ಕಲ್ಲುಗಣಿಗಾರಿಕೆ ವೇಳೆ ಅವಘಡ ಕಾರ್ಮಿಕ ಸಾವು

KannadaprabhaNewsNetwork |  
Published : Jun 07, 2025, 01:33 AM IST
6ಎಚ್ಎಸ್ಎನ್15ಎ : ಗುರುವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನಿಡಿದ್ದ ಜಿಲ್ಲಾಧಿಕಾರಿ ಸತ್ಯಭಾಮ. | Kannada Prabha

ಸಾರಾಂಶ

ಶಾಂತಿಗ್ರಾಮ ಹೋಬಳಿಯ ದುಮ್ಮಗೆರೆ ಗ್ರಾಮದಲ್ಲಿ ಬಂಡೆ ದೇವರಾಜು ಎಂಬುವವರಿಗೆ ಸೇರಿದ ನವ್ಯಶ್ರೀ ಗ್ರಾನೈಟ್ ಕಲ್ಲು ಕ್ವಾರಿಯಲ್ಲಿ ಜೂನ್ 5ರ ಬೆಳಗ್ಗೆ ಸಂಭವಿಸಿದ ಅವಘಡದಲ್ಲಿ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ತಮಿಳುನಾಡು ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಗಣಿ ಸ್ಫೋಟ ಪ್ರಕರಣ ಸಂಬಂಧಪಟ್ಟಂತೆ ಮಣಿ ಎಂಬ ಕಾರ್ಮಿಕ ಸಾವನ್ನಪ್ಪಿದ್ದು, ಉಳಿದ ನಾಲ್ಕು ಮಂದಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಹಾಸನತಾಲೂಕಿನ ಶಾಂತಿಗ್ರಾಮ ಹೋಬಳಿಯ ದುಮ್ಮಗೆರೆ ಗ್ರಾಮದಲ್ಲಿ ಬಂಡೆ ದೇವರಾಜು ಎಂಬುವವರಿಗೆ ಸೇರಿದ ನವ್ಯಶ್ರೀ ಗ್ರಾನೈಟ್ ಕಲ್ಲು ಕ್ವಾರಿಯಲ್ಲಿ ಜೂನ್ 5ರ ಬೆಳಗ್ಗೆ ಸಂಭವಿಸಿದ ಅವಘಡದಲ್ಲಿ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ತಮಿಳುನಾಡು ಮೂಲದ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ.ಈ ಎಲ್ಲಾ ಘಟನೆ ನಡೆದು ಹಲವು ಗಂಟೆಗಳ ನಂತರ ಅಂದರೆ ಜೂನ್ 5ರ ರಾತ್ರಿ ಹತ್ತು ಗಂಟೆಯಾದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಗುಪ್ತಚರ ಇಲಾಖೆಗೆ ಯಾವುದೇ ಮಾಹಿತಿ ದೊರೆಯದಿರುವುದು ಅಚ್ಚರಿಯ ಸಂಗತಿ.

ಕ್ವಾರೆಯಲ್ಲಿ ಮೇಸ್ತ್ರಿ ಪ್ರಕಾಶ್ ಎಂಬುವವರು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕೂಲಿ ಕೆಲಸಗಾರರನ್ನು ಕರೆತಂದು ಗ್ರಾನೈಟ್ ಕಲ್ಲು ತೆಗೆಯುವ ಕೆಲಸವನ್ನು ಮಾಡಿಸುತ್ತಿದ್ದರು. ಗುರುವಾರ ಬೆಳಗ್ಗೆ ಸುಮಾರು 11:30ರ ಸಮಯದಲ್ಲಿ ಸ್ಪೋಟಕವನ್ನು ಬಳಸಿ ದಪ್ಪ ಕಲ್ಲನ್ನು ಒಡೆಯುತ್ತಿದ್ದು ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಮೇಲೆ ಕಲ್ಲು ಬಿದ್ದು ಮೃತಪಡಬಹುದು ಎಂದು ಗೊತ್ತಿದ್ದರೂ ಸಹ ಬೇಜವಾಬ್ದಾರಿಯಿಂದ ಕಲ್ಲನ್ನು ಸ್ಫೋಟಿಸಿದಾಗ ಕಲ್ಲಿನ ಚೂರುಗಳು ಪಕ್ಕದಲ್ಲಿ ಕೆಲಸ ಮಾಡುತ್ತಿದ್ದ ಸೆಲ್ವನ್, ಏಳುಮಲೈ, ಸಿದ್ದರಾಜು, ಮಧುರೈ ಮುತ್ತು ಎಂಬುವವರ ಮೈ ಕೈಗೆ ತಗುಲಿ ಗಂಭೀರ ಗಾಯಗಳಾಗಿದ್ದು ಮತ್ತೆ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದವು. ಗಾಯಾಳುಗಳನ್ನು ಮಧ್ಯಾಹ್ನ ಹಾಸನ ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಗಾಯಾಳು ಮಣಿ ಮತ್ತು ಮತ್ತೊಬ್ಬನನ್ನು ಸಂಜೀವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಗಂಭೀರ ಗಾಯಗಳಾಗಿದ್ದರಿಂದ ಬೇರೆ ಆಸ್ಪತ್ರೆಗೆ ತೋರಿಸುವುದಾಗಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಣಿ ಎಂಬಾತ ಮೃತಪಟ್ಟಿದ್ದಾನೆ.

ಘಟನೆಗೆ ಕಾರಣಕರ್ತರಾದ ಟಿ ಎಸ್ ದೇವರಾಜು, ಟಿ ಡಿ ಅರ್ಜುನ್, ಶ್ರೀಧರ ಬಾಬು, ಕೃಷ್ಣಮೂರ್ತಿ ಹಾಗೂ ಪ್ರಕಾಶ್ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯವರಾದ ಜಿ ಶ್ರೀನಿವಾಸ್ ಅವರು ಶುಕ್ರವಾರ ಶಾಂತಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದರ ಮೇಲೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ಪದಾರ್ಥಗಳ ಅಧಿನಿಯಮ 1908ರಂತೆ ಪ್ರಕರಣ ದಾಖಲಾಗಿದೆ.

ನಾಲ್ಕು ಮಂದಿಗೆ ಚಿಕಿತ್ಸೆ:ಗಣಿ ಸ್ಫೋಟ ಪ್ರಕರಣ ಸಂಬಂಧಪಟ್ಟಂತೆ ಮಣಿ ಎಂಬ ಕಾರ್ಮಿಕ ಸಾವನ್ನಪ್ಪಿದ್ದು, ಉಳಿದ ನಾಲ್ಕು ಮಂದಿಯನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಗಣಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನ:

ಈ ಘಟನೆ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಜಿಲೆಟಿನ್ ಸ್ಫೋಟದಿಂದ ಸತ್ತ ವ್ಯಕ್ತಿಗಳ ಬಗ್ಗೆ ಮಾಹಿತಿ ಇಲ್ಲದಂತೆ ವರ್ತಿಸುತ್ತಿದ್ದು, ಈ ಹಿಂದೆಯೂ ಹಲವು ಪ್ರಕರಣಗಳಲ್ಲಿ ಜಿಲೆಟಿನ್ ಸ್ಫೋಟದಿಂದ ಹಾನಿಯಾಗಿದೆ. ಇದರಿಂದ ಹತ್ತಾರು ಮಂದಿಯ ಜೀವ ಕಳೆದುಕೊಂಡಿದ್ದಾರೆ. ಸ್ಫೋಟ ನಡೆದ ಸಂದರ್ಭದಲ್ಲಿ ಮಾತ್ರ ಗಣಿ ಸ್ಫೋಟದ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಕಾನೂನು ಪಾಲನೆ ಅರಿವಾಗುತ್ತದೆ. ಆದರೆ ನಂತರ ಮತ್ತದೇ ಉದಾಸೀನ ಧೋರಣೆ ಅನುಸರಿಸಲಾಗುತ್ತಿರುವುದೇ ಜಿಲ್ಲೆಯಲ್ಲಿ ಪದೇಪದೇ ಇಂತಹ ಅವಘಡಗಳು ಸಂಭವಿಸಲು ಕಾರಣವಾಗುತ್ತಿದೆ.

ಸ್ಫೋಟಕಗಳ ಬಳಕೆ ಕುರಿತು ಜಾಗೃತಿ ಇಲ್ಲ:

ಹಾಸನ ಜಿಲ್ಲೆಯಲ್ಲಿ ಜಿಲೆಟಿನ್ ಸ್ಫೋಟದಿಂದ ಹಲವು ಅನಾಹುತಗಳು ಸಂಭವಿಸಿದೆ. ಆದರೆ ಸ್ಫೋಟಕ್ಕೆ ಬಳಸುವ ವಸ್ತುಗಳ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸುವ ಕುರಿತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ನಿಯಮ ಪಾಲನೆ ಕುರಿತು ಗಣಿ ಉದ್ಯಮಿಗಳಿಗೆ ಜಾಗೃತಿ ಮೂಡಿಸುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಅನೇಕ ಜಿಲೆಟಿನ್ ಸ್ಫೋಟದಂತಹ ಪ್ರಕರಣಗಳು ನಡೆದಿದೆ.

ಈ ಹಿಂದೆ ಬೈಕ್‌ನಲ್ಲಿ ಜಿಲೆಟಿನ್ ಕಡ್ಡಿಗಳನ್ನು ಸಾಗಿಸುವ ವೇಳೆ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ಘಟನೆಯು ನಡೆದಿದೆ. ಹೊಳೆನರಸೀಪುರ ತಾಲೂಕಿನಲ್ಲಿ ಲಾರಿಯಲ್ಲಿ ಜಲಿಟಿನ್ ಕಡ್ಡಿಗಳನ್ನು ಸಾಗಿಸಿರುವ ಬಗ್ಗೆ ಮತ್ತು ಗಣಿಗಾರಿಕೆ ವೇಳೆ ಜಿಲೆಟಿನ್ ಸ್ಫೋಟಗೊಂಡು ಇಬ್ಬರು ಮೃತಪಟ್ಟಿದ್ದನ್ನು ಸ್ಮರಿಸಬಹುದು.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಇಂತಹ ಘಟನೆ ನಡೆದ ಸಂದರ್ಭದಲ್ಲಿ ಮಾತ್ರ ಕಾನೂನು ಪಾಲನೆಯ ನೆನಪಾಗುತ್ತದೆ. ನಂತರ ಇದು ಮರೆತು ಹೋಗುವುದು ವಿಪರ್ಯಾಸ. ಸ್ಫೋಟ ಸ್ಥಳಕ್ಕೆ ತಡರಾತ್ರಿ ಡಿಸಿ, ಎಸ್‌ಪಿ ದೌಡು:ಮಾಹಿತಿಯನ್ನಾಧರಿಸಿ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜಿತಾ ಸ್ಫೋಟದಿಂದ ಗಾಯಗೊಂಡಿರುವ ಕಾರ್ಮಿಕರನ್ನು ವೀಕ್ಷಿಸಲು ನಗರದ ಖಾಸಗಿ ಆಸ್ಪತ್ರೆಗೆ ತೆರಳಿದರು. ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಸ್ಫೋಟದ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಇಡೀ ಪ್ರದೇಶವನ್ನು ಪರಿಶೀಲನೆ ನಡೆಸಿದರು ಹಾಗೂ ಸ್ಥಳದಲ್ಲೇ ಇದ್ದ ಗಣಿ ಮಾಲೀಕರಿಂದ ಮಾಹಿತಿ ಪಡೆದು ಘಟನೆ ಸಂಬಂಧ ಅವರನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಐಜಿಪಿ ಭೇಟಿ:

ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಶಾಂತಿಗ್ರಾಮ ಸಮೀಪ ಗಣಿಗಾರಿಕೆ ವೇಳೆ ನಾಲ್ಕು ಮಂದಿ ಗಾಯಗೊಂಡ ನಾಲ್ಕು ಮಂದಿ ಪೈಕಿ ಓರ್ವನಾ ಸ್ಥಿತಿ ಚಿಂತ ಜನಕವಾಗಿದ್ದು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು. ಸ್ಫೋಟದ ನಂತರ ಘಟನೆ ನಡೆದಿದೆಯೋ ಅಥವಾ ಮಣ್ಣು ಕುಸಿತದಿಂದ ಅವಘಡ ಆಗಿದೆಯೇ ಎಂಬುದರ ಬಗ್ಗೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದರು. ಈ ಪ್ರಕರಣದಲ್ಲಿ ಓರ್ವ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿದರು.

* ಬಾಕ್ಸ್‌ ನ್ಯೂಸ್‌: ಪೊಲೀಸರ ತಂಡ ತಮಿಳುನಾಡಿಗೆ

ಗಣಿ ಸ್ಪೋಟ ನಂತರ ಮೃತಪಟ್ಟ ಚಾಮರಾಜನಗರದ ಕಾರ್ಮಿಕ ಮಣಿಯ ಶವವನ್ನು ತಮಿಳುನಾಡಿಗೆ ಕುಟುಂಬಸ್ಥರು ಕೊಂಡೊಯ್ಯದಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ಪೊಲೀಸ್ ಅಧಿಕಾರಿ ವಿನಯ್ ಹಾಗೂ ಇತರರ ತಂಡ ತಮಿಳುನಾಡಿಗೆ ತೆರಳಿದ್ದು ಅಲ್ಲಿನ ಪೊಲೀಸರ ಸಹಾಯದಿಂದ ಮಣಿಯ ಅಂತ್ಯಕ್ರಿಯೆಯನ್ನು ತಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ