ಕೊಪ್ಪಳ:
ಆರಾಧನೆ ನಿಮಿತ್ತ ಮೂರು ದಿನಗಳಿಂದ ಬೆಳಗಿನ ಜಾವದಿಂದಲೇ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ತೀರ್ಥಪ್ರಸಾದ ಸೇರಿದಂತೆ ಅನೇಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಸುರಿದ ಮಳೆ ನಡುವೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನ ಪ್ರಸಾದ ಸೇವಿಸಿದರು.
ರಥೋತ್ಸವ ಸಂಭ್ರಮ:ಆರಾಧನೆಯ ಮೊದಲ ಎರಡು ದಿನ ರಾತ್ರಿ ಲಘು ರಥೋತ್ಸವ ನಡೆದಿತ್ತು. ಕೊನೆಯ ದಿನ ಭಕ್ತರ ಹರ್ಷೋದ್ಗಾರ, ದಾಸರ ಹಾಡುಗಳ ಭಕ್ತಿ, ಸಂಗೀತ ನಡುವೆ ರಥೋತ್ಸವ ಸಡಗರರಿಂದ ಜರುಗಿತು. ರಥ ಮಠದ ಪ್ರಾಂಗಣದ ಸುತ್ತಲೂ ಪ್ರದಕ್ಷಣೆಗೆ ತೆಗೆದುಕೊಂಡು ಹೋದಾಗ ಅದರ ಹಿಂದೆಯೇ ಸಾಗಿದ ಭಕ್ತರು ಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ಪ್ರದಕ್ಷಣೆ ಪೂರ್ಣಗೊಂಡು ಸ್ಥಸ್ಥಾನಕ್ಕೆ ಮರಳಿದ ಬಳಿಕ ಭಕ್ತರಲ್ಲಿ ಹರ್ಷೋದ್ಗಾರ ಮೊಳಗಿದವು.
ಆರಾಧನೆಯ ಕೊನೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರಿಂದ ಮಠದ ಆವರಣ, ಎದುರಿನ ಆವರಣದದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಆಗಮಿಸಿ ಪ್ರಸಾದ ಸೇವಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತದಾನ ಶಿಬಿರ ಆಯೋಜಿಸಿತ್ತು. ಸಂಜೆ ಕಲಾವಿದ ವರದೇಂದ್ರ ಗಂಗಾಖೇಡ್ಕರ್ ಅವರಿಂದ ಭಕ್ತಿ ಸಂಗೀತ, ಸೇವಾ ಪುರಸ್ಕಾರ, ವೆಂಕಟನರಸಿಂಹಚಾರ್ಯ ಗುಡೆಬೆಲ್ಲೂರು ಅವರಿಂದ ಪ್ರವಚನ ನಡೆಯಿತು.
ಮಧ್ಯಾರಾಧನೆ ದಿನವಾಗಿದ್ದ ಸೋಮವಾರ ತಡರಾತ್ರಿ ತನಕ ಕಾರ್ಯಕ್ರಮ ನಡೆದವು. ಲಘು ರಥೋತ್ಸವದ ಮುಂದೆ ಅನೇಕ ಭಕ್ತರು ದಾಸರ ಹಾಡುಗಳನ್ನು ಹಾಡಿದರೆ, ಮಕ್ಕಳು ಮತ್ತು ಮಹಿಳೆಯರು ಕೋಲಾಟ ಪ್ರದರ್ಶಿಸಿದರು.