ಕನ್ನಡಪ್ರಭ ವಾರ್ತೆ ಬೆಳಗಾವಿಹನುಮ ಜಯಂತಿ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಕಲ್ಲೋಳಿ ಹನುಮ ದೇವಾಲಯ ಹಾಗೂ ಶ್ರೀರಾಮ ಮಂದಿರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಸುಲಧಾಳ ಗ್ರಾಮದಲ್ಲಿರುವ ಹನುಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ನಾಡಿನ ಸಮಸ್ತ ಜನರಿಗೆ ಒಳಿತಾಗಲಿ, ಮಳೆ-ಬೆಳೆ ಚೆನ್ನಾಗಿ ಆಗಲಿ, ನಾಡಿನ ಜನರು ಸುಖ-ಶಾಂತಿ ಸಮೃದ್ಧಿಯಿಂದ ಬದುಕಲಿ ಎಂದು ಪ್ರಾರ್ಥಿಸಿದರು.
ನಂತರ ಸುದ್ದಿಗಾರರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಉತ್ತಮ ಅವಕಾಶವಿದ್ದು, ಅಭ್ಯರ್ಥಿ ಮೃಣಾಲ್ ಹೆಬ್ಬಾಳಕರ್ ಅವರನ್ನು ಆರಿಸಿ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.ಈ ವೇಳೆ ಸ್ಥಳೀಯ ಮುಖಂಡರಾದ ರಾವಸಾಬ್ ಬೆಳಕೋಡ, ಬಸವರಾಜ್ ಬೆಳಕೋಡ, ಭೀಮರಾಯ್ ಕಡಾಡಿ, ಶಂಕರ್ ಗೋರೊಶಿ, ಚಂದು ಕಲಾಲ್, ಗಂಗಾರಾಮ್ ಕಲಾಲ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ನಿಮ್ಗೆ ವೋಟ್ ಹಾಕ್ದೆ ಇನ್ಯಾರಿಗೆ ಹಾಕಲವ್ವ:ಹನುಮಾನ್ ಜಯಂತಿ ಹಿನ್ನೆಲೆಯಲ್ಲಿ ಗೋಕಾಕ ತಾಲೂಕಿನ ಸುಲಧಾಳ ಗ್ರಾಮದಲ್ಲಿರುವ ಹನುಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಸಚಿವರು ಹೊರಟಿದ್ದರು. ಆ ವೇಳೆ ಸುಲಧಾಳ ಗ್ರಾಮದ ಮಹಿಳೆಯರು ಸಚಿವರ ಬಳಿ ಬಂದರು. ಕಾರು ನಿಲ್ಲಿಸಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿಸಿದರು. ಕ್ಷಣಾರ್ಧದಲ್ಲೆ ಸಚಿವರನ್ನು ಮಹಿಳೆಯರು ಮುತ್ತಿಕೊಂಡರು. ಬಳಿಕ ನಾನ್ಯಾರು ಎಂದು ಸಚಿವರು ಕೇಳಿದ್ದಕ್ಕೆ, ನಮಗೆ ಗೊತ್ತಿಲ್ವ. ನಮಗೆ ₹2 ಸಾವಿರ ಹಾಕುವ ಮಿನಿಸ್ಟರ್ ಮೇಡಂ ನೀವೆ. ನಿಮ್ಮಿಂದ ನಮಗೆ ತುಂಬಾ ಸಹಾಯ ಆಗಿದೆ. ನಿಮ್ಮ ಮಗನಿಗೆ ನಮ್ಮ ಮತ ಎಂದು ಭರವಸೆ ನೀಡಿದರು. ಬಡ ಬಗ್ಗರಿಗೆ ನಿಮ್ಮಿಂದ ಸಹಾಯ ಆಗಿದೆ. ನಿಮ್ ಹೆಸರು ಹೇಳಿಕೊಂಡು ನಾವೆಲ್ಲ ಅನ್ನ ತಿನ್ನುತ್ತಿದ್ದೇವೆ. ನಿಮಗೆ ವೋಟ್ ಹಾಕ್ತೀವ್ರಿ, ನಿಮ್ ಮಗ ಗೆಲ್ಲೋದ್ ಪಕ್ಕಾ ರೀ ಎಂದು ಮಹಿಳೆಯರು ಹೇಳಿದರು. ಸಚಿವರು ಅವರಿಗೆಲ್ಲ ಕೈಮುಗಿದು ಹೊರಟರು.