ಹುಣಸಗಿ ಹಿಂದುಳಿದ ವರ್ಗಗಳ ಬಾಲಕರ ವಸತಿ ನಿಲಯದಲ್ಲಿ ಘಟನೆ । ನಿತ್ಯವೂ ವಿದ್ಯಾರ್ಥಿಗಳಿಗೆ ಕಳಪೆ ಊಟ ಆರೋಪ ।
ಬಸವರಾಜ ಎಂ. ಕಟ್ಟಿಮನಿಕನ್ನಡಪ್ರಭ ವಾರ್ತೆ ಹುಣಸಗಿ
ಪಟ್ಟಣದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದಲ್ಲಿ ನೀಡುತ್ತಿರುವ ಕಳಪೆ ಊಟದಿಂದ ಇಲ್ಲಿನ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಊಟದಲ್ಲಿ ನುಸಿ, ಬಾಲಹಳು ಪ್ರತ್ಯಕ್ಷವಾಗಿದ್ದರೂ ಗುಣಮಟ್ಟದ ಆಹಾರ ನೀಡಲು ಸಿಬ್ಬಂದಿ ಹಾಗೂ ವಾರ್ಡನ್ ಮುಂದಾಗುತ್ತಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಾಸ್ಟೆಲ್‌ನಲ್ಲಿ ಒಟ್ಟು 102 ವಿದ್ಯಾರ್ಥಿಗಳು ದಾಖಲಾಗಿದ್ದು ಇದರಲ್ಲಿ 30-40 ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿಯೇ ವಾಸ ಮಾಡುತ್ತಿದ್ದಾರೆ. 102 ವಿದ್ಯಾರ್ಥಿಗಳು ಹಾಜರಾತಿ ತೋರಿಸಿ ಉಳಿದ ಎಲ್ಲ ಅಡುಗೆ ಸಾಮಗ್ರಿ ಹಾಗೂ ಕಿಟ್‌ಗಳನ್ನು ಸಿಬ್ಬಂದಿಗ ತಮ್ಮ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿರುವದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿದ್ಯಾರ್ಥಿಗಳಿಗೆ ಪ್ರತಿ ನಿತ್ಯ ಕಳಪೆ ಮಟ್ಟದ ಊಟ:ಅಕ್ಕಿಯಲ್ಲಿ ನುಸಿ ಹುಳ, ಬಾಲಹುಳು ಇದ್ದರೂ ಅದನ್ನು ತೆಗೆದು ಹಾಕದೆ ಅನ್ನವನ್ನು ಬೇಯಿಸಿ ಹಾಕುತ್ತಿದ್ದಾರೆ. ಅಕ್ಕಿಯಲ್ಲಿ ಹುಳ ಬಂದಿದೆ ಎಂದು ಹಾಸ್ಟೆಲ್ ಸಿಬ್ಬಂದಿಗಳಿಗೆ ಕೇಳಿದರೆ ಅವೆಲ್ಲ ಹುಳಗಳು ಹಾಗೆ ಬರುತ್ತದೆ ಅದನ್ನೆ ತಿನ್ನಬೇಕು ಎಂದು ಗದರಿಸುತ್ತಿದ್ದಾರೆ. ರೊಟ್ಟಿ, ಅನ್ನ, ಸಾಂಬಾರ ಮತ್ತೊಮೆ ಹಾಕಿ ಎಂದು ಕೇಳಿದರೆ ಅಡುಗೆ ಕಡಿಮೆ ಮಾಡಲಾಗಿದೆ ನಾವು ಹಾಕಿದಷ್ಟು ಊಟ ಮಾಡಬೇಕು ಇಲ್ಲಾ ಹೊರಗಡೆ ಹೋಗಿ ಊಟ ಮಾಡಿ ಬನ್ನಿ ಎಂದು ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಊಟ ಸರಿಯಾಗಿ ನೀಡುತ್ತಿಲ್ಲದಿರುವುದು ಒಂದೆಡೆಯಾದರೆ ವಿದ್ಯಾರ್ಥಿಗಳಿಗೆ ಊಟಕ್ಕಾಗಿ ಬರುವ ಸಾಮಗ್ರಿಗಳನ್ನು ಸಿಬ್ಬಂದಿ ಬ್ಯಾಗಿನಲ್ಲಿ ಹಾಕಿಕೊಂಡು ರಾಜರೋಷವಾಗಿ ತಮ್ಮ ತಮ್ಮ ಮನೆಗೆ ತೆಗದುಕೊಂಡು ಹೋಗುತ್ತಿದ್ದಾರೆ. ಊಟ ಮಾಡುವದಕ್ಕೆ ಹೆಚ್ಚಿಗೆ ಹಾಕಿ ಅಂದರೆ ಹಾಕುತ್ತಿಲ್ಲವೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹುಳು ಹುಪ್ಪಟೆ ಇರುವ ಆಹಾರ ತಿಂದು ಜೀವಕ್ಕೆ ಅಪಾಯವಾದರೆ ಯಾರು ಹೊಣೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಾರೆ. ಹಾಸ್ಟೆಲ್‌ನಲ್ಲಿ ಊಟ, ನೀರು, ಮೂಲಭೂತ ಸೌಲಭ್ಯ ವ್ಯವಸ್ಥಿತವಾಗಿಲ್ಲ ನಿರ್ಲಕ್ಷ್ಯ ಮಾಡುವ ಹಾಸ್ಟೆಲ್ ವಾರ್ಡನ್ ಸಸ್ಪೆಂಡ್ ಮಾಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದರು.ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟದ ಊಟ ವಿತರಿಸುತ್ತಿದ್ದಾರೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಹೊಟ್ಟೆ ತುಂಬ ಊಟ ಸಹ ನೀಡುತ್ತಿಲ್ಲ. ಒಮ್ಮೆ ಊಟ ಹಾಕಿಸಿಕೊಂಡು ಇನ್ನೊಮ್ಮೆ ಹಾಕಿಸಿಕೊಳ್ಳಲು ಹೋದರೆ ಅಡುಗೆ ಇಲ್ಲವೆಂದು ಹೇಳುತ್ತಿದ್ದಾರೆ. 102 ವಿದ್ಯಾರ್ಥಿಗಳ ಹಾಜರಾತಿ ತೋರಿಸಿ ಊಟದ ಸಾಮಗ್ರಿಗಳು ಸಿಬ್ಬಂದಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಇಂತಹ ಸಿಬ್ಬಂದಿಗಳ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಳದ ಹುಣಸಗಿ ತಾಲೂಕಿನ ಪ್ರಧಾನ ಕಾರ್ಯದರ್ಶಿ ಗೈಯಪ್ಪ ಸೊನ್ನಪೂರ ಹೇಳಿದರು.
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಊಟದಲ್ಲಿ ಹುಳು ಬಿದ್ದಿರುವದು ನನ್ನ ಗಮನಕ್ಕೆ ಬಂದಿಲ್ಲ. ಕಳಪೆ ಮಟ್ಟದ ಊಟ ನೀಡುತ್ತಿರುವದು ನನ್ನ ಗಮನಕ್ಕೆ ಬಂದರೆ ತಕ್ಷಣ ಸಿಬ್ಬಂದಿ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ.ರಾಜೇಂದ್ರ ವಗ್ಗನ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ಅಧಿಕಾರಿ, ಹುಣಸಗಿ.