ಕನ್ನಡಪ್ರಭ ವಾರ್ತೆ ಪಾವಗಡ
ತುಮುಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ಶಿರಾ ರಸ್ತೆಯ ತುಮಲ್ ಉಪ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ನನಗೆ ಮಾಹಿತಿಯೇ ಇರಲಿಲ್ಲ, ಸಹಕಾರ ಕ್ಷೇತ್ರದ ಬಗ್ಗೆ ನನಗೆ ಅಷ್ಟು ಅನುಭವ ಸಹ ಇಲ್ಲ. ಅನಿರೀಕ್ಷಿತ ಬೆಳವಣಿಗೆ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ರಾಜಕೀಯ ಗುರುಗಳಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಹಾಗೂ ನನ್ನ ಪೂಜ್ಯ ತಂದೆ ಮಾಜಿ ಸಚಿವರಾದ ವೆಂಕಟರಮಣಪ್ಪ ಅವರ ಕೃಪಾಶೀರ್ವಾದದಿಂದ ಸರ್ಕಾರ ನನ್ನನು ನಾಮ ನಿರ್ದೇಶನ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಚುನಾವಣೆ ನಡೆಸಿ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕ ಸಂಘಗಳ ಒಕ್ಕೂಟದ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದೆ. ಈ ದಿಢೀರ್ ಬೆಳವಣಿಗೆ ಅತ್ಯಂತ ಸಂತಸ ತಂದಿದ್ದು ಜಿಲ್ಲೆಯ ಎಲ್ಲಾ ಡೈರಿಯ ಪ್ರಗತಿ ಹಾಗೂ ರೈತರ ಪರ ಪ್ರಾಮಾಣಿಕ ಸೇವೆ ಮಾಡುವೆ. ನನ್ನ ತಂದೆ ಶಾಸಕರಾಗಿ ಸಚಿವರಾಗಿ ಮಾಡಿದ ಸೇವೆಯಿಂದ ನನಗೆ ಈ ಕೆಎಂಎಫ್‌ನ ಅಧ್ಯಕ್ಷರ ಭಾಗ್ಯ ಲಭಿಸಿದ್ದು ನನ್ನ ಆಯ್ಕೆಗೆ ಸಹಕರಿಸಿದ್ದ ರಾಜ್ಯ ಸರ್ಕಾರದ ಸಚಿವರು ಹಾಗೂ ತುಮುಲ್‌ನ ಎಲ್ಲಾ ನಿರ್ದೇಶಕರಿಗೆ ಅಭಾರಿಯಾಗಿದ್ದೇನೆ. ತಾಲೂಕಿನಲ್ಲಿ ಈಗ 60 ಡೈರಿಗಳಿದ್ದು, ಮುಂದಿನ ದಿನದಲ್ಲಿ ಇದನ್ನು ಡಬಲ್ ಮಾಡುವ ಇಚ್ಚೆ ಹೊಂದಲಾಗಿದೆ. ಗ್ರಾಮೀಣ ರೈತರ ಪ್ರಗತಿ ಹಿನ್ನೆಲೆಯಲ್ಲಿ ತುಮುಲಿನಿಂದ ಬರುವ ಎಲ್ಲಾ ಸೌಲಭ್ಯಗಳಲ್ಲಿ ಸಿಂಹಪಾಲನ್ನು ತಾಲೂಕಿಗೆ ತರುತ್ತೇನೆ. ಕಳೆದ 40 ವರ್ಷಗಳ ಇತಿಹಾಸದಲ್ಲಿ ಹಿಂದೂಳಿದ ವರ್ಗಗಳು ಹಾಗೂ ಅದರಲ್ಲೂ ಭೋವಿ ಸಮಾಜ ಹಾಗೂ ಗಡಿಭಾಗದ ತಾಲೂಕಿಗೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಪಟ್ಟ ಸಿಕ್ಕಿರಲಿಲ್ಲ. ಜಿಲ್ಲೆಯ ಹಿರಿಯ ನಾಯಕರ ಕೃಪೆಯಿಂದ ಈ ಹುದ್ದೆ ತಾಲೂಕಿಗೆ ಲಭಿಸಿದೆ. ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಮಾಡಲು ಬದ್ದರಿದ್ದು, ಯಾರ ವಿರುದ್ಧವೂ ದ್ವೇಷ ಸಾಧಿಸುವುದಿಲ್ಲ. ಅಭಿವೃದ್ಧಿ ಪರ ಕೆಲಸ ಮಾಡುವ ಮೂಲಕ ರೈತರ ಪ್ರಗತಿಗೆ ಹೆಚ್ಚು ಒತ್ತು ನೀಡಲಿದ್ದೇನೆ. ಚುನಾವಣೆ ವೇಳೆ ಚಂದ್ರಶೇಖರರೆಡ್ಡಿ ಪರ ಮತ ನೀಡಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶರನ್ನಾಗಿ ಆಯ್ಕೆ ಮಾಡಿದ ತಾಲೂಕಿನ ಡೈರಿ ಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಸ್ಥಳೀಯ ಹಾಲು ಡೈರಿಗಳಲ್ಲಿ ಅಧ್ಯಕ್ಷರ ಬದಲು ಕಾರ್ಯದರ್ಶಿಗಳೇ ಹೆಚ್ಚು ಅಧಿಕಾರ ಚಲಾಯಿಸುತ್ತಿದ್ದು ಅಧ್ಯಕ್ಷರನ್ನು ಸಹಿ ಮಾಡಲು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಈ ಪದ್ಧತಿ ಬದಲಾಗಬೇಕು. ಡೈರಿ ಕಾರ್ಯದರ್ಶಿ ಹಾಗೂ ಸೂಪರ್ ವೈಜರ್‌ಗಳು ಸ್ಥಳೀಯ ಹಾಲು ಉತ್ಪಾದಕರಿಗೆ ವಿನಾ ಕಾರಣ ಕಿರುಕುಳ , ದ್ರೋಹ, ಅವ್ಯವಹಾರ ಬಗೆದ ಬಗ್ಗೆ ನನ್ನ ಗಮನಕ್ಕೆ ಬಂದರೆ ಸಹಿಸುವುದಿಲ್ಲ. ಕ್ರಮಕ್ಕೆ ಶಿಫಾರಸ್ಸು ಮಾಡಲಿದ್ದೇನೆ. ಎಚ್ಚರಿಕೆಯಿಂದ ಕೆಲಸ ಮಾಡಿ ಡೈರಿಗಳ ಪ್ರಗತಿಗೆ ಸಹಕರಿಸುವಂತೆ ಕರೆ ನೀಡಿದರು.
ಈ ವೇಳೆ ಪುರಸಭೆಯ ಅಧ್ಯಕ್ಷ ಪಿ.ಎಚ್.ರಾಜೇಶ್, ಹಿರಿಯ ಮುಖಂಡರಾದ ಎ.ಶಂಕರರೆಡ್ಡಿ,ವೆಂಕಟಮ್ಮನಹಳ್ಳಿಯ ನಾಗೇಂದ್ರರಾವ್ (ನಾನಿ) ಪುರಸಭಾ ಸದಸ್ಯರಾದ, ತೆಂಗಿನಕಾಯಿ ರವಿ, ಮಾಜಿ ಎಪಿಎಂಸಿ ಅಧ್ಯಕ್ಷರಾದ ಕರೆಕ್ಯಾತನಹಳ್ಳಿಯ ಮಂಜುನಾಥ್, ಯಾದವ ಸಮಾಜದ ಮುಖಂಡ ನರಸಿಂಹಯ್ಯ,ಬ್ಯಾಡನೂರು ವೇಣುಗೋಪಾಲರೆಡ್ಡಿ, ವಡ್ಡರಹಟ್ಟಿಯ ದಾಸಭೋವಿ, ಪುರಸಭೆ ಸದಸ್ಯ ಮಹಮದ್ ಇಮ್ರಾನ್, ಮಾಜಿ ಗ್ರಾಪಂ ಅಧ್ಯಕ್ಷ ಬೊಮ್ಮತನಹಳ್ಳಿ ತಿಪ್ಪೆಸ್ವಾಮಿ, ಕನಿಕಲ ಬಂಡೆ ಅನಿಲ್ ಕುಮಾರ್, ಪಾವಗಡದ ಷಾಬಾಬು, ನ್ಯಾಯದಗುಂಟೆ ರೇವಣ್ಣ, ತಾಲೂಕು ಹಾಲು ಡೈರಿಯ ತನಿಖಾಧಿಕಾರಿ ಸುನಿತಮ್ಮ,ಹಾಗೂ ಇತರೆ ಅನೇಕ ಮಂದಿ ಮುಖಂಡರು ಉಪಸ್ಥಿತರಿದ್ದರು.