ಕನ್ನಡಪ್ರಭ ವಾರ್ತೆ ಪಾಂಡವಪುರ
ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಜಿ.ಆರ್.ಲಿಖಿತ ‘ನಾನು ವಿಜ್ಞಾನಿ-2025’ ಕಾರ್ಯಕ್ರಮದಲ್ಲಿ ವಿಶ್ವದಾಖಲೆ ಮಾಡಿ ರಾಜ್ಯಪಾಲರಿಂದ ಪದಕ ಪಡೆದುಕೊಂಡಿದ್ದಾರೆ.ಕೆ.ಆರ್.ಪೇಟೆ ತಾಲೂಕಿನ ಗುಡುಗನಹಳ್ಳಿ ರಮೇಶ್ ಹಾಗೂ ಕಾಳಮ್ಮರ ಪುತ್ರಿ ಜಿ.ಆರ್.ಲಿಖಿತ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಪಾಂಡವಪುರದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಆಶ್ರಯದಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ ನಾನು ವಿಜ್ಞಾನಿ 2025 ಕಾರ್ಯಕ್ರಮದಲ್ಲಿ ಹಲವರ ಮಾರ್ಗದರ್ಶನದಲ್ಲಿ ಅತ್ಯುತ್ತಮ ಗುಣಮಟ್ಟದ ದೂರದರ್ಶಕ ತಯಾರಿಕೆ ಮಾಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್, ಏಷ್ಯಾ ಬುಕ್ ಆಫ್ ರೆಕಾರ್ಡ್ ಮಾಡಿದ್ದಾರೆ.
ಈ ಸಾಧನೆಗೆ ರಾಜ್ಯಪಾಲರಾದ ಥಾವರ್ ಚೆಂದ್ ಗೆಹ್ಲೋಟ್ ಅವರು ಲಿಖಿತಗೆ ಅಭಿನಂದನೆ ಸಲ್ಲಿಸಿ ವಿಶ್ವ ದಾಖಲೆಯ ಪದಕ ಪ್ರದಾನ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಹೆಸರಾಂತ ಮಾಜಿ ಇಸ್ರೋದ ಅಧ್ಯಕ್ಷ ಡಾ.ಎ.ಎಸ್ .ಕಿರಣ್ ಕುಮಾರ್, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹಾಗೂ ರಾಜ್ಯ ವೈಜ್ಞಾನಿಕ ಪರಿಷತ್ತಿನ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್ ಮತ್ತಿತರರು ಹಾಜರಿದ್ದರು.ಕಾರ್ಯಕ್ರಮವು ವಿಜ್ಞಾನಿಗಳನ್ನು ಉತ್ತೇಜಿಸುವ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಹಾಗೂ ಲಿಖಿತ್ ಜಿ.ಆರ್.ರವರು ಜಿಲ್ಲೆಗೆ ಹಾಗೂ ನಮ್ಮ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದು ಉಪ ಪ್ರಾಂಶುಪಾಲ ಎನ್.ಮಹದೇವಪ್ಪ ಅಭಿನಂದಿಸಿದ್ದಾರೆ.
ಶಾಲೆ ಶಾಲಾ ಶಿಕ್ಷಕರಾದ ಚಂಪಾ, ಕರಿಮುನ್ನಿಷ, ಆರ್.ಸಿ,ನಾಗೇಗೌಡ ಶೋಭಾ ತಿ.ಪವರ್, ಜಯರಾಮ ಕೆ.ಎನ್.ಸೌಮ್ಯಾ, ಲತಾ, ಸವಿತಾ, ಎಸ್.ಟಿ. ಶ್ರೀವೇಣಿ, ಚೆನ್ನೇಗೌಡ, ಮಹೇಶ, ಸಿ.ಕಾರ್ತಿಕ್, ಎಸ್ ಡಿಎಂಸಿ ಅಧ್ಯಕ್ಷ ಹಾರೋಹಳ್ಳಿ ಮಾಕೇಗೌಡ ಅಭಿನಂದಿಸಿದ್ದಾರೆ.