ಕಾರ್ಮಿಕರಿಗೆ ಕಾನೂನು ಅರಿವು ಇರಲಿ

KannadaprabhaNewsNetwork | Published : Feb 28, 2025 12:46 AM

ಸಾರಾಂಶ

ಪ್ರತಿಯೊಬ್ಬ ಕಾರ್ಮಿಕರು ಕಾನೂನುಗಳ ಕುರಿತು ಅರಿವು ಹೊಂದಿರಬೇಕು

ದಾಂಡೇಲಿ: ಕಾರ್ಮಿಕ ಕಾನೂನುಗಳನ್ನು ರೂಪಿಸಲಾಗಿದೆ. ಪ್ರತಿಯೊಬ್ಬ ಕಾರ್ಮಿಕರು ಕಾನೂನುಗಳ ಕುರಿತು ಅರಿವು ಹೊಂದಿರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ಹೇಳಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ಜಿಲ್ಲಾಡಳಿತ, ನ್ಯಾಯವಾದಿಗಳ ಸಂಘ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆಯ ಅಂಗವಾಗಿ ದಾಂಡೇಲಿ ಕಾರ್ಮಿಕ ಭವನದಲ್ಲಿ ಹಮ್ಮಿಕೊಂಡ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯ, ಲಿಂಗಾಧಾರಿತ ಅಸಮಾನತೆ, ಜಾತಿ ತಾರತಮ್ಯ, ನಿರುದ್ಯೋಗ, ಮಾನವ ಹಕ್ಕು, ಬಡತನ ಅನಕ್ಷರತೆ ನಿವಾರಿಸುವ ನಿಟ್ಟಿನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಕಾರ್ಮಿಕ ವರ್ಗವು ಅತಿ ಹೆಚ್ಚು ಶೋಷಣೆಗೆ ಒಳಗಾಗುತ್ತಿದೆ. ಇದನ್ನು ತಡೆಯುವ ಉದ್ದೇಶದಿಂದ ಕಾರ್ಮಿಕ ಕಾನೂನುಗಳನ್ನು ರೂಪಿಸಲಾಗಿದೆ ಎಂದರು.

ಕಾರವಾರದ ಜಿಲ್ಲಾ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯದರ್ಶಿ ದಿವ್ಯಶ್ರೀ ಸಿ. ಎಂ. ಲಿಂಗ, ಜಾತಿ, ನಿರುದ್ಯೋಗ, ಶಿಕ್ಷಣ ಸೇರಿದಂತೆ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ನೀಡಲು ಈ ಸಾಮಾಜಿಕ ನ್ಯಾಯ ಅವಶ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ದಾಂಡೇಲಿ ಸಿವಿಲ್ ನ್ಯಾಯಾಧೀಶ ಬಸಾಪುರ ಮಾತನಾಡಿ, ರಾಷ್ಟ್ರದ ಸುಧಾರಣೆಗೆ ಹಾಗೂ ಅಭಿವೃದ್ಧಿಗೆ ಕಾರ್ಮಿಕ ಕಾನೂನುಗಳ ಅಗತ್ಯವಾಗಿದೆ. ಇವುಗಳ ಪಾಲನೆ ಮತ್ತು ರಕ್ಷಣೆ ಅತ್ಯವಶ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಯಲ್ಲಾಪುರ ಉಪ ವಿಭಾಗದ ಕಾರ್ಮಿಕ ಅಧಿಕಾರಿ ವೀಣಾ ಮಾಸ್ತಿ, ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಕಾರ್ಮಿಕರ ಇಲಾಖೆ ಕಟಿಬದ್ಧವಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಕೊಡಲು ಇಲಾಖೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.

ದಾಂಡೇಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಚ್‌. ಎಸ್. ಕುಲಕರ್ಣಿ, ದಾಂಡೇಲಿ ಕಾರ್ಮಿಕ ನಿರೀಕ್ಷಕ ಚೇತನಕುಮಾರ .ಎಸ್. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹುಬ್ಬಳ್ಳಿಯ ವಕೀಲರಾದ ಆನಂದ ಪಿ. ಸೌದಿ, ಕಲ್ಪನಾ ಮಡಿವಾಳ, ಎಂ.ಸಿ. ಹೆಗಡೆ ಕೈಗಾರಿಕಾ ವಿವಾದ ಕಾಯಿದೆ, ಕನಿಷ್ಠ ವೇತನ ಕಾಯಿದೆ, ಮತ್ತು ಇತರೆ ಕಾರ್ಮಿಕ ಕಾನೂನುಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು.

ವಕೀಲರಾದ ರಾಘವೇಂದ್ರ ಗಡ್ಡಪನ್ನವರ ನಿರೂಪಿಸಿದರು. ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್. ಕುಲಕರ್ಣಿ ಸ್ವಾಗತಿಸಿದರು. ನ್ಯಾಯಾಧೀಶೆ ರೋಹಿಣಿ ಬಸಾಪುರ ವಂದಿಸಿದರು.

Share this article