ಹುಬ್ಬಳ್ಳಿಯಲ್ಲಿ ವಿಶ್ವದ ಮೊದಲ ಸೋಲಾರ್ ಮ್ಯೂಸಿಯಂ!

KannadaprabhaNewsNetwork |  
Published : Apr 14, 2026, 02:15 AM IST
ಹುಬ್ಬಳ್ಳಿ ವಿಜಯನಗರದಲ್ಲಿರುವ ಸನ್ ರೇ ಸೋಲಾರ್‌ ಮ್ಯೂಸಿಯಂ. | Kannada Prabha

ಸಾರಾಂಶ

ಇಲ್ಲಿನ ವಿಜಯನಗರದಲ್ಲಿ ಸೌರ ವಿಜ್ಞಾನಿ ಮಹೇಶ ಶಿವಶಿಂಪಗೇರ ಎಂಬುವರು 2006ರಲ್ಲಿ "ಸನ್‌ ರೇ ಸೋಲಾರ್‌ ಮ್ಯೂಸಿಯಂ " ಪ್ರಾರಂಭಿಸುವ ಮೂಲಕ ಸೌರಶಕ್ತಿಯಿಂದ ಬಳಸಬಹುದಾದ ನೂರಾರು ಉಪಕರಣಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕಿರಿಸಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಇಂಧನ ಬೇಡಿಕೆ ಹೆಚ್ಚಾಗಿರುವ ಇಂದಿನ ದಿನಮಾನಗಳಲ್ಲಿ ಪರ‍್ಯಾಯ ಸಂಪನ್ಮೂಲಗಳ ಅಭಿವೃದ್ಧಿಗೆ ಎಲ್ಲೆಡೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಕಾಣಬಹುದಾಗಿದೆ. ಆದರೆ, ಇಲ್ಲೊಬ್ಬರು 10 ವರ್ಷಗಳ ಹಿಂದೆಯೇ ಸೌರಶಕ್ತಿ ಬಳಸಿಕೊಂಡು ಅಡುಗೆ ತಯಾರಿಸಬಹುದು ಎಂಬುದನ್ನು ಆವಿಷ್ಕರಿಸಿ ಸಫಲತೆಯನ್ನೂ ಕಂಡಿದ್ದಾರೆ. ಇದರೊಂದಿಗೆ ನೂರಾರು ದಿನಬಳಕೆ ವಸ್ತುಗಳನ್ನು ಸೂರ್ಯನ ಶಕ್ತಿಯಿಂದ ಬಳಸಬಹುದು ಎಂಬುದನ್ನು ಸಾಧ್ಯವಾಗಿಸಿ ತೋರಿಸಿದ್ದಾರೆ. ಜತೆಗೆ ವಿಶ್ವದ ಮೊದಲ ಸೋಲಾರ್‌ ಮ್ಯೂಸಿಯಂ ನಿರ್ಮಿಸುವ ಮೂಲಕ ಸಾವಿರಾರು ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಇಲ್ಲಿನ ವಿಜಯನಗರದಲ್ಲಿ ಸೌರ ವಿಜ್ಞಾನಿ ಮಹೇಶ ಶಿವಶಿಂಪಗೇರ ಎಂಬುವರು 2006ರಲ್ಲಿ "ಸನ್‌ ರೇ ಸೋಲಾರ್‌ ಮ್ಯೂಸಿಯಂ " ಪ್ರಾರಂಭಿಸುವ ಮೂಲಕ ಸೌರಶಕ್ತಿಯಿಂದ ಬಳಸಬಹುದಾದ ನೂರಾರು ಉಪಕರಣಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕಿರಿಸಿದ್ದಾರೆ. ಇದರ ವಿಶೇಷತೆ ಕುರಿತು ಬರಹವೊಂದು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಮಂಡಳಿಯ "ಭಾರತೀಯ ವಿಜ್ಞಾನ ಮ್ಯೂಸಿಯಂ ಹಾಗೂ ವಿಜ್ಞಾನ ಕೇಂದ್ರಗಳ ಕೈಪಿಡಿ "ಯಲ್ಲಿ ಪ್ರಕಟವಾಗಿರುವುದು ವಿಶೇಷ.

ಏನಿದು ಸೌರ ಕುಕ್ಕರ್‌?

ಮಹೇಶ್‌ ಅವರು ಆವಿಷ್ಕರಿಸಿದ ಸೌರ ಕುಕ್ಕರ್ ಸಂಪೂರ್ಣವಾಗಿ ಸೂರ್ಯನ ಕಿರಣಗಳಿಂದಲೇ ಅಡುಗೆ ತಯಾರಿಸಬಹುದಾಗಿದೆ. ಮನೆಯ ಚಾವಣಿಯ ಮೇಲೆ ಸೂರ್ಯನ ಪ್ರತಿಫಲಕಗಳನ್ನು ಸಂಗ್ರಹಿಸುವ ಸಾಧನ ಸಿದ್ಧಪಡಿಸಿದ್ದು, ಅದರ ಮಧ್ಯ ಕುಕ್ಕರ್‌ ಇಟ್ಟರೆ ಸಾಧನದ ಮೇಲೆ ಬೀಳುವ ಸೂರ್ಯನ ಕಿರಣಗಳು ಪ್ರತಿಫಲನಗೊಂಡು ಕುಕ್ಕರ್‌ ಮೇಲೆ ಬಿದ್ದು ಕೇವಲ 5-10 ನಿಮಿಷಗಳಲ್ಲಿ ಅಡುಗೆ ಸಿದ್ಧಗೊಳ್ಳುತ್ತದೆ. ಆದರೆ, ಇದರಿಂದ ಮನೆಯ ಒಳಗಡೆ ಅಡುಗೆ ಸಿದ್ಧಪಡಿಸಲು ಸಾಧ್ಯವಾಗುವುದಿಲ್ಲ. ಮನೆಯ ಒಳಗಡೆ ಸಿದ್ಧಪಡಿಸುವ ಸೌರ ಕುಕ್ಕರ್‌ ಕುರಿತು ಆವಿಷ್ಕರಿಸುತ್ತಿದ್ದು, ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಹೊರತರಲು ಸಿದ್ಧತೆ ನಡೆಸುತ್ತಿದ್ದಾರೆ.ಮ್ಯೂಸಿಯಂನಲ್ಲಿ ಏನೆಲ್ಲ ಇವೆ

ಮ್ಯೂಸಿಯಂನಲ್ಲಿ ಸೌರ ರೇಡಿಯೋ, ಬಿಸಿಲಲ್ಲೂ ತಂಪಾದ ಗಾಳಿ ನೀಡುವ ಸೌರ ಟೋಪಿ, ಮೊಬೈಲ್ ಪೋನ್ ಸಹಿತ ಸೌರ ಎಲ್‌ಇಡಿ ಲಾ೦ದ್ರ, ಕೃಷಿ ಉತ್ಪನ್ನ ಒಣಗಿಸುವ ಸೌರ ಯಂತ್ರ, ಸೌರ ಬೀದಿ ದೀಪ, ಜಲಮೂಲಗಳಿಗೆ ಆಮ್ಲಜನಕ ಒದಗಿಸುವ ಸೌರ ಏರಿಯೇಟರ್, ಸೋಲಾರ್ ಇನ್ವರ್ಟರ್, ಸೌರ ಗೋಮೂತ್ರ ಶುದ್ಧೀಕರಣ ಯಂತ್ರ, ಗೋಬರ್ ಗ್ಯಾಸ್ ಸ್ಟವ್, ಗೋಬರ್ ಗ್ಯಾಸ್ ದೀಪ, ವರ್ಟಿಕಲ್ ವಿಂಡ್ ಟರ್ಬೈನ್, ಸೋಲಾರ್ ಇಸ್ತ್ರಿ, ಸೋಲಾರ್ ಶವಾಗಾರ, ಸೋಲಾರ್ ಡ್ರೈಯರ್, ಸೋಲಾರ್ ಸ್ಪ್ರೈಯರ್, ಸೋಲಾರ್ ಬ್ಯಾಗ್, ಸೋಲಾರ್ ಬೇಲಿ, ಸೋಲಾರ್ ಸೆನ್ಸಾರ್ ಇವೆ. ಇಲ್ಲಿ ಸೂರ್ಯನ ಶಕ್ತಿಯ ಬಳಕೆ ಹೇಗೆ ಮಾಡಬಹುದೆಂಬುವುದರ ಬಗ್ಗೆ ಪರಿಪೂರ್ಣ ಪ್ರಾತಕ್ಷ್ಯತೆ ಹಾಗೂ ತರಬೇತಿಯನ್ನು ಎಲ್ಲರಿಗೂ ಕೊಡಲಾಗುತ್ತದೆ. ಈಗಾಗಲೇ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ತರಬೇತಿ ಪಡೆದಿರುವುದು ವಿಶೇಷ.ಡೀಮ್ಡ್‌ ವಿವಿ ಗುರಿಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹೊನ್ನಾಪುರದ ಒಂದೂವರೆ ಎಕರೆಯಲ್ಲಿ ಹೊಸ ಮ್ಯೂಸಿಯಂ ನಿರ್ಮಿಸಲಾಗುತ್ತಿದೆ. ಅಲ್ಲಿ ಸೌರಶಕ್ತಿ ಇತಿಹಾಸದ ಸಂಗ್ರಹ, ಸೌರ ತಂತ್ರಜ್ಞಾನಗಳ ಪ್ರದರ್ಶನ, ಕಾರ್ಯಾಗಾರ ಹಮ್ಮಿಕೊಳ್ಳುವುದು, ಡೀಮ್ಡ್‌ ವಿಶ್ವವಿದ್ಯಾಲಯ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ಸನ್ ರೇ ಸೋಲಾರ್‌ ಮ್ಯೂಸಿಯಂ ಸಂಸ್ಥಾಪಕ ಮಹೇಶ ಶಿವಶಿಂಪಿಗೇರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ಕ್ಕೆ ಎನ್‌ಡಿಎಗೆ ಅಧಿಕಾರ ನಿಶ್ಚಿತ : ಅಶೋಕ್
ಗ್ಯಾರಂಟಿಗಳಿಂದ ಸಾಮಾಜಿಕ, ಆರ್ಥಿಕ ಶಕ್ತಿ: ಸಿದ್ದು