ಬೆಂಗಳೂರು : ಅಖಿಲ ಹವ್ಯಕ ಮಹಾಸಭಾ ವತಿಯಿಂದ ಡಿ.27, 28 ಮತ್ತು 29ರಂದು ನಗರದ ಅರಮನೆ ಮೈದಾನದ ರಾಯಲ್ ಸೆನೆಟ್ ಹಾಗೂ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಆಯೋಜಿಸಿರುವ ತೃತೀಯ ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ ವಿವಿಧ ಕ್ಷೇತ್ರಗಳ 567 ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಮಹಾಸಭಾ ಅಧ್ಯಕ್ಷ ಡಾ.ಗಿರಿಧರ್ ಕಜೆ ತಿಳಿಸಿದರು.
ಶನಿವಾರ ಹವ್ಯಕ ಭವನದಲ್ಲಿ ಸಮ್ಮೇಳನ ಕುರಿತು ಮಾಹಿತಿ ನೀಡಿದ ಅವರು, ಮಹಾಸಭೆಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ಚಾರಿತ್ರಿಕವಾಗಿ ಸಮ್ಮೇಳನ ನಡೆಯಲಿದ್ದು, ಹವ್ಯಕ ಸಮುದಾಯ ಮಾತ್ರವಲ್ಲದೇ ಬೇರೆ ಸಮುದಾಯಗಳ ಮುಖಂಡರು, ನಾಯಕರು, ಸಂತಶ್ರೇಷ್ಠರು ಸಾನ್ನಿಧ್ಯ ವಹಿಸಲಿದ್ದಾರೆ. ದೇಶ-ವಿದೇಶಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ಹವ್ಯಕ ಸಂಸ್ಕೃತಿಯ ಅನಾವರಣವಾಗಲಿದೆ ಎಂದು ತಿಳಿಸಿದರು.
ಡಿ.27ರಂದು ರಾಘವೇಶ್ವರಭಾರತೀ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಅನೇಕ ಸಂತರ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದೆ. ಡಿ.28ರಂದು ನಡೆಯುವ ಸಾಕ್ಷಾತ್ಕಾರ ಸಭಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರುತ್ತಾರೆ. ಡಿ.29ರಂದು ಸಂಜೆ ನಡೆಯುವ ಸಮಾರಂಭದಲ್ಲಿ ಸಹಸ್ರಚಂದ್ರ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ಗಿರಿಧರ ಕಜೆ ವಿವರಿಸಿದರು.
6000 ಪುಸ್ತಕಗಳ ಪ್ರದರ್ಶನ:
ಮೂರು ದಿನ 300ಕ್ಕೂ ಅಧಿಕ ಸುಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈಭವ, ಹಳ್ಳಿಸೊಗಡಿನ ಆಲೇಮನೆ, 100ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಪ್ರದರ್ಶನ, ದೇಶಿ ಗೋಪ್ರದರ್ಶಿನಿ, 6000 ಹವ್ಯಕ ಕನ್ನಡ ಪುಸ್ತಕಗಳ ಪ್ರದರ್ಶನ, 108 ವರ್ಷಗಳ ಪಂಚಾಂಗ ದರ್ಶನ, ವೈಭವದ ಗಾಯತ್ರೀ ಥೀಮ್ ಪಾರ್ಕ್, ವೈವಿಧ್ಯಮಯ ಧಾರ್ಮಿಕ ಕಾರ್ಯಕ್ರಮಗಳು, 2000 ಕಿ.ಮೀ ದೂರದಿಂದ ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ಸಮಗ್ರ ಅಡಿಕೆ ಪ್ರದರ್ಶನ ಇರಲಿದೆ ಎಂದು ಗಿರಿಧರ ಕಜೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ಉಪಾಧ್ಯಕ್ಷ ಶ್ರೀಧರ್ ಭಟ್, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ್, ಕಾರ್ಯದರ್ಶಿ ಪ್ರಶಾಂತ್ ಭಟ್, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.
ಪ್ರತಿ ಕ್ಷೇತ್ರದಿಂದ ತಲಾ
81 ಸಾಧಕರ ಗುರುತು
ಕೃಷಿಯಲ್ಲಿ ಸಾಧನೆ ಮಾಡಿದ 81 ಕೃಷಿಕರು, 81 ವೈದಿಕರು, 81 ಶಿಕ್ಷಕರು, 81 ವಿದ್ಯಾರ್ಥಿಗಳು, 81 ಹವ್ಯಕ ಯೋಧರು ಹಾಗೂ 81 ಸ್ಪೂರ್ತಿ ಚೇತನರಿಗೆ ಮತ್ತು ಇನ್ನಿತರ ಕ್ಷೇತ್ರಗಳ 81 ಸಾಧಕರು ಸೇರಿ ಒಟ್ಟು 567 ಸಾಧಕರಿಗೆ ಸನ್ಮಾನಿಸಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಸಮಾಜದ ಗಣ್ಯರನ್ನು ಗೌರವಿಸಲಾಗುತ್ತದೆ ಎಂದು ಡಾ.ಗಿರಿಧರ್ ಕಜೆ ತಿಳಿಸಿದರು.
ಸರ್ವ ಸಮಾಜದವರಿಗೂ ಮುಕ್ತ ಅವಕಾಶ: ಕಜೆ
100 ವಿಷಯಗಳ ಚಿಂತನ ಮಂಥನ, ಚಿತ್ರಕಲೆ, ಛಾಯಾಚಿತ್ರ ಸೇರಿದಂತೆ ವೈವಿಧ್ಯಮಯ ಸ್ಪರ್ಧೆಗಳು, ಕರಕುಶಲ ವಸ್ತುಗಳ ಪ್ರದರ್ಶನ, ಹವ್ಯಕ ಶೈಲಿಯ 100ಕ್ಕೂ ಅಧಿಕ ಹವಿಸವಿಯ ಪಾಕೋತ್ಸವ ಆಹಾರ ಮೇಳ, 91 ಹವಿ ತಿನಿಸುಗಳ ಮಾರಾಟ ಮಳಿಗೆಗಳು ಇರಲಿವೆ. ಸಮ್ಮೇಳನಕ್ಕೆ ಸರ್ವ ಸಮಾಜದವರಿಗೂ ಮುಕ್ತ ಅವಕಾಶವಿದೆ. ಹವ್ಯಕ ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸಿಲ್ಲ ಎಂದು ಗಿರಿಧರ ಕಜೆ ತಿಳಿಸಿದರು.