ಡಿಸೆಂಬರ್‌ ೩೧ರಂದು ಮೈಸೂರಿನಲ್ಲಿ ವಿಶ್ವ ರೈತ ದಿನಾಚರಣೆ: ಹಳ್ಳಿಕೆರೆಹುಂಡಿ ಭಾಗ್ಯರಾಜ್

KannadaprabhaNewsNetwork | Published : Dec 28, 2024 12:45 AM

ಸಾರಾಂಶ

ಮೈಸೂರಿನ ಕಲಾಮಂದಿರದಲ್ಲಿ ಡಿ.31ರಂದು ವಿಶ್ವ ರೈತ ದಿನಾಚರಣೆ ಹಮ್ಮಿಕೊಂಡಿದ್ದು ಇಲ್ಲಿ ರೈತರ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು. ಚಾಮರಾಜನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಮೈಸೂರಿನ ಕಲಾಮಂದಿರದಲ್ಲಿ ಡಿ.31ರಂದು ವಿಶ್ವ ರೈತ ದಿನಾಚರಣೆ ಹಮ್ಮಿಕೊಂಡಿದ್ದು ಇಲ್ಲಿ ರೈತರ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರ ಸಂಘದ ಸಂಯುಕ್ತಾಶ್ರಯದಲ್ಲಿ ಡಿ.೩೧ರಂದು ಮೈಸೂರಿನ ಕಲಾಮಂದಿರದಲ್ಲಿ ಬೆಳಗ್ಗೆ ೧೧ ಗಂಟೆಗೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಕೃಷಿ, ಅರಣ್ಯ, ಸಕ್ಕರೆ ಸಚಿವರು ರೈತ ದಿನಾಚರಣೆಯ ಹಬ್ಬದಲ್ಲಿ ಭಾಗವಹಿಸುವರು. ಈ ಒಂದು ದಿನದ ರೈತ ಸಮಾವೇಶದಲ್ಲಿ ರೈತರ ವಿವಿಧ ಹಕ್ಕೊತ್ತಾಯಗಳಾದ ರೈತರ ಸಂಪೂರ್ಣ ಸಾಲಮನ್ನಾ, ಕೇಂದ್ರ ಮತ್ತು ರಾಜ್ಯ ಸರ್ಕಾರ, ಎಸ್ ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು.

ಪ್ರಸಕ್ತ ಸಾಲಿನ ಕಬ್ಬಿಗೆ ೫೫೦೦ ಪ್ರತಿ ಟನ್‌ಗೆ ಬೆಲೆ ನಿಗದಿ, ಕಳೆದ ಸಾಲಿನ ೯೫೦ ಕೋಟಿಯಷ್ಟು ಕಬ್ಬಿನ ಬಾಕಿ ರೈತರಿಗೆ ತಕ್ಷಣ ಕೊಡಿಸಬೇಕು, ಕೃಷಿ ಪಂಪ್ ಸೆಟ್ಟು ಗಳಿಗೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಟಿಸಿ ಕಂಬವನ್ನು ಮೊದಲು ನೀಡುತ್ತಿದ್ದಂತೆಯನ್ನು ಮುಂದುವರಿಸಬೇಕು. ಭತ್ತದ ಬೆಲೆ ಕುಸಿತವಾಗಿದ್ದು ಪ್ರತಿ ಕ್ವಿಂಟಲ್‌ಗೆ ಕೇಂದ್ರ ಸರ್ಕಾರದ ಎಂಎಸ್‌ಪಿ ಜೊತೆ ರಾಜ್ಯ ಸರ್ಕಾರ ೫೦೦ ರು. ಹೆಚ್ಚುವರಿ ಪ್ರೋತ್ಸಾಹ ಧನ, ರೈತರ ಆಸ್ತಿಗಳ ಮೇಲೆ ವಕ್ಫ್ ದಾಖಲೆ ರದ್ದುಗೊಳಿಸಿ ಉಳುವ ರೈತನಿಗೆ ಭೂಮಿಯ ಒಡೆತನದ ಹಕ್ಕನ್ನು ದಾಖಲೆಯಲ್ಲಿ ಸರಿಪಡಿಸಬೇಕು,

ಬಿಪಿಎಲ್ ಕಾರ್ಡ್ ರದ್ದತಿ ಕೈಬಿಡಬೇಕು, ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಹೊಂದುವ ರೈತರ ಕುಟುಂಬಕ್ಕೆ ವೈಜ್ಞಾನಿಕ ಬೆಳೆ ನಷ್ಟ ನೀಡಬೇಕು, ಬಗರ್ ಹುಕುಂ ಸಾಗುವಳಿದಾರರಿಗೆ ಸಮಸ್ಯೆ ಬಗೆಹರಿಸಿ ಸಾಗುವಳಿ ಚೀಟಿ ನೀಡುವಂತಾಗಬೇಕು, ಕೆಐಡಿಬಿ ಮೂಲಕ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿಪಡಿಸಿ ಬಂಡವಾಳ ಶಾಹಿಗಳಿಗೆ ನೀಡುತ್ತಾರೆ. ಆದರೆ ರೈತಭೂಮಿಯ ಮಾಲೀಕತ್ವವನ್ನು ಕಳೆದುಕೊಳ್ಳುತ್ತಾನೆ ಆದಕಾರಣ ರೈತರನ್ನು ಜಂಟಿ ಮಾಲೀಕತ್ವವನ್ನು ಸೃಷ್ಟಿಸಬೇಕು ಎಂದರು.

ವಿವಿಧ ಹಕ್ಕೊತ್ತಾಯಗಳಿಗೆ ಒತ್ತಾಯ: ರೈತರ ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರನ್ನು ಪರಿಗಣಿಸಬಾರದು. ರಾಜ್ಯದ ನೀರಾವರಿ ಯೋಜನೆಗಳಾದ ಮಹದಾಯಿ ಮತ್ತು ಮೇಕೆದಾಟು ಯೋಜನೆಯನ್ನು ತಕ್ಷಣ ಪರಿಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಖಾಸಗಿ ಫೈನಾನ್ಸ್ ಗಳ ಹಾವಳಿ ಗ್ರಾಮೀಣ ಮಟ್ಟದಲ್ಲಿ ಜಾಸ್ತಿಯಾಗಿದ್ದು ಸರ್ಕಾರ ಮಧ್ಯಪ್ರವೇಶ ಮಾಡಿ ಈ ಕಿರುಕುಳದಿಂದ ರೈತರನ್ನು ಮತ್ತು ರೈತ ಮಹಿಳೆಯರನ್ನು ರಕ್ಷಿಸಬೇಕು. ಆನ್‌ಲೈನ್ ಗೇಮ್‌ನಿಂದಾಗಿ ರೈತರು ಹಾಗೂ ರೈತ ಮಕ್ಕಳು ರೈತ ಕುಟುಂಬ ಬೀದಿಗೆ ಬಂದಂತಾಗಿದೆ. ಆದ್ದರಿಂದ ಆನ್ಲೈನ್‌ ಗೇಮ್‌ ಅನ್ನು ತಕ್ಷಣ ನಿಲ್ಲಿಸಬೇಕು. ರಾಜ್ಯದಲ್ಲಿ ಮೊದಲು ಇದ್ದಂತಹ ವಿದ್ಯಾನಿಧಿ ಯೋಜನೆಯನ್ನು ಯಥಾಸ್ಥಿತಿ ಮುಂದುವರಿಸಬೇಕು ಈ ಹಕ್ಕೊತ್ತಾಯಗಳನ್ನು ಸಮಾವೇಶದಲ್ಲಿ ನಿರ್ಣಯಿಸಿ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ರಾಜ್ಯದ ರೈತರು ಸ್ವಯಂ ಪ್ರೇರಿತರಾಗಿ ಮೈಸೂರಿನ ರೈತ ದಿನಾಚರಣೆ ಸಮಾವೇಶ ಹಬ್ಬಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹಾಲಿನ ನಾಗರಾಜ್ , ರಾಜ್ಯ ಪ್ರ.ಕಾರ್ಯದರ್ಶಿ ಮಲಿಯೂರು ಹರ್ಷ, ಮಹೇಂದ್ರ, ಉಡಿಗಾಲ ಮಂಜುನಾಥ್, ಪ್ರವೀಣ್ , ಪ್ರಕಾಶ್ ಗಾಂದಿ ಇದ್ದರು.

Share this article