ಅಂಕೋಲಾ: ಕುಂದಾಪುರದಿಂದ ಗೋವಾ ಗಡಿಯವರೆಗೆ ಚತುಷ್ಪಥ ಕಾಮಗಾರಿ ನಡೆಸಲು ಐಆರ್‌ಬಿಯವರು ಯಾವುದೇ ಅನುಮತಿ ಪಡೆದಿಲ್ಲ ಎಂದು ಕುಂದಾಪುರ ಉಪ ಅರಣ್ಯ ಕಚೇರಿಯವರು ಮಾಹಿತಿ ನೀಡಿದ್ದಾರೆ. ಹೀಗೆ ಅನಧಿಕೃತವಾಗಿ ಹಾಗೂ ಅವೈಜ್ಞಾನಿಕವಾಗಿ ಗುಡ್ಡ ಕತ್ತರಿಸಿದ ಪರಿಣಾಮ 11 ಜನರು ಶಿರೂರಿನಲ್ಲಿ ಬಲಿಯಾಗುವಂತಾಯಿತು ಎಂದು ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಮಗಾರಿ ನಡೆಯುವ ಸ್ಥಳದಲ್ಲಿ ಸ್ಥಳೀಯ ಆಡಳಿತದ ಅನುಮತಿಯನ್ನು ಪಡೆಯಬೇಕು ಎಂದಿದೆ. ಆದರೆ ಎಲ್ಲೂ ಅನುಮತಿ ಪಡೆದಿಲ್ಲ ಎಂದರು.ಕೇರಳದ ಅರ್ಜುನ ಶವಕ್ಕಾಗಿ ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿತ್ತು. ನಂತರ ಆತನ ಮನೆಗೂ ತೆರಳಿದ ಶಾಸಕ ಸತೀಶ ಸೈಲ್ ಸರ್ಕಾರದ ₹5 ಲಕ್ಷದ ಜತೆಗೆ ವೈಯಕ್ತಿಕವಾಗಿ ₹1 ಲಕ್ಷ ನೀಡಿದ್ದಾರೆ. ಆದರೆ ಇದುವರೆಗೂ ಶಾಸಕರು ಸಂತ್ರಸ್ತ ಕುಟುಂಬವಾದ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಸಣ್ಣಿ ಗೌಡ ಅವರ ಮನೆಗೆ ತೆರಳಿಲ್ಲ. ವೈಯಕ್ತಿಕವಾಗಿ ಒಂದು ರು. ಕೂಡ ನೀಡಿಲ್ಲ. ಸಂತ್ರಸ್ತರ ಕುಟುಂಬದವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಕನಿಷ್ಠ ಪಕ್ಷ ಬಸ್ ಟಿಕೇಟಿನ ವ್ಯವಸ್ಥೆಯನ್ನಾದರೂ ಮಾಡಿ ಎಂದು ಕೇಳಿಕೊಂಡರೂ ವ್ಯವಸ್ಥೆ ಮಾಡಿಲ್ಲ ಎಂದರು.ಶಿರೂರು ಸಂತ್ರಸ್ತರ ಪರವಾಗಿ ಹೊನ್ನಾವರದಲ್ಲಿ ಇತ್ತೀಚೆಗೆ ನಡೆದ ನಮ್ಮ ಹೋರಾಟದಲ್ಲಿ ಎಸ್‌ಪಿ ಎಂ. ನಾರಾಯಣ ಅವರು ಸ್ಥಳೀಯ ಪಿಎಸ್ಐ ಮಹಾಂತೇಶ ನಾಯಕ ಅವರಿಗೆ ಒತ್ತಡ ಹಾಕಿ ನಾನು ಸೇರಿದಂತೆ 8 ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಈ ಕೇಸ್ ಹಾಕಲು ಸಚಿವ ಮಂಕಾಳ ವೈದ್ಯ ಅಥವಾ ಆರ್.ವಿ. ದೇಶಪಾಂಡೆ ಅವರೇ ಕಾರಣ ಎನ್ನಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಬೇಜವಾಬ್ದಾರಿತನ ತೋರಿದ್ದು, ತಕ್ಷಣ ಅವರನ್ನು ಅಮಾನತು ಮಾಡಬೇಕು. ಅರ್ಜುನನ ಶವ ಸಿಕ್ಕ ನಂತರ ಮಾರನೇ ದಿನವೇ ಡಿಎನ್ಎ ವರದಿ ಬಂದು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಆದರೆ ನಂತರ ಸಿಕ್ಕ ಎರಡು ಮೂಳೆಗಳ ವರದಿಗೆ ಬೇರೆ ಬೇರೆ ಕಾರಣ ಹೇಳಿ ವಿಳಂಬ ಮಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಾಟಕ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ ಎಂದು ಶ್ರೀಗಳು ಹೇಳಿದರು.ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ದಾಮೋದರ ನಾಯ್ಕ, ಹೊನ್ನಾವರ ತಾಲೂಕಾಧ್ಯಕ್ಷ ರಾಜೇಶ ನಾಯ್ಕ, ಮಹಾಮಂಡಳಿಯ ಉಪಾಧ್ಯಕ್ಷರಾದ ರಮೇಶ ಎಸ್. ನಾಯ್ಕ, ರಮೇಶ ಎನ್. ನಾಯ್ಕ, ಶ್ರೀಪಾದ ಟಿ. ನಾಯ್ಕ, ಸಂತ್ರಸ್ತ ಕುಟುಂಬದವರಾದ ವಿನೋದ ನಾಯ್ಕ, ತನುಜಾ ಗೌಡ, ಶ್ರೀನಿವಾಸ ನಾಯ್ಕ ಇತರರಿದ್ದರು.