂದರು.

ಬಿಜೆಪಿ ಹೈ ಕಮಾಂಡ್ ಈವರೆಗೆ ದೇಶದಲ್ಲಿ ಯಾವೊಬ್ಬ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಆದರೆ ಮೈತ್ರಿ ಅಡಿಯಲ್ಲಿ ಹೈ ಕಮಾಂಡ್ ಯಾವುದೇ ತೀರ್ಮಾನ ಕೈಗೊಂಡರು ಬಿಜೆಪಿ - ಜೆಡಿಎಸ್ ಎರಡು ಪಕ್ಷಗಳ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಲಿದ್ದಾರೆ. ಹಾಸನದಲ್ಲಿ ಕೂಡ ಈಗಾಗಲೇ ತಾನು ಪ್ರೀತಂ ಗೌಡ ಹಾಗೂ ಇತರರ ಜೊತೆ ಕೂಡ ಮಾತನಾಡಿದ್ದೇನೆ. ಟಿಕೆಟ್ ನೀಡಿದರೂ ಎಲ್ಲರೂ ಒಗ್ಗೂಡಿ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಈ ಹಿಂದೆ ಚುನಾವಣೆಯಲ್ಲಿ ಸೋಲಿಸಿ ಅವರು ಮರಣ ಹೊಂದಿದಾಗ ಅಂತ್ಯ ಸಂಸ್ಕಾರಕ್ಕೆ ಕೂಡ ಜಾಗ ನೀಡಲು ಹಿಂದೇಟು ಹಾಕಿದ್ದರು. ಆದರೆ ಬಿಜೆಪಿ ಅಂಬೇಡ್ಕರ್ ಅವರ ಕೊಡುಗೆ ಗುರುತಿಸಿ ಅವರು ಭೇಟಿ ನೀಡಿದ ಸ್ಥಳಗಳನ್ನು ಗುರುತಿಸಿ ಸ್ಮಾರಕ ಹಾಗೂ ನೆನಪಾಗಿ ಉಳಿಸುವ ಸ್ಥಳಗಳನ್ನಾಗಿ ಮಾಡುವ ಕೆಲಸ ಮಾಡಿದೆ. ಬರ ಪರಿಸ್ಥಿತಿ ವೇಳೆ ಕೇಂದ್ರ ಸರ್ಕಾರದ ಹಣ ಬಳಕೆ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿ ಪ್ರಧಾನಿ ಮೋದಿ ಅವರನ್ನೆ ಟಾರ್ಗೆಟ್ ಮಾಡಿ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ನವರು ಕೇವಲ ಭಾವನಾತ್ಮಕ ವಿಚಾರಗಳನ್ನು ತಂದು ಜನರ ನಡುವೆ ಆತಂಕದ ವಾತಾವರಣ ಸೃಷ್ಟಿ ಮಾಡುವ ಕೆಲಸ ಮಾಡಿದ್ದಾರೆ. ಜಿಎಸ್‌ಟಿ ತೆರಿಗೆ ಹಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಹೆಚ್ಚು ತೆರಿಗೆ ಕಟ್ಟುವವರಿಗೆ ಆ ಕ್ಷೇತ್ರಕ್ಕೆ ತೆರಿಗೆ ಹಣ ಬಳಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಉಳ್ಳ ಹಾಗೂ ಇಲ್ಲದ ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಎಲ್ಲರಿಗೂ ಸಮಾನ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಕೆಲಸ ಮಾಡುತ್ತಿದೆ. ಈ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈಗಾಗಲೇ ಕೇಂದ್ರ ಸರ್ಕಾರ ದ ಕೆಲಸಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುವ ಸಲುವಾಗಿ ಶ್ರಮ ವಹಿಸುತ್ತಿದ್ದು, ದೇಶದ ಸಮಸ್ತ ಜನರು ಈ ಬಾರಿ ಬಿಜೆಪಿ ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಸರ್ಕಾರ ಕೇವಲ ಬಿಜೆಪಿಯನ್ನು ದೂಷಣೆ ಮಾಡುವುದು ಬಿಟ್ಟರೆ ಬೇರೆ ಏನು ಅಧಿವೇಶನದಲ್ಲಿ ಮಾಡಿಲ್ಲ, ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಹಣದ ಕ್ರೂಢಿಕರಣ ಮಾಡದೆ, ಜನರ ದಿಕ್ಕು ತಪ್ಪಿಸಿ ಮತಗಳಿಸಿದ್ದಾರೆ ಎಂದು ದೂರಿದ ಅವರು, ಹದಿನಾಲ್ಕನೇ ಹಣಕಾಸು ಯೋಜನೆಯಲ್ಲಿ ಎಷ್ಟು ಹಣ ತೆಗೆದಿದ್ದೀರಿ ಶ್ವೇತಪತ್ರ ಹೊರತನ್ನಿ ಎಂದು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡು ಸಾಮಾನ್ಯ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುವ ಕೆಲಸ ಮಾಡಿದೆ. ಆದರೆ ನಾವು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ರಾಮಮಂದಿರ ಕಟ್ಟಿದ್ದೇವೆ. ಅಲ್ಲದೆ ಜನಸಾಮಾನ್ಯರಿಗೆ ಅಗತ್ಯ ಇರುವ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರನ್ನು ಸಬಲರನ್ನಾಗಿ ಮಾಡಿದ್ದೇವೆ. ಜೊತೆಗೆ ಜಿಎಸ್‌ಟಿ ಮೂಲಕ ಕರ್ನಾಟಕದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂಎಲ್‌ಸಿ ಭಾರತೀ ಶೆಟ್ಟಿ, ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಜಿಪಂ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಮುಖಂಡ ಪ್ರಸನ್ನಕುಮಾರ್ ಮತ್ತಿತರರಿದ್ದರು.

Share this article