ಕನ್ನಡಪ್ರಭವಾರ್ತೆ ಚಿತ್ರದುರ್ಗಸೊಳ್ಳೆ ತಾಣಗಳ ನಾಶ ಮಾಡುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ ಗಿರೀಶ್ ಹೇಳಿದರು. ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆ ದಿನದಲ್ಲಿ ಮಾತನಾಡಿದ ಅವರು, ವಿಶ್ವ ಸೊಳ್ಳೆ ದಿನವೆಂದರೆ ಹಬ್ಬದಂತೆ ಆಚರಿಸುವ ಸಂಭ್ರಮವಲ್ಲ. ಇದು ಕೀಟಜನ್ಯ ರೋಗಗಳ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.
ಆ.20, 1897 ರಂದು ರೋನಾಲ್ಡ್ ರಾಸ ಅವರು ಮಲೇರಿಯಾ ರೋಗ ಹೆಣ್ಣು ಅನಾಫೀಲಿಸ್ ಸೊಳ್ಳೆಗಳಿಂದ ಹರಡುತ್ತದೆ ಎಂದು ಪತ್ತೆ ಹಚ್ಚಿದ ದಿನ ಇಂದು. ಹಾಗಾಗಿ ಪ್ರತಿ ವರ್ಷ ಆಗಸ್ಟ್ 20ನೇ ತಾರೀಕಿನಂದು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಸೊಳ್ಳೆ ದಿನವೆಂದು ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ ಮಾತನಾಡಿ, ಭಾರತ ದೇಶವು 4151 ಸೊಳ್ಳೆ ಪ್ರಭೇದಗಳ ದೇಶವಾಗಿದೆ. ಈ ಸಣ್ಣ ಜೀವಿಗಳು ನಮ್ಮ ದೇಹಕ್ಕೆ ಎಂತಹ ಅಪಾಯ ಉಂಟು ಮಾಡುತ್ತವೆ ಎಂದರೆ ಮಲೇರಿಯಾ, ಚಿಕನ್‌ಗುನ್ಯಾ, ಡೆಂಗ್ಯೂ, ಜಿಕಾ ದಂತಹ ಮಾರಣಾಂತಿಕ ರೋಗಗಳನ್ನು ಹರಡುತ್ತವೆ. ಸೊಳ್ಳೆಗಳ ನಿಯಂತ್ರಣ ಮಾಡದಿದ್ದಲ್ಲಿ ಮುಂದೊಂದು ದಿನ ದೊಡ್ಡ ಮಟ್ಟದ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಕಾಡಬಹುದು ಎಂದರು.ಸೊಳ್ಳೆಗಳ ನಿಯಂತ್ರಣದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೈ ಜೋಡಿಸಿ ಕೀಟಜನ್ಯ ರೋಗಗಳನ್ನು ನಿಯಂತ್ರಿಸಬೇಕು. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಇನ್ ಸ್ಟಾಗ್ರಾಮ್, ಟ್ವಿಟರ್ ಪೇಜ್ ಬಳಸಿ ರೀಲ್ಸ್, ಸಣ್ಣಕತೆಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದಲ್ಲಿ ಉತ್ತಮ ರಚನೆಗೆ ಬಹುಮಾನ ನೀಡಲಾಗುತ್ತದೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ವೈದ್ಯಾಧಿಕಾರಿ ಡಾ. ಸುರೇಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣಾನಾಯ್ಕ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಸುರೇಶ್ ಬಾಬು, ಶ್ರೀನಿವಾಸ್, ಮಲ್ಲಿಕಾರ್ಜುನ ಶ್ರೀನಿವಾಸ ಮಳಲಿ, ಗುರುಮೂರ್ತಿ, ನಾಗರಾಜ್, ಪ್ರವೀಣ್, ಪ್ರಾಂಶುಪಾಲ ನರಸಿಂಹ ಮೂರ್ತಿ, ಉಪನ್ಯಾಸಕರಾದ ಕೃಷ್ಣ, ವಿ. ಚನ್ನಬಸಪ್ಪ, ಎನ್. ರಾಘವೇಂದ್ರ, ಡಾ. ಮೋಹನ್, ತಿಪ್ಪೇಸ್ವಾಮಿ ಇದ್ದರು.