ಹುಬ್ಬಳ್ಳಿ: ನಿರಂತರ ನೀರು ಪೂರೈಕೆ ಯೋಜನೆಯ ಪೈಪ್‌ಲೈನ್ ಕಾಮಗಾರಿ ವೇಳೆ ಮಣ್ಣು ಕುಸಿದು ಓರ್ವ ಕಾರ್ಮಿಕ ಮೃತಪಟ್ಟು ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಇಲ್ಲಿನ ಮಂಟೂರು ರಸ್ತೆಯಲ್ಲಿ ಮಂಗಳವಾರ ಮಂಗಳವಾರ ನಡೆದಿದೆ.
ಕಳೆದ ಕೆಲವು ದಿನಗಳಿಂದ ಇಲ್ಲಿ ಎಂಟು ಅಡಿ ಮಣ್ಣು ತೆಗೆದು, ಪೈಪ್ ಅಳವಡಿಕೆ ಕಾಮಗಾರಿ ನಡೆಯುತ್ತಿತ್ತು. ಚೇತನ ಜೊತೆ ಮತ್ತೊಬ್ಬ ಕಾರ್ಮಿಕ ಮೌಲಾಸಾಬ್ ಕೆಲಸ ಮಾಡುತ್ತಿದ್ದ. ಚೇತನ್ ಕೆಳಗೆ ಇಳಿದು ಮಣ್ಣು ತೆಗೆಯುತ್ತಿದ್ದಾಗ, ಏಕಾಏಕಿ ಮಣ್ಣು ಕುಸಿದು, ಅವರ ಮೇಲೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಎಲ್ ಆ್ಯಂಡ್ ಟಿ ಕಾಮಗಾರಿ ನಡೆಸುತ್ತಿದೆ. ಘಟನೆ ನಡೆದು ಐದು ತಾಸಾದರೂ, ಕಂಪನಿಯ ಯಾವೊಬ್ಬ ಅಧಿಕಾರಿಯೂ ಬಂದು ಪರಿಶಿಲನೆ ನಡೆಸಿಲ್ಲ. ಆಸ್ಪತ್ರೆಗೆ ಬಂದು, ಮೃತಪಟ್ಟ ಕಾರ್ಮಿಕನ ಕುಟುಂಬದವರ ಜೊತೆಗೂ ಮಾತನಾಡಿಲ್ಲ. ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅಮಾಯಕರು ಸಾಯುವಂತಾಗಿದೆ’ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ಶ್ರೀಧರ ಕಂದಗಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಶಾಸಕ ಮಹೇಶ ಟೆಂಗಿನಕಾಯಿ ಸಾಂತ್ವನ: ಮಂಟೂರ್ ರಸ್ತೆಯಲ್ಲಿ ಎಲ್ ಆ್ಯಂಡ್ ಟಿ ಜವಾಬ್ದಾರಿಯಲ್ಲಿ ನಡೆಯುತ್ತಿದ್ದ ಕಾಮಗಾರಿ ಸಂದರ್ಭದಲ್ಲಿ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವ ಚೇತನ ಜಾಧವ ಕುಟುಂಬಕ್ಕೆ ಶಾಸಕ ಮಹೇಶ ಟೆಂಗಿನಕಾಯಿ ಸಾಂತ್ವನ ಹೇಳಿದ್ದಾರೆ.
ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕಾರ್ಮಿಕನ ಆರೋಗ್ಯ ವಿಚಾರಿಸಿದರು. ಈ ವೇಳೆ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ, ಬಿಜೆಪಿ ಮುಖಂಡ ರವಿ ನಾಯಕ, ಸುಬ್ರಮಣ್ಯ ಶಿರಕೋಳ, ಕೃಷ್ಣ ಗಂಡಗಾಳೇಕರ್, ಪ್ರವೀಣ ಪವಾರ್ ಮತ್ತಿತರರು ಉಪಸ್ಥಿತರಿದ್ದರು.