ವಿಶ್ವದ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರಧ್ವಜ ಅನಾವರಣ

KannadaprabhaNewsNetwork |  
Published : Dec 10, 2025, 01:00 AM IST
ಖಾದಿ ರಾಷ್ಟ್ರಧ್ವಜ ಅನಾವರಣ. | Kannada Prabha

ಸಾರಾಂಶ

ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದ್ವಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಚರಕ ತಿರುಗಿಸುವ ಮೂಲಕ ಮಂಗಳವಾರ ಅನಾವರಣಗೊಳಿಸಿದರು.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದ್ವಾರದಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಚರಕ ತಿರುಗಿಸುವ ಮೂಲಕ ಮಂಗಳವಾರ ಅನಾವರಣಗೊಳಿಸಿದರು. ಈ ರಾಷ್ಟ್ರಧ್ವಜ 75 ಅಡಿ ಉದ್ದ ಹಾಗೂ 55 ಅಡಿ ಅಗಲವಿದೆ.

ಈ ವೇಳೆ, ಈ ರಾಷ್ಟ್ರಧ್ವಜ ನೇಯ್ಗೆ ಮಾಡಿದ ಕಲಬುರಗಿ ಜಿಲ್ಲೆ ಕಮಲಾಪುರದ ವಿನೋದಕುಮಾರ ರೇವಪ್ಪ ಬೊಮ್ಮಣ್ಣವರ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಸಿದ್ದರಾಮಯ್ಯ, ಖಾದಿಯು ಕೇವಲ ವಸ್ತ್ರ ಅಲ್ಲ, ಅದು ದೇಶದ ಹೆಮ್ಮೆಯ ಸಂಕೇತ. ನಾವೆಲ್ಲರೂ ಜಾತ್ಯಾತೀತರಾಗುವುದು ಈಗ ಅತಿ ಅವಶ್ಯ. ಮನುಷ್ಯರು, ಮನುಷ್ಯರನ್ನು ಪ್ರೀತಿಸಬೇಕು. ಭ್ರಾತೃತ್ವ, ದೇಶಪ್ರೇಮ ಬೆಳೆಸಿಕೊಳ್ಳದೇ ಹೋದರೆ ನಾವು ಮನುಷ್ಯರಾಗಿ ಬಾಳಲು ಸಾಧ್ಯವಾಗುವುದಿಲ್ಲ ಎಂದರು.

ವಿದ್ಯಾರ್ಥಿಗಳು, ಯುವಜನರಲ್ಲಿ ದೇಶಭಕ್ತಿಯನ್ನು ಬೆಳೆಸುವ ಕಾರ್ಯವಾಗಬೇಕು. ಹೀಗಾಗಿ, ಪ್ರತಿಯೊಬ್ಬರಿಗೂ ಸಂವಿಧಾನದ ಮಹತ್ವ ತಿಳಿಸಲು ಎಲ್ಲಾ ಕಡೆ ಸಂವಿಧಾನ ಪೀಠಿಕೆ ಬೋಧಿಸುವ ಕಾರ್ಯಕ್ರಮವನ್ನು ನಾವು ರೂಪಿಸಿದ್ದೇವೆ ಎಂದು ತಿಳಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ತ್ರಿವರ್ಣ ಧ್ವಜದಿಂದಾಗಿ ಜನರಲ್ಲಿ ರಾಷ್ಟ್ರಭಕ್ತಿ ಮೂಡಲಿದೆ. ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ರವಾನೆಯಾಗಲಿದೆ. ಇದಕ್ಕೆ ಶ್ರಮಿಸಿದ ಸಭಾಧ್ಯಕ್ಷ ಯು.ಟಿ.ಖಾದರ್, ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಅವರ ತಂಡದವರಿಗೆ ಅಭಿನಂದನೆಗಳನ್ನು ತಿಳಿಸುವೆ ಎಂದರು. ಸಾರ್ವಜನಿಕರಿಗೆ ಇದರ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಗಾಂಧಿಯವರು ಭೇಟಿ ನೀಡಿದ ನೆಲ ಬೆಳಗಾವಿ. ಇಲ್ಲಿ ದೇಶದ ಎರಡನೇ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜದ ಅನಾವರಣ ನಡೆದಿದ್ದು ಸಂತಸ ತಂದಿದೆ. ಇದರ ಹಿಂದಿನ ಶ್ರಮ, ಬದ್ಧತೆ ಹಾಗೂ ಧ್ವಜದ ಮೇಲಿನ ಪ್ರೇಮ ಶ್ಲಾಘನೀಯವಾದುದು ಎಂದರು. ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಎಚ್.ಸಿ.ಮಹದೇವಪ್ಪ, ಲಕ್ಷ್ಮಿ ಹೆಬ್ಬಾಳಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಿಧಾನಸಭೆಯಲ್ಲಿ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಪರಿಷತ್‌ನಲ್ಲಿ ಸರ್ಕಾರದ ಮುಖ್ಯಸಚೇತಕ ಸಲೀಂ ಅಹಮದ್‌ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ