ತಾಲೂಕು ಅಧಿಕಾರಿ ಶಾರದಾದೇವಿ ವಿರುದ್ಧ ಆಕ್ರೋಶ । ಕೂಡಲೆ ಅಮಾನತುಗೆ ಒತ್ತಾಯ
ಕನ್ನಡಪ್ರಭ ವಾರ್ತೆ ಶಹಾಪುರಅನ್ನದಲ್ಲಿ ಹುಳುಗಳಿವೆ ಎಂದು ಆರೋಪಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ವಿದ್ಯಾರ್ಥಿಗಳು ಶಹಾಪುರ ತಾಲೂಕು ಅಧಿಕಾರಿ ಶಾರದಾದೇವಿ ಹಾಗೂ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯದ ವಿರುದ್ಧ ವಿದ್ಯಾರ್ಥಿಗಳು ನಗರದ ತಹಸೀಲ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು.ಅಕ್ಕಿಯಲ್ಲಿ ಹುಳುಗಳು ಮತ್ತು ಕೀಟಗಳು ಕಾಣಿಸಿಕೊಂಡಿವೆ. ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಸಹಿತ ಯಾವುದೇ ಪ್ರಯೋಜನವಾಗಿಲ್ಲ. ತಾಲೂಕು ಅಧಿಕಾರಿ ಶಾರದಾದೇವಿ ಹಾಗೂ ಹಾಸ್ಟೆಲ್ ವಾರ್ಡನ್ ನಿರ್ಲಕ್ಷ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಅವರನ್ನು ಅಮಾನತುಗೊಳಿಸಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ್ ಅಣಬಿ ಮಾತನಾಡಿ, ಹಾಸ್ಟೆಲ್ ಅವ್ಯವಸ್ಥೆ ಬಗ್ಗೆ ಅನೇಕ ಬಾರಿ ಅಧಿಕಾರಿಗಳ ಹಾಗೂ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಹಾಸ್ಟೆಲ್ ನಲ್ಲಿ ನೀಡುವ ಆಹಾರ ಪ್ರಾಣಿ, ಪಕ್ಷಿಗಳೂ ಸಹ ತಿನ್ನುವುದಿಲ್ಲ. ಅಷ್ಟೊಂದು ಕಳಪೆಯಾಗಿದೆ. ಕಲಿಕೆ ವಾತಾವರಣ ಇಲ್ಲದೆ, ಸಂಪೂರ್ಣ ಹದಗೆಟ್ಟು ಹೋಗಿದೆ. ತಕ್ಷಣ ಕ್ರಮ ವಹಿಸಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಹಾಗೂ ಮೂಲಭೂತ ಮತ್ತು ಕಲಿಕಾ ಸೌಲಭ್ಯ ಒದಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಮುಖ್ಯಸ್ಥ ಶರಣು ದೋರನಹಳ್ಳಿ ಮಾತನಾಡಿ, ಊಟದಲ್ಲಿ ಹುಳಗಳ ಪತ್ತೆಯಾದ ಬಗ್ಗೆ ತಾಲೂಕು ಅಧಿಕಾರಿ ಶಾರದಾದೇವಿಯವರ ಗಮನಕ್ಕೆ ತಂದಾಗ ಸಮಸ್ಯೆ ಬಗೆಹರಿಸುವ ಬದಲು ಉಡಾಫೆ ಉತ್ತರ ನೀಡಿ, ನನಗೇನು ಇದು ಒಂದೇ ಹಾಸ್ಟೆಲ್ ಇಲ್ಲ. ತಾಲೂಕಿನಲ್ಲಿ ಸುಮಾರು ಹಾಸ್ಟೆಲ್ ಗಳು ಬರುತ್ತವೆ. ನನಗೆ ನೋಡಿಕೊಳ್ಳಲು ಇದೊಂದೇ ಹಾಸ್ಟೆಲ್ ಇಲ್ಲ ಎಂದು ಹೇಳಿಕೆ ನೀಡಿದ ಇಂತಹ ಅಧಿಕಾರಿಯಿಂದ ಮಕ್ಕಳ ಕಲಿಕೆಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಇಂಥ ಅಧಿಕಾರಿಯನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಅಂಬ್ರೇಶ ಶಿರವಾಳ, ಭೋಜಪ್ಪ ಮುಂಡಾಸ, ವಿದ್ಯಾರ್ಥಿಗಳಾದ ಜಗದೀಶ, ಹೊನ್ನಯ್ಯ, ದಾವಲಸಾಬ, ನವಾಜ, ಅಬ್ದುಲ್, ರಫೀಕ್, ಉಸ್ಮಾನ್, ದೇವರಾಜ, ದಾವೂದ, ಬಿಲಾಲ, ಆಕಾಶ, ಸಾಬಣ್ಣ ಸೇರಿದಂತೆ ಇತರರಿದ್ದರು.