- ಕ.ಸಾ.ಪದಿಂದ ಕುವೆಂಪು ನುಡಿ ನಮನ ಕಾರ್ಯಕ್ರಮಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಜಗದ ಕವಿ, ಯುಗದ ಕವಿಯಾಗಿ ಕುವೆಂಪು ಅವರು ನೀಡಿದ ವಿಶ್ವ ಮಾನವ ಸಂದೇಶ ಇಂದಿಗೂ ಪ್ರಸ್ತುತ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಹೇಳಿದರು.ಪತ್ರಿಕಾ ಭವನದಲ್ಲಿ ಕಸಾಪ ತಾಲೂಕು ಹಾಗೂ ಹೋಬಳಿ ಘಟಕದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕುವೆಂಪು ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಮಾನವೀಯತೆ ಮರೆಯಾಗುತ್ತಿದೆ. ಮನುಷ್ಯತ್ವಕ್ಕೆ ಬೆಲೆ ಇಲ್ಲದಂತಾಗಿದೆ. ರಾಜ್ಯದಲ್ಲಿ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕಾರ್ಯ ವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಕನ್ನಡ ನಾಡಿನಲ್ಲಿ ಕನ್ನಡ ಉಳಿಸಲು ಹೋರಾಟ ಮಾಡಬೇಕಾಗಿರುವುದು ವಿಪರ್ಯಾಸ ಎಂದರು.
ಕಸಾಪ ಪೂರ್ವಾಧ್ಯಕ್ಷ ಎಸ್.ಎಸ್.ಸಂತೋಷ್‌ಕುಮಾರ್ ಮಾತನಾಡಿ, ಕುವೆಂಪು ವಿಶ್ವಮಾನವ ಸಂದೇಶ ಸಾರಿದ್ದಾರೆ. ಅವರ ಸಂದೇಶದಲ್ಲಿರುವ ಮಾನವೀಯ ಗುಣಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಜಾತ್ಯಾತೀತ ಮನೋಭಾವ ಬೆಳೆಸಿಕೊಳ್ಳಬೇಕು. ಕುವೆಂಪು ಅವರ ಸಾಹಿತ್ಯ ಎಂದಿಗೂ ಶಾಶ್ವತವಾಗಿ ಉಳಿಯುತ್ತವೆ. ಇಂದು ಎಲ್ಲಾ ಕ್ಷೇತ್ರದಲ್ಲೂ ಅಧರ್ಮ ತಾಂಡವವಾಡುತ್ತಿದೆ. ಕುವೆಂಪು ನಮ್ಮ ಜಲ್ಲೆಯಲ್ಲಿ ಜನಿಸಿದ್ದಾರೆ ಎಂಬುದೇ ನಮಗೆ ಹೆಮ್ಮೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಹೋಬಳಿ ಘಟಕದ ಅಧ್ಯಕ್ಷೆ ಜುಬೇದಾ ಮಾತನಾಡಿ, ಇಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಜಾತಿ, ಧರ್ಮಗಳ ವಿರುದ್ಧ ಸಂದೇಶ ಹರಿಬಿಟ್ಟು ದೇಶದಲ್ಲಿ ಅಶಾಂತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ದೇಶದಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವುದರಲ್ಲಿ ಯುವಕರ ಪಾತ್ರ ಮುಖ್ಯ. ಕರ್ನಾಟಕಲ್ಲಿ ಎಲ್ಲಾ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆಯಲ್ಲಿ ರಬೇಕು ಎಂದು ಸರ್ಕಾರ ಆದೇಶ ಸರ್ಕಾರ ಮಾಡಿದೆ ಎಂದರು.
ಕಸಾಪ ನಗರ ಘಟಕ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ಕುವೆಂಪು ನಮ್ಮ ಮಲೆನಾಡಿನವರು ಎಂಬುದೇ ನಮಗೆ ಹೆಮ್ಮೆ. ಅವರು ನಡೆದಾಡುವ ಸಾಹಿತ್ಯ ಭಂಡಾರವಾಗಿದ್ದರು. ಜಾತಿ, ಧರ್ಮದ ಎಲ್ಲೆ ಮೀರಿ ಬೆಳೆದವರು. ಎಲ್ಲರೂ ಗೌರವ ನೀಡುವ ನಾಡ ಗೀತೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ ನಾಮ ಫಲಕದ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರ ಶ್ಲಾಘನೀಯ ಎಂದರು.ಕಾರ್ಯಕ್ರಮದಲ್ಲಿ ಪತ್ರಕರ್ತ ಎಂ.ಸಿ.ಗುರುಶಾಂತಪ್ಪ ಹಾಗೂ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹೋಬಳಿ ಘಟಕದ ಕಾರ್ಯದರ್ಶಿ ವಾಣಿ ನರೇಂದ್ರ, ಸಹ ಕಾರ್ಯದರ್ಶಿ ಶೃತಿ ಗುರು ಶಾಂತಪ್ಪ, ಕಸಾಪ ಪದಾಧಿಕಾರಿಗಳಾದ ಸುಚಿತ್ರಾ, ಬಿ.ನಂಜುಂಡಪ್ಪ, ಜಯಣ್ಣ, ದೇವರಾಜ್, ಸೈಯದ್ ಸಮೀರ್, ಭಾನು, ನಾಗರಾಜ್, ಅಬ್ರಾಹಂ, ಕೆ.ಗಂಗಾಧರ್, ರಘು, ಜಿ.ಪುರುಶೋತ್ತಮ್ ಮತ್ತಿತರರು ಉಪಸ್ಥಿತರಿದ್ದರು.