ಕನ್ನಡಪ್ರಭ ವಾರ್ತೆ ಮಾನ್ವಿ
ಇಂದು ಕೃಷಿ ಸೇರಿದಂತೆ, ಕಾರ್ಖಾನೆಗಳಲ್ಲಿ ಆಧುನಿಕ ಸುಧಾರಿತ ಯಂತ್ರಗಳ ಬಳಕೆ ಹೆಚ್ಚುತ್ತಿದ್ದು, ಕಾರ್ಮಿಕರು ಕೂಡ ಹೆಚ್ಚಿನ ಕೌಶಲ್ಯಗಳನ್ನು ರೂಡಿಸಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದರಿಂದ ಹಾಗೂ ಸರ್ಕಾರದ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಂಡಲ್ಲಿ ಮಾತ್ರ ಜೀವನಮಟ್ಟ ಸುಧಾರಿಸುವುದಕ್ಕೆ ಸಾಧ್ಯ ಎಂದು ತಹಸೀಲ್ದಾರ್ ಜಗದೀಶ ಚೌರ್ ಹೇಳಿದರು.ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾನ್ವಿ ಎಪಿಎಂಸಿ ಹಾಗೂ ಗೋಡೌನ್ ಹಮಾಲಿ ಕಾರ್ಮಿಕರ ಸಂಘ, ಶ್ರೀ ಉದ್ಬವ ಆಂಜನೇಯ್ಯ ಹಮಾಲಿ ಕಾರ್ಮಿಕರ ಸಂಘ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ, ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ ಎಐಟಿಯುಸಿ ಸಂಯೋಜಿತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶ ನೈಸರ್ಗಿಕ ಸಂಪತ್ತು, ಮಾನವ ಸಂಪನ್ಮೂಲ, ಫಲವತ್ತದ ಕೃಷಿ ಭೂಮಿಯನ್ನು ಹೊಂದಿದ್ದರು ಕೂಡ ನಾವು ಅವುಗಳನ್ನು ಸರಿಯಾಗಿ ಬಳಸಿಕೊಳ್ಳದೆ ಇರುವುದರಿಂದ ನಮ್ಮ ದೇಶದ ಅಭಿವೃದ್ಧಿಯಲ್ಲಿ ಕುಂಠಿತ ಗೊಳ್ಳುತ್ತಿರುವುದು ವಿಷಾದಕಾರಿ ಸಂಗತಿಯಾಗಿದೆ ಎಂದರು.ಜಿಲ್ಲಾ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಶ್ರೀಶೈಲಾರೆಡ್ಡಿ ಮಾತನಾಡಿ, ದೇಶದ ಸಂವಿಧಾನದಲ್ಲಿ ಕಾರ್ಮಿಕರಿಗಾಗಿ ಅನೇಕ ಹಕ್ಕು ಮತ್ತು ಸೌಲಭ್ಯಗಳನ್ನು ನೀಡಿದ್ದು, ಅವುಗಳನ್ನು ಪಡೆಯುವುದಕ್ಕೆ ಕಾರ್ಮಿಕರು ಸಂಘಟಿತರಾಗಿ ಹೋರಾಟ ನಡೆಸಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದರು.
ತಾಲೂಕು ಕಾರ್ಮಿಕ ನಿರೀಕ್ಷಕ ಶಾಂತಮೂರ್ತಿ ಕಾರ್ಮಿಕರಿಗೆ ಇಲಾಖೆ ವತಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಕಾರ್ಮಿಕರು ವಿಶ್ವಕಾರ್ಮಿಕರ ದಿನಾಚರಣೆ ಅಂಗವಾಗಿ ಮೆರವಣಿಗೆ ನಡೆಸಿದರು.ಕಾರ್ಯಕ್ರಮದಲ್ಲಿ ಶಿವರಾಜ ವಕೀಲ್, ಸಿಂಧನೂರು ಎಐಟಿಯುಸಿ ಸಂಯೋಜಕರಾದ ಡಿ.ಎಚ್.ಕಂಬಳಿ, ಕೆಎಸ್ಆರ್‌ಟಿಸಿ ಜಿಲ್ಲಾ ಸಂಯೋಜಕ ಎಸ್.ಎಂ.ಫೀರಾ , ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಎಸ್.ಕ್ಯಾತ್ನಟಿ, ಎಂ.ಬಿ.ಸಿದ್ರಾಮಯ್ಯಸ್ವಾಮಿ, ದೇವರಾಜ, ಕರೆಪ್ಪ, ಕೃಷ್ಣನಾಯಕ, ಅಬ್ರಾಮ್, ಸಂಗಯ್ಯಸ್ವಾಮಿ ಚಿಂಚರಕಿ, ಅಂಗನವಾಡಿ ಫೇಡರೇಶನ್‌ನ ಅಧ್ಯಕ್ಷೆ ಚನ್ನಮ್ಮ ಸೇರಿದಂತೆ ನೂರಾರು ಕಾರ್ಮಿಕರು ಭಾಗವಹಿಸಿದರು.