ವಿಶ್ವ ಶಾಂತಿಗೆ ಮಹಾವೀರರ ತತ್ವ ಪಾಲನೆ ಅಗತ್ಯ

KannadaprabhaNewsNetwork |  
Published : Apr 11, 2025, 12:32 AM IST
ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶೋಭಾಯಾತ್ರೆಯನ್ನು ಪ್ರೊ. ಸಿದ್ದು ಆಲಗೂರ ಉದ್ಘಾಟಿಸಿದರು | Kannada Prabha

ಸಾರಾಂಶ

ಇಂದು ವಿಶ್ವದ ಹಲವು ದೇಶಗಳಲ್ಲಿ ಯುದ್ದ ನಡೆಯುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಅಹಿಂಸೆ ಪ್ರತಿಪಾದಿಸಿದ ಮಹಾವೀರರ ತತ್ವಗಳನ್ನು ನಾವು ಅಳವಡಿಸಿಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಬೆಳಗಾವಿ

ಭಗವಾನ ಮಹಾವೀರರ ತತ್ವಾದರ್ಶಗಳ ಪಾಲನೆಯಿಂದಾಗಿ ವಿಶ್ವದಲ್ಲಿ ಶಾಂತಿ ಸ್ಥಾಪಿಸಬಹುದು. ಇಂದಿನ ಜೀವನ ಶೈಲಿಯಲ್ಲಿ ಮಹಾವೀರರ ತತ್ವಾದರ್ಶಗಳು ಪ್ರಸ್ತುತವಾಗಿದ್ದು, ಅವುಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕೇರಳದ ಕೇಂದ್ರಿಯ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಅಲಗೂರ ಹೇಳಿದರು.

ನಗರದಲ್ಲಿ ಗುರುವಾರ ಭಗವಾನ ಮಹಾವೀರ ಜನ್ಮಕಲ್ಯಾಣಕ ಮಹೋತ್ಸವ ಸಮಿತಿಯಿಂದ ಹಮ್ಮಿಕೊಳ್ಳಲಾದ ಶೋಭಾಯತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಇಂದು ವಿಶ್ವದ ಹಲವು ದೇಶಗಳಲ್ಲಿ ಯುದ್ದ ನಡೆಯುತ್ತಿದೆ. ವಿಶ್ವದಲ್ಲಿ ಶಾಂತಿ ನೆಲೆಸಬೇಕಾದರೆ ಅಹಿಂಸೆ ಪ್ರತಿಪಾದಿಸಿದ ಮಹಾವೀರರ ತತ್ವಗಳನ್ನು ನಾವು ಅಳವಡಿಸಿಕೊಂಡರೆ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.

ಜಿಲ್ಲಾಧಿಕಾರಿ ಮೊಹ್ಮದ ರೋಷನ್‌ ಮಾತನಾಡಿ, ವಿಶ್ವದ ಅತ್ಯಂತ ಶಾಂತಿ ಪ್ರೀಯ ಸಮಾಜ ಅಂದರೆ ಅದು ಜೈನ ಸಮಾಜ. ಸಹಲಶೀಲತೆ, ಅಹಿಂಸೆ, ಯಾರಿಗೂ ತೊಂದರೆ ಕೊಡದೆ ಸಕಲರಿಗೂ ಒಳ್ಳೆಯದನ್ನು ಬಯಸುವ ಧರ್ಮ ಜೈನ ಧರ್ಮವಾಗಿದೆ ಎಂದರು.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಹುಬ್ಬಳ್ಳಿಯ ಶಿಕ್ಷಣ ತಜ್ಞ ಮಹೇಶ ಶಿಂಘ್ವಿ ಮಾತನಾಡಿ, ಇಂದು ಜೈನ ಸಮಾಜ ಅಲ್ಪಸಂಖ್ಯಾತರಲ್ಲಿ ಅಲ್ಪವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜ ಹೆಚ್ಚಾಗಿ ಒಟ್ಟಾಗುತ್ತಿದೆ. ನಿನ್ನೆಯ ದಿನ ಜಿತೋ ಸಂಸ್ಥೆಯಿಂದ ಆಯೋಜಿಸಲಾದ ವಿಶ್ವ ನವಕಾರ ದಿವಸ ಆಚರಣೆ ಸಂದರ್ಭದಲ್ಲಿ ಎಲ್ಲ ಜೈನ ಸಮುದಾಯ ಒಗ್ಗಟ್ಟಾಗಿತ್ತು. ಈ ಒಗ್ಗಟ್ಟನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕಾಗಿದೆ. ಸಾಮಾಜಿಕ ಮತ್ತು ರಾಜಕೀಯವಾಗಿ ನಾವು ಎಲ್ಲರೂ ಒಂದಾಗಬೇಕಾಗಿದೆ ಎಂದರು.

ಭಾರತೀಯ ರೈಲು ಇಲಾಖೆಯ ಹಿರಿಯ ಅಧಿಕಾರಿ ಅಜಯ ಜೈನ ಮಾತನಾಡಿ, ಬೆಳಗಾವಿಯಲ್ಲಿ ಜೈನ ಸಮಾಜದ ಎಲ್ಲ ಪಂಗಡಗಳು ಒಟ್ಟಾಗಿ ಸೇರಿ ಮಹಾವೀರರ ಜನ್ಮ ಕಲ್ಯಾಣಕ ಮಹೋತ್ಸವ ಆಚರಿಸುತ್ತವೆ. ಇಲ್ಲಿನ ಮಹೋತ್ಸವದ ಆಚರಣೆ ಇಡೀ ದೇಶಕ್ಕೆ ಮಾದರಿಯಾಗಿದ್ದು, ಇದೇ ತರಹ ಮುಂದೆವರೆಯಲಿ ಎಂದರು. ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಮೇಯರ್‌ ಮಂಗೇಶ ಪವಾರ ಮಾತನಾಡಿ ಮಹಾವೀರ ಜನ್ಮಕಲ್ಯಾಣ ಬೆಳಗಾವಿಯಲ್ಲಿ ಅದ್ಧೂರಿಯಾಗಿ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ. ಎಲ್ಲರು ಶಾಂತಿ ಮತ್ತು ಅಹಿಂಸೆ ತತ್ವ ಪಾಲಿಸೋಣ ಎಂದರು.

ವೇದಿಕೆ ಮೇಲೆ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಉಪ ಮೇಯರ್‌ ವಾಣಿ ವಿಲಾಸ ಜೋಶಿ, ಬಿಜೆಪಿ ಧುರಿಣರಾದ ಎಂ.ಬಿ.ಝೀರಲಿ, ಕೆಪಿಸಿಸಿ ಸೆಕ್ರೆಟರಿ ಸುನಿಲ ಹನಮಣ್ಣವರ, ಮನೋಜ ಸಂಚೇತಿ, ಭರತೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ಉದ್ಯಮಿ ಸಚಿನ ಪಾಟೀಲ, ನಗರ ಸೇವಕರಾದ ಜಯತೀರ್ಥ ಸವದತ್ತಿ, ಸಂತೋಷ ಪೆಡನೇಕರ ಸೇರಿ ಇತರರಿದ್ದರು. ಸಂಗಿತಾ ಕಟಾರಿಯಾ ನಮೋಕಾರ ಮಂತ್ರ ಪಠಣ ಮಾಡಿದರು. ಪ್ರಿಯಂಕಾ ಜುಟ್ಟಿಂಗ ಸ್ವಾಗತ ಗೀತೆ ಹಾಡಿದರು. ರಾಜೇಂದ್ರ ಜೈನ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕ್ರಮ ಜೈನ ಸ್ವಾಗತಿಸಿದರು.

ಭಗವಾನ ಮಹಾವೀರ ಮಹೋತ್ಸವದ ಶೋಭಾಯಾತ್ರೆಯು ಟಿಳಕಚೌಕದಿಂದ ಪ್ರಾರಂಭಗೊಂಡು ಶೇರಿ ಗಲ್ಲಿ, ಮಠ ಗಲ್ಲಿ, ಕಪಿಲೇಶ್ವರ ಸೇತುವೆ, ಎಸ್‌ಪಿಎಂ ರಸ್ತೆ, ಶಹಾಪುರ ಕೋರೆ ಗಲ್ಲಿ, ಗೋವಾವೇಸ ಮೂಲಕ ಮಹಾವೀರ ಭವನದ ಬಳಿ ಮುಕ್ತಾಯಗೊಂಡಿತು. ಮಹಾವೀರ ಭವನದಲ್ಲಿ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾ.ನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು
ವಜ್ರ, ಚಿನ್ನ ಪತ್ತೆಗೆ 6.71 ಲಕ್ಷ ಹೆಕ್ಟೇರ್‌ ಭೂ ಗುರುತು