ಇಡ್ಲಿ ಸಾಂಬಾರಲ್ಲಿ ಹುಳು: ತಟ್ಟೆ ಸಮೇತ ಎಡಿಸಿಗೆ ದರ್ಶನ!

KannadaprabhaNewsNetwork |  
Published : Jan 29, 2026, 01:30 AM IST
28ಕೆಡಿವಿಜಿ8, 9-ದಾವಣಗೆರೆ ಎಸ್‌ಪಿಎಸ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿ ನಿಲಯದ ಇಡ್ಲಿ-ಸಾಂಬಾರ್‌ನಲ್ಲಿ ಹುಳು ಬಿದ್ದ ತಟ್ಟೆ. | Kannada Prabha

ಸಾರಾಂಶ

ಹುಳುಬಿದ್ದ ಸಾಂಬಾರ್, ಇಡ್ಲಿ ತಟ್ಟೆಯ ಸಮೇತವೇ ಸರ್ಕಾರಿ ಹಾಸ್ಟೆಲ್‌ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಪರ ಜಿಲ್ಲಾಧಿಕಾರಿಗೆ ಅಳಲು ತೋಡಿಕೊಂಡ ಘಟನೆ ನಗರದಲ್ಲಿ ಬುಧವಾರ ವರದಿಯಾಗಿದೆ.

- ಬೂದಾಳ್‌ ರಸ್ತೆ ಅಂಬೇಡ್ಕರ್‌ ಹಾಸ್ಟೆಲ್‌ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳ ಅಳಲು । ಖುದ್ದು ಪರಿಶೀಲನೆ ಭರವಸೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹುಳುಬಿದ್ದ ಸಾಂಬಾರ್, ಇಡ್ಲಿ ತಟ್ಟೆಯ ಸಮೇತವೇ ಸರ್ಕಾರಿ ಹಾಸ್ಟೆಲ್‌ ವಿದ್ಯಾರ್ಥಿಗಳು ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಅಪರ ಜಿಲ್ಲಾಧಿಕಾರಿಗೆ ಅಳಲು ತೋಡಿಕೊಂಡ ಘಟನೆ ನಗರದಲ್ಲಿ ಬುಧವಾರ ವರದಿಯಾಗಿದೆ.

ನಗರದ ಬೂದಾಳ್ ರಸ್ತೆಯ ಎಸ್‌ಪಿಎಸ್ ನಗರದ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿ ನಿಲಯ(ಡಿ)ದಲ್ಲಿ ನಿತ್ಯವೂ ತಿಂಡಿ, ಮಧ್ಯಾಹ್ನ- ರಾತ್ರಿ ಊಟದಲ್ಲಿ ಕೂದಲು, ಹರಳು, ಸಣ್ಣ ಕಲ್ಲು, ಕಡ್ಡಿಗಳು, ಹುಳುಗಳು ಪತ್ತೆಯಾಗುತ್ತಿವೆ. ಆದರೆ, ಅಡುಗೆ ಸಿಬ್ಬಂದಿಯಾಗಲೀ, ವಾರ್ಡನ್ ಆಗಲೀ ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲ. ವಿದ್ಯಾರ್ಥಿಯೊಬ್ಬನ ತಟ್ಟೆಯಲ್ಲಿ ಸತ್ತು ಬಿದ್ದಿದ್ದ ಹುಳುವಿನ ಸಮೇತ ಅಪರ ಡಿಸಿ ಶೀಲವಂತ ಶಿವಕುಮಾರ ಬಳಿ ವಿದ್ಯಾರ್ಥಿಗಳು ಆಗಮಿಸಿ, ಅವ್ಯವಸ್ಥೆ ಸರಿಪಡಿಸಲು ದೂರಿದರು.

ಹಾಸ್ಟೆಲ್‌ನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ನಮಗೆ ನೀಡುವ ಆಹಾರದಲ್ಲಿ ಯಾವುದೇ ಸತ್ವಗಳು ಇರುವುದಿಲ್ಲ. ಮೆನು ಚಾರ್ಟ್ ಪ್ರಕಾರ ಯಾವುದೇ ಆಹಾರ ಪೂರೈಸುತ್ತಿಲ್ಲ. ಹುಳುಗಳು, ಕೂದಲು, ಕಲ್ಲುಗಳು ಬಂದಿದ್ದನ್ನು ತೋರಿಸುತ್ತೇವೆ. ಆದರೆ ಸರಿಪಡಿಸದೇ ವಾರ್ಡನ್‌, ಅಡುಗೆ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಬೆದರಿಸುತ್ತಾರೆ. ಕಳಪೆ ಆಹಾರ ಸೇವಿಸುವ ಕಾರಣ ಅನೇಕ ವಿದ್ಯಾರ್ಥಿಗಳು ಒಂದಿಲ್ಲೊಂದು ರೀತಿ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಾವ್ಯಾರೂ ರುಚಿ ರುಚಿಯಾದ ಭಕ್ಷ್ಯ ಭೋಜನ ಕೇಳುತ್ತಿಲ್ಲ. ಉತ್ತಮ ಗುಣಮಟ್ಟದ ಆಹಾರ ಕೊರತೆ ಇದೆ. ಶುಚಿಯಾದ ಶೌಚಾಲಯಗಳು ಇಲ್ಲ. ಶುದ್ಧ ಕುಡಿಯುವ ನೀರು ಪೂರೈಸುತ್ತಿಲ್ಲ. ಜ್ವಲಂತ ಸಮಸ್ಯೆಗಳನ್ನು ಹಾಸ್ಟೆಲ್‌ನಲ್ಲಿ ಎದುರಿಸುತ್ತಿದ್ದೇವೆ. ಗುಣಮಟ್ಟದ ಆಹಾರ ನೀಡಲು ಸರ್ಕಾರ ಅಗತ್ಯ ಅನುದಾನ ನೀಡುತ್ತಿದ್ದರೂ ನಮಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಕಿಡಿಕಾರಿದರು.

ಹಾಸ್ಟೆಲ್‌ನಲ್ಲಿ ನಮಗೆ ನೀಡುವಂಥ ಕಳಪೆ ಗುಣಮಟ್ಟದ ಆಹಾವರನ್ನೇ ವಾರ್ಡನ್ ಆಗಲೀ, ಅಡುಗೆ ಸಿಬ್ಬಂದಿಯಾಗಲೀ ತಮ್ಮ ಮನೆ ಮಂದಿ ಸಮೇತ ಸೇವಿಸುತ್ತಾರಾ? ಇಂತಹದ್ದನ್ನೇ ತಮ್ಮ ಮನೆಯಲ್ಲೂ ತಿನ್ನುತ್ತಾರಾ? ಇಡ್ಲಿ ಸಾಂಬಾರ್‌ನಲ್ಲಿ ಇವತ್ತೂ ಸಹ ಹುಳಬಿದ್ದಿದೆ. ಇಂತಹ ಸಮಸ್ಯೆ ಆಗಾಗ ಇರುತ್ತದೆ. ದರ ಹೆಚ್ಚಿರುವ ತರಕಾರಿಗಳನ್ನು ತರುವುದಿಲ್ಲ. ಅವ್ಯವಸ್ಥೆಗಳ ಸರಿಪಡಿಸಲು ಕೂಡಲೇ ಹಾಸ್ಟೆಲ್ ಸಿಬ್ಬಂದಿ, ವಾರ್ಡನ್ ಬದಲಾವಣೆ ಆಗಬೇಕು ವಿದ್ಯಾರ್ಥಿಗಳು ಒತ್ತಾಯಿಸಿದರು.

ಈ ಸಂದರ್ಭ ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಮುಖಂಡ ಸಂಜು ನಾಯ್ಕ, ಎಲ್.ಜಿ.ಆಕಾಶ್, ರವಿ ನಾಯ್ಕ, ಈ.ನವೀನ, ಹನುಮಂತ, ಪ್ರಜ್ವಲ್ ಇತರರು ಇದ್ದರು.

- - -

(ಬಾಕ್ಸ್‌-1)* ನಿತ್ಯವೂ ಹುಳ ಎಂಬ ಆರೋಪ ಸತ್ಯವಲ್ಲ: ವಾರ್ಡನ್‌ ಹಾಸ್ಟೆಲ್ ವಾರ್ಡನ್‌ ಮಾತನಾಡಿ, ಹಾಸ್ಟೆಲ್‌ನಲ್ಲಿ ಎಲ್ಲವನ್ನೂ ಸರಿ ಮಾಡಿದ್ದೇವೆ. ಆದರೆ, ಇಡ್ಲಿ ಸಾಂಬಾರಲ್ಲಿ ಹುಳು ಬಿದ್ದಿದ್ದು, ಅಡುಗೆ ಸಿಬ್ಬಂದಿ ತಪ್ಪಿನಿಂದ. 4 ತಿಂಗಳಿನಿಂದ ಮಕ್ಕಳು ಇದೇ ಆರೋಪ ಮಾಡುತ್ತಿದ್ದಾರೆ. ನಾನು ಒಂದೂವರೆ ತಿಂಗಳ ಹಿಂದಷ್ಟೇ ಇಲ್ಲಿಗೆ ವಾರ್ಡನ್ ಆಗಿದ್ದೇನೆ. ಸಿಬ್ಬಂದಿ ಬದಲಾವಣೆ ಮಾಡಿಲ್ಲವೆಂಬ ಅಸಮಾಧಾನ ವಿದ್ಯಾರ್ಥಿಗಳಲ್ಲಿದೆ. ಉಪ ಲೋಕಾಯುಕ್ತರು ಬಂದಿದ್ದ ವೇಳೆ ತಟ್ಟೆ, ಬೆಡ್ ಶೀಟ್‌ ಕೊಟ್ಟು ಸಹಿ ಪಡೆದಿದ್ದೇವೆ. ನಿತ್ಯವೂ ಹೀಗೆ ಹುಳ ಬರುತ್ತದೆಂಬ ಆರೋಪದಲ್ಲಿ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದರು.

- - -

(ಬಾಕ್ಸ್‌-2) * ತಪ್ಪಿದ್ದರೆ ಸೂಕ್ತ ಕ್ರಮ: ಎಡಿಸಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಮಾತನಾಡಿ, ಹಾಸ್ಟೆಲ್ ವಿದ್ಯಾರ್ಥಿಗಳು ಅಲ್ಲಿನ ಸಮಸ್ಯೆ ಬಗ್ಗೆ ಆರೋಪಿಸಿದ್ದಾರೆ. ವಾರ್ಡನ್, ಅಡುಗೆ ಸಿಬ್ಬಂದಿ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ನಾನೇ ಶೀಘ್ರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಮೆನು ಚಾರ್ಟ್ ಪ್ರಕಾರ ಊಟ ನೀಡುತ್ತಿದ್ದಾರೋ ಇಲ್ಲವೋ, ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಮಕ್ಕಳಿಗೆ ಭರವಸೆ ನೀಡಿದರು.

- - -

-28ಕೆಡಿವಿಜಿ8, 9:

ದಾವಣಗೆರೆ ಎಸ್‌ಪಿಎಸ್ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ವಸತಿ ನಿಲಯದ ಇಡ್ಲಿ-ಸಾಂಬಾರ್‌ನಲ್ಲಿ ಹುಳು ಬಿದ್ದ ತಟ್ಟೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

4 ದಿನದಲ್ಲಿ 37 ಜನರಿಗೆ ನಾಯಿ ಕಡಿತ, ಬಾಲಕಿ ಗಂಭೀರ - 4 ನಗರಗಳಲ್ಲಿ ಬೀದಿ ನಾಯಿ, ಹುಚ್ಚು ನಾಯಿ ಕಡಿತ
ವಿಧಾನಸಭೆಯಲ್ಲಿ ಗಂಭೀರ ಆರೋಪ - ಮತ್ತೆ ಟೆಲಿಫೋನ್‌ ಕದ್ದಾಲಿಕೆ ಗದ್ದಲ!