ಕನ್ನಡಪ್ರಭ ವಾರ್ತೆ, ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿಯಲ್ಲಿನ ಸುಕ್ಷೇತ್ರ ಶ್ರೀ ಶಿವಯೋಗಾಶ್ರಮದಲ್ಲಿ 28ರಂದು ಶತಾಯುಷಿ ಕಾಯಕಯೋಗಿ, ಲಿಂ.ರುದ್ರಮುನಿ ಮಹಾಶಿವಯೋಗಿಗಳ ಪುಣ್ಯಾರಾಧನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಎನ್.ವಿ. ಈರೇಶ್ ಹೇಳಿದರು. ಪಟ್ಟಣದ ಸುದ್ದಿಮನೆಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 6 ಗಂಟೆಗೆ ಲಿಂ.ಶ್ರೀಗಳ ಕತೃಗದ್ದುಗೆಗೆ ವಿಶೇಷ ಪೂಜಾ ಕಾರ್ಯಕ್ರಮವು ತಾಲೂಕು ವೀರಶೈವ ಜಂಗಮ ಪುರೋಹಿತ ಅರ್ಚಕರ ಸಂಘದ ನೇತೃತ್ವದಲ್ಲಿ ನಡೆಯಲಿದೆ. 8.30ಕ್ಕೆ ಕೂಡಲದ ಗುರು ನಂಜೇಶ್ವರಮಠದ ಮಹೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ನೇತೃತ್ವದಲ್ಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ, ಮಧ್ಯಾಹ್ನ 3 ಗಂಟೆಗೆ ಲಿಂ.ಶ್ರೀಗಳ ಪಲ್ಲಕ್ಕಿ ಉತ್ಸವ ಭಕ್ತಿ-ಶ್ರದ್ಧೆಯಿಂದ ಜಾನಪದ ಮೇಳದೊಂದಿಗೆ ನಡೆಯಲಿದೆ ಎಂದು ತಿಳಿಸಿದರು. ಸಂಜೆ 5ರಿಂದ 6 ಗಂಟೆವರೆಗೆ ಕಲ್ಬುರ್ಗಿ ಜಿಲ್ಲೆಯ ಕುರಿಕೋಟ ಗ್ರಾಮದ 150ಕ್ಕೂ ಅಧಿಕ ಭಕ್ತರಿಂದ ಶುದ್ಧ ಸ್ವಚ್ಛತೆ ಜತೆಗೆ ವಿಶಿಷ್ಟ ರೀತಿಯ ರುಚಿಕಟ್ಟಾದ ಮಂಡಕ್ಕಿ, ಚುಡುವಾ ತಯಾರಿಸಿ ಸಮಸ್ತ ಭಕ್ತರಿಗೆ ವಿತರಿಸಲಿದ್ದಾರೆ. ಈಗಾಗಲೇ ಕಲ್ಬುರ್ಗಿ ಜಿಲ್ಲೆಯಿಂದ ಭಕ್ತವರ್ಗ ಉತ್ತರ ಕರ್ನಾಟಕದ ವಿಶಿಷ್ಟ ಮಂಡಕ್ಕಿ ಹಾಗೂ ಚುಡುವಾ ಜತೆಗೆ ಅಗತ್ಯವಾದ ಸಾಮಗ್ರಿಗಳ ಜತೆ ಧಾವಿಸಿದ್ದಾರೆ. ಭಕ್ತರು ಪ್ರಸಾದದ ರೂಪದಲ್ಲಿ ಸೇವಿಸಬೇಕು. ಕಾರ್ಯಕ್ರಮದಲ್ಲಿನ ದಾಸೋಹದ ಸಿದ್ಧತೆಯ ಸಮಸ್ತ ಜವಾಬ್ದಾರಿಯನ್ನು ಕುರಿಕೋಟ ಗ್ರಾಮಸ್ಥರು ವಹಿಕೊಂಡು, ನಳಪಾಕದ ಸವಿಯನ್ನು ಭಕ್ತರಿಗೆ ಉಣಬಡಿಸಲಿದ್ದಾರೆ ಎಂದು ತಿಳಿಸಿದರು. ಸಂಜೆ 6 ಗಂಟೆಗೆ ಪುಣ್ಯಸ್ಮರಣೆ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ.ಗುರುಸಿದ್ದ ರಾಜಯೋಗೀಂದ್ರ ಹಾಗೂ ಹಾವೇರಿ ಹುಕ್ಕೇರಿ ಮಹಾಸಂಸ್ಥಾನ ಮಠದ ಶ್ರೀ ಮನಿಪ್ರ ಸದಾಶಿವ ಮಹಾಸ್ವಾಮೀಜಿ ವಹಿಸಲಿದ್ದಾರೆ. ನಾಡಿನ ಪ್ರಖ್ಯಾತ ಪ್ರವಚನ ಯೋಗಿ ತಿಮ್ಮಾಪುರ ಮುದುಗಲ್ ಕಲ್ಯಾಣ ಆಶ್ರಮದ ಪೂಜ್ಯ ಮಹಾಂತ ಸ್ವಾಮೀಜಿ ಪ್ರವಚನ ನಡೆಯಲಿದೆ. ಕೂಡಲ ಗುರುನಂಜೇಶ್ವರ ಮಠದ ಮಹೇಶ್ವರ ಶಿವಾಚಾರ್ಯರು ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದರು. ಈ ಕಾರ್ಯಕ್ರಮವನ್ನು ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಲಿದ್ದು, ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಗುವುದು. ಶಿವಯೋಗಾಶ್ರಮದ ಕಾರ್ಯಾಧ್ಯಕ್ಷ ಹಾಗೂ ಸಂಸದ ರಾಘವೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ವಿಜಯೇಂದ್ರ ಉಪಸ್ಥಿತರಿರುವರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀ ಮಠದ ಪೀಠಾಧ್ಯಕ್ಷ ಮಹಾತಪಸ್ವಿ ಶ್ರೀ ಮನಿಪ್ರ ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ರುದ್ರಮುನೀಶ್ವರ ಗ್ರಾಮಾಭಿವೃದ್ದಿ ಸಮಿತಿ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರಂಗಪ್ಪ, ಗ್ರಾಪಂ ಸದಸ್ಯ ಕೆರೆಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. - - - -27ಕೆ.ಎಸ್.ಕೆ.ಪಿ1: ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎನ್.ವಿ ಈರೇಶ್ ಮಾತನಾಡಿದರು.