ಕಾರವಾರ: ದೇಶ, ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದು ಸಾಬೀತಾಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ, ರಾಜ್ಯ ನಾಯಕರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಇಡೀ ದೇಶ ಹಾಗೂ ರಾಜ್ಯದಲ್ಲಿ ಬಲಿಷ್ಠ ಸಂಘಟನೆಯಾಗಿದೆ. ನಮ್ಮ ಸಂಘಟನೆ ಮತ್ತಿಷ್ಟು, ಇನ್ನಷ್ಟು ಶಕ್ತಿಯುತವಾಗಬೇಕು. ಆ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡುವಂತಾಗಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕರೆ ನೀಡಿದರು.
ಮುಂಬರುವ ಜಿಪಂ, ತಾಲೂಕಾ ಪಂಚಾಯಿತಿ ಮತ್ತು ಸ್ಥಳೀಯ ಚುನಾವಣೆಗಳನ್ನು ಗೆಲ್ಲಲು, ನಮ್ಮ ಕಾರ್ಯಕರ್ತರು ತಳಮಟ್ಟದವರೆಗೂ ಹೋಗಿ ಪಕ್ಷಕ್ಕೆ ಶಕ್ತಿ ನೀಡಬೇಕು ಕಾರ್ಯಕರ್ತರನ್ನು ವಿನಂತಿಸಲಾಯಿತು.
ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಭಾರತೀಯ ಜನತಾ ಪಕ್ಷ ನಿಷ್ಠಾವಂತ ಹಾಗೂ ಸಕ್ರಿಯ ಕಾರ್ಯಕರ್ತರ ಶ್ರಮದ ದ್ಯೋತಕವಾಗಿ ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಈ ಶ್ರೇಯಸ್ಸಿನ ಹಿಂದೆ ಪ್ರತಿಯೊಬ್ಬ ಕಾರ್ಯಕರ್ತನ ಬೆವರು ಇದೆ. ಬದ್ಧತೆ ಇದೆ. ನಮ್ಮ ಸಂಘಟನೆ ಇನ್ನಷ್ಟು ಬಲಯುತವಾಗಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಬರಲಿರುವ ಪ್ರತಿಯೊಂದು ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಕಾರ್ಯಕರ್ತರು ಪಕ್ಷಕ್ಕೆ ಆಧಾರಸ್ತಂಭ ಇದ್ದಂತೆ. ಪಕ್ಷ ಇನ್ನಷ್ಟು ಶಕ್ತಿಯುತವಾಗಬೇಕು. ಮುಂಬರುವ ಎಲ್ಲ ಚುನಾವಣೆಗಳಲ್ಲೂ ಪಕ್ಷ ಅಭೂತಪೂರ್ವ ಸಾಧನೆ ಮಾಡಬೇಕು. ಇದಕ್ಕಾಗಿ ನಿಮ್ಮೆಲ್ಲರ ಕೊಡುಗೆ ಬಹುಮುಖ್ಯವಾದುದು ಎಂದರು.