ಮೇ 7ರಿಂದ ವಿಶ್ವ ಕನ್ನಡ ಸಮ್ಮೇಳನ, ವಸ್ತು ಪ್ರದರ್ಶನ: ವಾಮದೇವಪ್ಪ

KannadaprabhaNewsNetwork | Published : Mar 15, 2025 1:02 AM

ಸಾರಾಂಶ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕನ್ನಡಿಗರ ಟ್ರಸ್ಟ್‌, ವಿಕಾಸ್ ಎಕ್ಸ್‌ಪೋ ಜಂಟಿಯಾಗಿ ಅಂತರ ರಾಷ್ಟ್ರೀಯ ಕನ್ನಡ ಸಮ್ಮೇಳನ ಹಾಗೂ ವಸ್ತು ಪ್ರದರ್ಶನ ನಗರದ ಜಿಎಂಐಟಿ ಕಾಲೇಜು ಪಕ್ಕದ ಮೈದಾನದಲ್ಲಿ ಮೇ 7ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ವಿಶ್ವ ಕನ್ನಡಿಗರ ಟ್ರಸ್ಟ್‌, ವಿಕಾಸ್ ಎಕ್ಸ್‌ಪೋ ಜಂಟಿಯಾಗಿ ಅಂತರ ರಾಷ್ಟ್ರೀಯ ಕನ್ನಡ ಸಮ್ಮೇಳನ ಹಾಗೂ ವಸ್ತು ಪ್ರದರ್ಶನ ನಗರದ ಜಿಎಂಐಟಿ ಕಾಲೇಜು ಪಕ್ಕದ ಮೈದಾನದಲ್ಲಿ ಮೇ 7ರಿಂದ 12ರವರೆಗೆ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ದಿನಗಳ ಸಮ್ಮೇಳನದಲ್ಲಿ ನಿತ್ಯವೂ ವಿಶಿಷ್ಟವಾಗಿ ಕಾರ್ಯಕ್ರಮ ನಡೆಯಲಿವೆ. ದಾವಣಗೆರೆಯಲ್ಲಿ 3ನೇ ವಿಶ್ವ ಕನ್ನಡ ಸಮ್ಮೇಳನ ನಡೆಯಬೇಕೆಂಬ ಆಸೆಗೆ ಪೂರಕವಾಗಿ ಸಮ್ಮೇಳನ ನಡೆಯಲಿದೆ ಎಂದರು.

ಮೇ 7ರಂದು ಸಾಹಿತ್ಯ , 8ರಂದು ಯು ಟ್ಯೂಬರ್ಸ್‌, 9ರಂದು ಶಿಕ್ಷಣ, 10ರಂದು ಸಿನಿ ಸಾಹಿತ್ಯ, 11ರಂದು ಕೃಷಿ ಮತ್ತು 12ರಂದು ಉದ್ಯೋಗ ಮೇಳ ನಡೆಯಲಿದೆ. ಕನ್ನಡ ಸಾಹಿತ್ಯಲೋಕಕ್ಕೆ ಹೊಸ ಸಾಹಿತಿಗಳನ್ನು ಪರಿಚಯಿಸುವ ಸದುದ್ದೇಶದಿಂದ ನವಲೇಖಕರ ಮೇಳ, ಸಾಮಾಜಿಕ ಮಾಧ್ಯಮ ಬರಹಗಾರರ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

5ಕ್ಕಿಂತ ಕಡಿಮೆ ಪುಸ್ತಕ ರಚಿಸಿದವರನ್ನು ನವಲೇಖಕರೆಂದು ಪರಿಗಣಿಸಲಾಗುತ್ತದೆ. ಪುಸ್ತಕ ರಚನೆ, ಪ್ರಕಾಶನ ಮಾಡುವ ಬಗ್ಗೆಯೂ ವಿಚಾರ ಗೋಷ್ಠಿ, ತರಬೇತಿ ಆಯೋಜಿಲಾಗುವುದು. ಶಿಕ್ಷಣ ಸಮ್ಮೇಳನದಲ್ಲಿ ಶಿಕ್ಷಕರಾಗಿ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಗುವುದು. ಮಾದರಿ ಶಿಕ್ಷಕರು ಹೇಗಿರಬೇಕೆಂಬ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ಜಾನಪದ, ಸಿನಿಮಾ, ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳ ರಚನೆ ಸೇರಿದಂತೆ ಎಲ್ಲಾ ಹಂತದ ಸಾಹಿತ್ಯ ಮೇಳ, ಇತರೆ ವಿಚಾರಗಳ ಗೋಷ್ಠಿ ನಡೆಯಲಿವೆ ಎಂದರು.

ರಾಜ್ಯದ ಕೇಂದ್ರ ಬಿಂದುವೆಂಬ ಕಾರಣಕ್ಕೆ ದಾವಣಗೆರೆಯಲ್ಲಿ ಅಂತರ ರಾಷ್ಟ್ರೀಯ ಕನ್ನಡ ಸಮ್ಮೇಳನ ಆಯೋಜಿಸಲಾಗುತ್ತಿದೆ. ಇದರೊಂದಿಗೆ ರಾಜ್ಯ, ರಾಷ್ಟ್ರದಲ್ಲಷ್ಟೇ ಅಲ್ಲ, ವಿಶ್ವ ಭೂಪಟದಲ್ಲಿ ಈ ಊರು ಗುರುತಿಸಿಕೊಳ್ಳಲಿದೆ. ಪುಸ್ತಕ ಮಳಿಗೆ, ಅಂತರ ರಾಷ್ಟ್ರೀಯ ವಸ್ತು ಪ್ರದರ್ಶನ, ಕೃಷಿ ಮಳಿಗೆಗಳು, ಶಾಲಾ-ಕಾಲೇಜುಗಳ ಸಾಮಗ್ರಿ ಕುರಿತಂತೆ ಪ್ರದರ್ಶನ ನಡೆಯಲಿದೆ ಎಂದು ಬಿ.ವಾಮದೇವಪ್ಪ ಮಾಹಿತಿ ನೀಡಿದರು.

ಹಿರಿಯ ಜಾನಪದ ಗಾಯಕ ಗುರುರಾಜ ಹೊಸಕೋಟೆ, ಆನಂದ ಗೌಡ, ಬಿ.ದಿಳ್ಯಪ್ಪ, ಸುಮತಿ ಜಯಪ್ಪ, ರುದ್ರಾಕ್ಷಿ ಬಾಯಿ, ಎಸ್.ವಾಣಿ, ಜಿಗಳಿ ಪ್ರಕಾಶ ಇತರರು ಇದ್ದರು.

Share this article