ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ “ಸುಟ್ಟ ಗಾಯಗಳ ಸಮಗ್ರ ಆರೈಕೆ ಮತ್ತು ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಬಗ್ಗೆ ” ಕಾರ್ಯಕ್ರಮ ಗುರುವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಸಭಾಂಗಣದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗ ಮತ್ತು ತುರ್ತು ಚಿಕಿತ್ಸಾ ವಿಭಾಗದ ಸಹಯೋಗದಲ್ಲಿ “ಸುಟ್ಟ ಗಾಯಗಳ ಸಮಗ್ರ ಆರೈಕೆ ಮತ್ತು ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಬಗ್ಗೆ ” ಕಾರ್ಯಕ್ರಮ ಗುರುವಾರ ನಡೆಯಿತು. ಉಪ ವಿಭಾಗಧಿಕಾರಿಯಾದ ನಿತಿನ್ ಚಕ್ಕಿ, ಅವರು ಮಾತನಾಡಿ ಸುಟ್ಟ ಗಾಯಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಚಿಕಿತ್ಸೆ ನೀಡುವುದು, ಸೋಂಕು ನಿಯಂತ್ರಣದ ಮಹತ್ವವನ್ನು ಒತ್ತಿ ಹೇಳಿದರು. ಆರಂಭಿಕ ಚಿಕಿತ್ಸೆಯಿಂದ ಪುನರ್ವಸತಿ ವರೆಗೆ ವ್ಯವಸ್ಥಿತ ರೀತಿಯ ನಿರ್ವಹಣೆ ಬಗ್ಗೆ ಚರ್ಚೆ ಪ್ರಾಯೋಗಿಕವಾಗಿ ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.ಮಿಸ್ ಟೀನ್ ಯೂನಿವರ್ಸ್ ಇಂಡಿಯಾ 2024 ಕರಿಸ್ಸಾ ಬೋಪಣ್ಣ ಅವರು ತಮ್ಮ ಫ್ಯಾಷನ್ ಡಿಸೈನಿಂಗ್ ವಿದ್ಯಾಭ್ಯಾಸದ ಅನುಭವ ಹಂಚಿಕೊಂಡು, ವೈದ್ಯಕೀಯ ವಿದ್ಯಾರ್ಥಿಗಳ ಪರಿಶ್ರಮವನ್ನು ಶ್ಲಾಘಿಸಿದರು. ಜೀವನದಲ್ಲಿ ಮನಸ್ಸು ಕುಗ್ಗಿದಾಗ ವೈದ್ಯಕೀಯ ಕ್ಷೇತ್ರವನ್ನು ಆಯ್ಕೆ ಮಾಡಿದ ಉದ್ದೇಶವನ್ನು ನೆನಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಮತ್ತು ನಿರ್ದೇಶಕರಾದ ಡಾ.ಲೋಕೇಶ್ ಎ.ಜೆ. ಪ್ರಾಂಶುಪಾಲರಾದ ಡಾ.ವಿಶಾಲ್ ಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ನಂಜುಂಡಯ್ಯ, ಸಮುದಾಯ ವೈದ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ರಾಮಚಂದ್ರ ಕಾಮತ್, ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ.ಪ್ರವೀಣ್ ಕುಮಾರ್, ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ.ಮೋಹನ್ ಅಪ್ಪಾಜಿ, ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಅಭಿನಂದನ್, ಸ್ಥಾನೀಯ ವೈದ್ಯಾಧಿಕಾರಿಗಳಾದ ಡಾ.ಧನಂಜಯ ಕುಮಾರ್ ಅವರು ನೆರವೇರಿಸಿದರು.ಟ್ರಸ್ಟ್ವೆಲ್ ಆಸ್ಪತ್ರೆಯ ಓರೋ-ಫೇಷಿಯಲ್ ಮತ್ತು ಪ್ಲಾಸ್ಟಿಕ್ ಸರ್ಜರಿ ಸಲಹೆಗಾರರಾದ ಡಾ. ವಿಶ್ವಾಸ್ ವಿಜಯದೇವ್ ಅವರು “ಮುಖದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಯ ಒಳನೋಟಗಳು” ವಿಷಯದ ಕುರಿತು ಉಪನ್ಯಾಸ ನೀಡಿದರು. ಎರಡನೇ ಅಧಿವೇಶನದಲ್ಲಿ ಈ ಸಂಸ್ಥೆಯ ಸಾಮಾನ್ಯ ಶಸ್ತ್ರಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಎಸ್ ಅವರು “ಸುಟ್ಟ ಗಾಯಗಳ ಪ್ರಾಥಮಿಕ ಮೌಲ್ಯಮಾಪನ ಮತ್ತು ತುರ್ತು ನಿರ್ವಹಣೆ” ಕುರಿತು ಮಾತನಾಡಿದರು.ಟ್ರಸ್ಟ್ವೆಲ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಸಲಹೆಗಾರರಾದ ಡಾ.ನಿಕಿತಾ ರೋಲೆಕರ್ ಅವರು “ಸುಟ್ಟ ಗಾಯಗಳ ಗಾಯ ನಿರ್ವಹಣೆ, ದಹನಾನಂತರ ಉಂಟಾಗುವ ಕಾಂಟ್ರಾಕ್ಚರ್‌ಗಳ ತಡೆಗಟ್ಟುವಿಕೆ ಹಾಗೂ ನಿರ್ವಹಣೆ” ಕುರಿತು ವಿವರಿಸಿದರು.ಕೆವಿಜಿ ವೈದ್ಯಕೀಯ ಕಾಲೇಜು, ಸುಳ್ಯ ಅವರ ಶಿಶು ಚಿಕಿತ್ಸಾ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಗೌರವ್ ಅವರು “ಮಕ್ಕಳ ಸುಟ್ಟ ಗಾಯಗಳ ಆರೈಕೆ” ಕುರಿತು ಉಪನ್ಯಾಸ ನೀಡಿದರು.ಸಿದ್ಧಾರ್ಥ ವೈದ್ಯಕೀಯ ಕಾಲೇಜು ತುಮಕೂರು ಶಿಶು ಶಸ್ತ್ರಚಿಕಿತ್ಸಾ ವಿಭಾಗದ ಡಾ.ನಿಜಗಲ್ ಮುತ್ತನ್ ಜೆ.ಬಿ. ಅವರು “ ಸುಟ್ಟ ಗಾಯಗೊಂಡ ಮಕ್ಕಳಿಗೆ ಶಸ್ತ್ರಚಿಕಿತ್ಸಾ ಆರೈಕೆ” ಕುರಿತು ಮಾತನಾಡಿದರು.
ನಾರಾಯಣ ಆಸ್ಪತ್ರೆಯ ಪ್ಲಾಸ್ಟಿಕ್ ಮತ್ತು ರಿಕನ್‌ಸ್ಟ್ರಕ್ಟಿವ್ ಸರ್ಜರಿ ಸಲಹೆಗಾರರಾದ ಡಾ.ಸುನಿಲ್ ಕುಮಾರ್ ಎಂ ಅವರು “ ಸುಟ್ಟ ಗಾಯಗಳ ವಾರ್ಡ್ ಮತ್ತು ಸುಟ್ಟ ಗಾಯಗಳ ಕೇಂದ್ರ– ಸಂಸ್ಥೆಯ ಗುಣಮಟ್ಟದ ಸೂಚಕ” ವಿಷಯದ ಕುರಿತು ವಿವರಿಸಿದರು.ನಂತರ ಕೊ.ವೈ.ವಿ.ಸಂಸ್ಥೆ ಮಡಿಕೇರಿಯಲ್ಲಿ ಆಂಕಾಲಜಿ ವಿಭಾಗದ ಉದ್ಘಾಟನೆಯು ಡಾ.ದಿವಿಯಾ ಕರಿಯಪ್ಪ ಹಾಗೂ ಡಾ. ಮುಖೇಶ್ ಅವರಿಂದ ನೆರವೇರಿತು.ಮುಂದಿನ ಅಧಿವೇಶನದಲ್ಲಿ ಟ್ರಸ್ಟ್ವೆಲ್ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ.ರವಿಕುಮಾರ್ ಅವರು “ರೋಬೋಟಿಕ್ ಆಂಕೋ-ಯೂರಾಲಜಿ” ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯ ವೈದ್ಯರು ಇತರೆ ಜಿಲ್ಲೆಯ ಆಸ್ಪತ್ರೆಗಳ ವೈದ್ಯರು ಸ್ನಾತಕೋತ್ತರ ವೈದ್ಯರು, ಇಂಟರ್ನ್ಸ್ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.