ಕನ್ನಡಪ್ರಭ ವಾರ್ತೆ ತುಮಕೂರು
ಗುರುವಾರ ಕಟ್ಟಡ ಕಾರ್ಮಿಕರ ಬೇಡಿಕೆ ದಿನದ ಅಂಗವಾಗಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಟ್ಟಡ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ 1996 ರಲ್ಲಿ ಜಾರಿಗೆ ಬಂದ ಕಾಯ್ದೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ಈ ಕಾಯ್ದೆ ಕಾರ್ಮಿಕರ ವಿರುದ್ಧವಾಗಿ ತಿದ್ದಪಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗಾಗಿ ಮೀಸಲಿಟ್ಟಿರುವ ಹಣವನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಅನ್ಯ ಯೋಜನೆಗಳಿಗೆ ಬಳಸಬಾರದು. 1996ರ ಮೂಲ ಸೆಸ್ ಕಾಯ್ದೆ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಇರುವ 1 ಪರ್ಸೆಂಟ್ ಸಸ್ ಅನ್ನು 2 ಪರ್ಸೆಂಟ್‌ಗೆ ಹೆಚ್ಚಳ ಮಾಡಬೇಕು. ಹೆಚ್ಚಳ ಮಾಡಿದ ಸೆಸ್ ಹಣವನ್ನು ಕಾರ್ಮಿಕರ ಯೋಗಕ್ಷೇಮಕ್ಕೆ ಗಣನೀಯವಾಗಿ ಆರ್ಥಿಕ ಬೆಂಬಲ ವೃದ್ಧಿಸಲು ಬಳಕೆಯಾಗಬೇಕು ಎಂದರು.ಖಾಸಗಿ ಸೆಸ್ 10 ಲಕ್ಷ, ವಾಣಿಜ್ಯ ಸೆಸ್ 5 ಲಕ್ಷ ಸೆಸ್ ಸಂಗ್ರಹದ ಮಿತಿಯನ್ನು ಯಾವುದೇ ಕಾರಣಕ್ಕೂ ಹೆಚ್ಚಳ ಮಾಡಬಾರದು ಮತ್ತು ಒಳಾಂಗಣ ಅಲಂಕಾರಕ್ಕೂ ಸೆಸ್ ಸಂಗ್ರಹಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಮಂಡಳಿ ಸದಸ್ಯ ಗೋವಿಂದರಾಜು ಮಾತನಾಡಿ, ಈಗ ನಮ್ಮ ರಾಜ್ಯದಲ್ಲಿರುವ ತಿಂಗಳ 3 ಸಾವಿರ ಪಿಂಚಣಿಯನ್ನು ಕನಿಷ್ಠ 6 ಸಾವಿರಕ್ಕೆ ಹೆಚ್ಚಳ ಮಾಡಬೇಕು. ಕಾರ್ಮಿಕ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಮ್ಮ ಸಂಘಟನೆಯ ಸದಸ್ಯರನ್ನು ಎಲ್ಲಾ ರಾಜ್ಯದಲ್ಲಿ ಮಂಡಳಿ ಸದಸ್ಯರನ್ನಾಗಿ ನೇಮಿಸುವುದು. ಹಾಗೂ ಲಿಂಗ ಅಸಮಾನತೆಯನ್ನು ಹೋಗಲಾಡಿಸಿ ಹೆಣ್ಣು-ಗಂಡು ಎಂಬ ಬೇದ-ಭಾವವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದರು.
ಜಿಲ್ಲಾ ಖಜಾಂಚಿ ಅಶ್ವತ್ಥನಾರಾಯಣ ಮಾತನಾಡಿ, ಕಟ್ಟಡ ಕಾರ್ಮಿಕರ ಮಂಡಳಿಯನ್ನು ಕಾರ್ಮಿಕ ಕಾನೂನುಗಳು ತಿದ್ದುಪಡಿಯಾಗಿರುವ 4 ಕೋಡ್‌ಗಳಿಗೆ ವಿಲೀನ ಮಾಡಬಾರದು ಎಂದರು.