ವಸತಿ ನಿಲಯಗಳಲ್ಲಿನ ಅವ್ಯವಸ್ಥೆಗೆ ಮಕ್ಕಳ ಆಯೋಗದ ಸದಸ್ಯ ಶಶಿಧರ್ ಕೋಸಂಬೆ ಗರಂ
ಕನ್ನಡಪ್ರಭ ವಾರ್ತೆ ಯಾದಗಿರಿ ಜಿಲ್ಲೆಯ ವಿವಿಧ ಸರ್ಕಾರಿ ವಸತಿ ನಿಲಯಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಶಶಿಧರ್ ಕೋಸಂಬೆ ಅವರು ಸೋಮವಾರ ಭೇಟಿ ನೀಡಿದ್ದ ವೇಳೆ ಅಲ್ಲಿಯ ಹತ್ತು ಹಲವಾರು ಅವ್ಯವಸ್ಥೆ ಕಂಡು ದಂಗಾಗಿದ್ದಾರೆ. ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆ ವಿಚಾರದಲ್ಲಿ ನಿರ್ಲಕ್ಷ್ಯ, ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದಲ್ಲಿ ಹುಳು ಹಾಗೂ ಪೌಷ್ಟಿಕಾಂಶ ಒಳಗೊಳ್ಳದೇ ಕೇವಲ ತಿಳಿನೀರಿನ ಆಹಾರ ನೀಡುತ್ತಿರುವುದನ್ನು ಕಂಡು ಸಂಬಂಧಿತರ ಮೇಲೆ ಕಿಡಿ ಕಾರಿದ್ದಾರೆ.ಎರಡು ದಿನಗಳ ಪ್ರವಾಸಕ್ಕೆಂದು ನ.26 ರ ಸಂಜೆ ಯಾದಗಿರಿಗೆ ಆಗಮಿಸಿರುವ ಶಶಿಧರ್ ಕೋಸಂಬೆ ಅವರು, ಭಾನುವಾರ ಸಂಜೆ ಇಲ್ಲಿನ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿನ ಮಕ್ಕಳ ದುಸ್ಥಿತಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಸೋಮವಾರ ಬೆಳಗ್ಗೆ ನಗರದಲ್ಲಿರುವ ಜಿಲ್ಲಾಸ್ಪತ್ರೆ ಹಾಗೂ ಗುರುಮಠಕಲ್ ಭಾಗದಲ್ಲಿ ಸಂಚರಿಸಿದ ಅವರಿಗೆ ಅಲ್ಲಿನ "ನರಕ "ಸದೃಶ ವಾತಾವರಣ ದರ್ಶನವಾಗಿದೆ. ಸೋಮವಾರ ಬೆಳಗ್ಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದರು. ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಶಶಿಧರ್ ತೆರಳಿದಾಗ, ಒಂದೇ ವಾರ್ಮರ್‌ನಲ್ಲಿ (ತಾಪಮಾನ ನಿಯಂತ್ರಿಸುವ) ಎರಡು ಶಿಶುಗಳ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವುದು ಕಂಡು ಬೇಸರ ವ್ಯಕ್ತಪಡಿಸಿದರು. ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ಸೋಂಕು ಹರಡುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಜಾಂಡೀಸ್‌ನಂತಹ ಕಾಯಿಲೆಗಳಿಗೆ ತುತ್ತಾಗುವ ಬಹುತೇಕ ಶಿಶುಗಳಿಗೆ ಚಿಕಿತ್ಸೆ ನೀಡುವ ಫೋಟೋ ಥೆರಪಿ ಯಂತ್ರ ಎರಡೇ ಇರುವುದೂ ಅವರ ಕಣ್ಣಿಗೆ ಬಿತ್ತು. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ದಿನಕ್ಕೆ ಅಂದಾಜು 20-25 ಹೆರಿಗೆಗಳು ನಡೆಯುತ್ತವೆ. ಹೀಗಿದ್ದಾಗ, ಎರಡೇ ಯಂತ್ರಗಳಲ್ಲಿ ಹೇಗೆ ಚಿಕಿತ್ಸೆ ನೀಡಲು ಸಾಧ್ಯ, ಇದು ದುರದೃಷ್ಟಕರ ಎಂದು ವೈದ್ಯಾಧಿಕಾರಿಗಳ ತರಾಟೆಗೆ ತೆಗೆದುಕೊಂಡರು.ಮಕ್ಕಳ ಸುರಕ್ಷತೆ ವಿಚಾರದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನಿರ್ಲಕ್ಷ್ಯ ಕಂಡು ಬಂದಿದ್ದು, ಕೆಲವೊಮ್ಮ ಮಕ್ಕಳ ಅದಲು ಬದಲು ಅಥವಾ ಕಳವು ಪ್ರಕರಣ ನಡೆದರೆ ಪಾಲಕರ ಗತಿಯೇನು ಎಂದು ಆತಂಕ ವ್ಯಕ್ತಪಡಿಸಿದರು. ಕೋಲಾರದಲ್ಲಿ ಇತ್ತೀಚಿನ ಮಗು ಕಳವು ಪ್ರಕರಣ ಉದಾಹರಿಸಿದರು. ಅಚ್ಚರಿ ಎಂದರೆ, ವಾರ್ಮರ್ ವಿದ್ಯುತ್ ಸ್ವಿಚ್‌ಗಳಿಗೆ ಬ್ಯಾಂಡೇಜ್ ಹಚ್ಚಿ ಅಂಟಿಸಿದ, ಮಕ್ಕಳ ಘಟಕದಲ್ಲಿ ಶಾರ್ಟ್ ಸರ್ಕೀಟ್ ಆದರೆ ಮುಂದಾಗುವ ಅನಾಹುತದ ಬಗ್ಗೆ ಸಿಬ್ಬಂದಿ ವಿರುದ್ಧ ಕಿಡಿ ಕಾರಿದರು. ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗುರುತಿಸಿದ 326 ಮಕ್ಕಳಿಗೆ ಚಿಕಿತ್ಸೆ ನೀಡುವ ಪೌಷ್ಟಿಕ ಪುನಶ್ಚೇತನ ಘಟಕಕ್ಕೆ ಬೀಗ ಹಾಕಿದ್ದನ್ನು ಕಂಡು ಅಚ್ಚರಿ ವ್ಯಕ್ತಪಡಿಸಿ, ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ಎಲ್ಲಿ ನೀಡುತ್ತೀರಿ ಎಂದು ಪ್ರಶ್ನಿಸಿ, ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ರೋಗಿಗಳಿಗೆ ನೀಡಲಾಗುವ ಪೌಷ್ಟಿಕಾಂಶದ ಯಾವುದೇ ಆಹಾರ ಧಾನ್ಯಗಳು ಅಲ್ಲಿ ಕಂಡುಬರಲಿಲ್ಲ. ಬಾಣಂತಿಯರ ವಾರ್ಡಿನಲ್ಲು ಊಟದಲ್ಲಿ ಹುಳು ಬಂದಿರುವುದು, ಒಂದೇ ರೋಗಿಯ ಎರಡೆರಡು ಕೈಗಳಿಗೆ ಐದಾರು ದಿನಗಳಿಂದ ಕೆನಲ್ (ನರ ಮೂಲಕ ಔಷಧಿ ದ್ರವ್ಯ ನೀಡುವ) ಹಾಕಿರುವುದು ನೋಡಿ ಆಘಾತ ವ್ಯಕ್ತಪಡಿಸಿದರು.ಊಟದಲ್ಲಿ ಹುಳು, ಕಲಬೆರಕೆ ಆಹಾರ: ಅರಕೇರಾ(ಕೆ) ಕಸ್ತೂರ್ ಬಾ ವಸತಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ರೀಡಾಪಟುಗಳ ಸನ್ಮಾನಿಸಿದರು. ಆದರೆ, ಅಲ್ಲಿನ ದಾಖಲಾತಿ ಮತ್ತು ಹಾಜರಿಯಲ್ಲಿ ವ್ಯತ್ಯಾಸ ಕಂಡುಬಂತು. ಅಲ್ಲಿದ್ದ ಮಕ್ಕಳಿಗೆ ಬಿಸಿನೀರು ವ್ಯವಸ್ಥೆಯೇ ಇರಲಿಲ್ಲ. ಒಂದು ವಾರದಿಂದ ವಾಟರ್ ಫಿಲ್ಟರ್ ಕೆಟ್ಟು ಹೋಗಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಸಂಪಿನಲ್ಲಿ ಕಸ ತುಂಬಿಕೊಂಡ ನೀರನ್ನೆ ಅಡುಗೆಗೆ ಹಾಗೂ ಕುಡಿಯಲು ಬಳಸುತ್ತಿರುವುದನ್ನು ಗಮನಿಸಿದರು. ಕರೆಂಟ್ ಹೋದರೆ ಜನರೇಟರ್ ವ್ಯವಸ್ಥೆ ಇರದೆ ಇರುವುದು, ರಾತ್ರಿ ವೇಳೆ ಮಕ್ಕಳ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ಕಂಡುಬಂತು. ಗೋದಿ ಹಿಟ್ಟಿನಲ್ಲಿ ಹುಳು, ಶೇಂಗಾ ಹಾಗೂ ಇನ್ನಿತರ ಧಾನ್ಯಗಳಲ್ಲಿ ಕಲಬೆರಕೆ ನೋಡಿ ಆಘಾತ ವ್ಯಕ್ತಪಡಿಸಿದರು.ನಂತರ, ಕೋಸಂಬೆ ಅವರು ಗುಂಜನೂರು ಮೊರಾರ್ಜಿ ಶಾಲೆಗೆ ಭೇಟಿ ನೀಡಿದಾಗ ಲೈಬ್ರರಿಯಲ್ಲಿ ಪುಸ್ತಕ, ಪತ್ರಿಕೆಗಳ ಬದಲು ಶೂಗಳ ಇಡುವ ಬಾಕ್ಸಗಳ ಕಂಡುಬಂದವು. ಶಿಕ್ಷಕರ ಕೊರತೆ ಜೊತೆಗೆ, ಮಕ್ಕಳ ಸ್ನಾನಕ್ಕೆ ಬಿಸಿನೀರು, ಶುದ್ಧ ಕುಡಿಯುವ ನೀರು, ಕ್ರೀಡಾ ಸಾಮಗ್ರಿಗಳ ಇಲ್ಲದಿರುವುದು ನೋಡಿದರು. ಒಂದೇ ಕೋಣೆಯಲ್ಲಿ 34 ಮಕ್ಕಳು ಮಲಗುವ ವಿಷಯ ತಿಳಿದು ದಂಗಾದರು. ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ, ಅಲ್ಲಿಯೂ ಕೂಡ ಎನ್‌ಆರ್ಸಿ (ಮಕ್ಕಳ ಪೌಷ್ಟಿಕ ಪುನ್ಶೇತನ ಘಟಕ) ಇಲ್ಲದಿರುವುದು ಕಂಡು ಬಂತು. ಗುರುಮಠಕಲ್ ತಾಲೂಕಿನಲ್ಲಿ 50 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಪಡೆದರು. ಗುರುಮಠಕಲ್ ತಾಲೂಕಿನ ಬಾಲಛೇಡ್ ಎಪಿಜೆ ಅಬ್ದುಲ್ ಕಲಾಂ ಮಾದರಿ ವಸತಿ ಶಾಲೆಗೆ ಭೇಟಿ ನೀಡಿದಾಗ ಅಲ್ಲಿನ ಮಕ್ಕಳಿಗೆ ಚರ್ಮರೋಗದ ದೂರು ನೀಡಿದರು. ಬಹಳಷ್ಟು ಮಕ್ಕಳಿಗೆ ಚರ್ಮರೋಗ ವ್ಯಾಪಿಸಿತ್ತು. ಮಕ್ಕಳ ಸ್ನಾನಕ್ಕೆ ಬಿಸಿನೀರು ವ್ಯವಸ್ಥೆ ಇರಲಿಲ್ಲ. ಊಟದಲ್ಲಿ ಹುಳು, ತಿಳಿಸಾರು ನೀಡುತ್ತಿರುವುದಾಗಿ ದೂರಿದ ಮಕ್ಕಳು, ಪೌಷ್ಟಿಕ ಆಹಾರ ಇಲ್ಲಿ ಅಲಭ್ಯ ಎಂದು ನೋವು ವ್ಯಕ್ತಪಡಿಸಿದರು. ಹಂದಿನಾಯಿಗಳ ತಾಣವಿದಂತಾಗಿದೆ ಎಂದು ಅವರು ಕಿಡಿ ಕಾರಿದರು.
ಯಾದಗಿರಿಗೆ ಬರುವ ಮಾರ್ಗ ಮಧ್ಯೆ, ಸೈದಾಪುರ ರೈಲ್ವೆ ಗೇಟ್ ಹತ್ತಿರ ಒಂದೇ ಆಟೋದಲ್ಲಿ 20ಕ್ಕೂ ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದುದು ಕಂಡು ನಿಲ್ಲಿಸಿ, ಸುರಕ್ಷತೆ ಕಾಪಾಡುವಂತೆ ಸೂಚಿಸಿದರು. ಶಾಲೆ ಬಿಟ್ಟು ಹೊಲಗಳಿಗೆ ಹತ್ತಿ ಬಿಡಿಸಲು ಹೋದ ಮಕ್ಕಳ ಅವರಿಗೆ ಕಂಡುಬಂದರು.