ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : Nov 18, 2026, 02:45 AM IST
ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು | Kannada Prabha

ಸಾರಾಂಶ

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮತ್ತು ಕಲ್ಯಾಣ ಮಂಡಳಿಯನ್ನು ಉಳಿಸಬೇಕೆಂದು ಆಗ್ರಹಿಸಿ ದೇಶವ್ಯಾಪಿ ಕರೆಯ ಭಾಗವಾಗಿ ಮಂಗಳೂರಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಿತು.

ಮಂಗಳೂರು : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಮತ್ತು ಕಲ್ಯಾಣ ಮಂಡಳಿಯನ್ನು ಉಳಿಸಬೇಕೆಂದು ಆಗ್ರಹಿಸಿ ದೇಶವ್ಯಾಪಿ ಕರೆಯ ಭಾಗವಾಗಿ ಮಂಗಳೂರಿನಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಯಿತು.

ನಗರದ ಕೆಪಿಟಿ ಜಂಕ್ಷನ್‌ನಿಂದ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿ, ಮಂಗಳೂರಿನ ಕಾರ್ಮಿಕ ಇಲಾಖೆಯ ಎದುರು ಪ್ರತಿಭಟನಾ ಸಭೆ ನಡೆಸಿ, ಕಾರ್ಮಿಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕಟ್ಟಡ ಕಾರ್ಮಿಕ ಸಂಘಟನೆ ಸಿಡಬ್ಲ್ಯೂಎಫ್‌ಐ-ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡಿ, ಕೇಂದ್ರ ಸರ್ಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996 ಮತ್ತು 29 ಕಾರ್ಮಿಕ ಕಾನೂನುಗಳನ್ನು ಕಾರ್ಮಿಕ ಸಂಹಿತೆಯ ಹೆಸರಿನಲ್ಲಿ ರದ್ದು ಮಾಡಿ, ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಮಾರಕ ಹೊಡೆತ ನೀಡಿದೆ. ಕೃಷಿಯ ನಂತರ ದೇಶದ ಎರಡನೇ ಅತಿದೊಡ್ಡ ಕಾರ್ಯಪಡೆ ಆಗಿರುವ ಕಟ್ಟಡ ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದೆ. ರಾಜ್ಯ ಸರ್ಕಾರ ಕೂಡ ಅದನ್ನೇ ಪುರಸ್ಕರಿಸುತ್ತಿದೆ. ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಅಖಿಲ ಭಾರತ ಫೆಡರೇಶನ್ ಕರೆಯಂತೆ ಇಂದು ದೇಶವ್ಯಾಪಿ ಹೋರಾಟ ಹಮ್ಮಿಕೊಂಡಿದ್ದು, ಮುಂದಿನ ಹೋರಾಟ ಡಿ. 1, 2, 3 ರಂದು ಕಾರ್ಮಿಕರ ಬೃಹತ್ ಪಾರ್ಲಿಮೆಂಟ್ ಚಲೋ ನಡೆಸಲಾಗುವುದು ಎಂದರು.ಬೇಡಿಕೆಗಳು:

ಕಾರ್ಮಿಕರಿಗೆ ಕಂಟಕವಾಗಿರುವ ಲೇಬರ್ ಕೋಡ್ ರದ್ದುಗೊಳಿಸಬೇಕು, 50 ಲಕ್ಷ ರು.ಗಿಂತ ಕಡಿಮೆ ವೆಚ್ಚದ ನಿರ್ಮಾಣ ಕಾಮಗಾರಿಗಳ ಕಾರ್ಮಿಕರನ್ನು ಕಲ್ಯಾಣ ಮಂಡಳಿಯಿಂದ ಹೊರಗಿಡುವ ನಿಯಮ ರದ್ದುಪಡಿಸಬೇಕು, ಸೆಸ್ ಸಂಗ್ರಹಕ್ಕೆ ಖಾತ್ರಿ ಹೇರುವ ಕೇಂದ್ರ ಸರ್ಕಾರದ ನಿಯಮ ರದ್ದುಪಡಿಸಬೇಕು, ಎಲ್ಲ ಮಹಿಳಾ ಕಾರ್ಮಿಕರಿಗೆ ಸಮಾನ ವೇತನ ಜಾರಿಯಾಗಬೇಕು, 26 ವಾರ ಹೆರಿಗೆ ರಜೆ ಮತ್ತು ಹೆರಿಗೆ ಸಹಾಯಧನ ಹೆಚ್ಚಳ, ಬಾಕಿ ಉಳಿಕೊಂಡಿರುವ ಶೈಕ್ಷಣಿಕ ಸಹಾಯಧನ ಪಾವತಿ ಮಾಡಬೇಕು ಮತ್ತು ಸಹಾಯಧನ ಮೊತ್ತ ಹೆಚ್ಚಿಸಿ, ಮಾಸಿಕ ಪಿಂಚಣಿಯನ್ನು 5,000 ರು.ಗೆ ಹೆಚ್ಚಿಸಬೇಕು, ವ್ಯವಸ್ಥೆಯ ತಪಾಸಣೆ ಹೆಸರಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆ ನಡೆಸಬೇಕು, ದುಬಾರಿ ವೆಚ್ಚದ ಕೌಶಲ್ಯ ಕೇಂದ್ರ ಮತ್ತು ವಸತಿ ಶಾಲೆ ನಿರ್ಮಾಣ ಯೋಜನೆ ಕೈಬಿಡಬೇಕು, ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಲು ಖಾಸಗಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಿರುವ ಕಾರ್ಮಿಕ ಸೇವಾ ಕೇಂದ್ರಗಳನ್ನು ರದ್ದು ಮಾಡದೇ ಹಳೆಯ ಪದ್ಧತಿಯನ್ನೇ ಮುಂದುವರಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನೆಯ ನೇತೃತ್ವವನ್ನು ನಗರ ಮುಖಂಡರಾದ ದಿನೇಶ್ ಶೆಟ್ಟಿ ಜಪ್ಪಿನಮೊಗರು, ಉಮೇಶ್ ಶಕ್ತಿನಗರ, ಅಶೋಕ್ ಶ್ರೀಯಾನ್, ಮೋಹನ್ ಜಲ್ಲಿಗುಡ್ಡೆ, ಕೇಶವ ಚೌಕ, ಅಶೋಕ್ ಸಾಲಿಯಾನ್‌ ಮತ್ತಿತರರು ವಹಿಸಿದ್ದರು. ರವಿಚಂದ್ರ ಕೊಂಚಾಡಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ
ವಿಶ್ವಮಟ್ಟದ ಶ್ರೇಷ್ಠ ವಾಸ್ತುಶಿಲ್ಪಗಳ ತಾಣ ವಿಜಯಪುರ