ಕನ್ನಡಪ್ರಭ ವಾರ್ತೆ, ತುಮಕೂರುಎಣ್ಣೆ ಬತ್ತಿಗೂ ಕಾಸಿಲ್ಲದ ಹೊತ್ತಲ್ಲಿ ಸಿದ್ಧಗಂಗಾ ಮಠದ ಪೀಠಾರೋಹಣವೇರಿ ದೇಶವೇ ಇತ್ತ ಕಡೆ ತಿರುಗುವಂತೆ ಮಾಡಿ ಸಿದ್ಧಗಂಗೆಯನ್ನು ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಯವರ 6 ನೇ ಪುಣ್ಯ ಸ್ಮರಣೆಗೆ ಸಹಸ್ರಾರು ಮಂದಿ ಭಕ್ತರು ಸಾಕ್ಷಿಯಾದರು.ಶ್ರೀಕ್ಷೇತ್ರದಲ್ಲಿ ನಡೆದ ಶ್ರೀಗಳ 6ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್, ಕೇಂದ್ರ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಸೇರಿದಂತೆ ವಿವಿಧ ಮಠಾಧೀಶರುಗಳು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಶ್ರೀಗಳ ಗದ್ದುಗೆ ದರ್ಶನ ಪಡೆದು ಸಾಕ್ಷಿಯಾದರು.ಲಿಂ. ಡಾ. ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವೇದ ಘೋಷಗಳು ಮೊಳಗಿದವು. ಶ್ರೀಗಳ 6ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯರಾಗಿರುವ ಶಿವಯೋಗಿ ಮಂದಿರ ಬಗೆ ಬಗೆಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದ್ದು, ಶ್ರೀಗಳ ಗದ್ದುಗೆಯನ್ನು ವಿವಿಧ ಪುಷ್ಪ, ಹಣ್ಣು ಹಂಪಲುಗಳಿಂದ ವಿಶೇಷವಾಗಿ ಸಿಂಗರಿಸಲಾಗಿದ್ದು, ವಿದ್ಯುತ್ ದೀಪಾಲಂಕಾರದೊಂದಿಗೆ ಸಿದ್ದಗಂಗಾ ಮಠ ಕಂಗೊಳಿಸುತ್ತಿತ್ತು..
ಈ ಮೆರವಣಿಗೆಯುದ್ದಕ್ಕೂ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೆಆರ್‌ಡಿಎಲ್ ಮಾಜಿ ಅಧ್ಯಕ್ಷ ರುದ್ರೇಶ್, ಎಚ್.ಎನ್. ದೀಪಕ್ ಸೇರಿದಂತೆ ಹರಗುರುಚರಮೂರ್ತಿಗಳು, ಭಕ್ತಾದಿಗಳು, ಶಾಲಾ ಮಕ್ಕಳು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.ಶ್ರೀಗಳ ಭಾವಚಿತ್ರ ಮೆರವಣಿಗೆಯಲ್ಲಿ ಕರಡಿ ವಾದ್ಯ, ನಂದಿಧ್ವಜ ಕುಣಿತ, ಡೋಲು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಹಾಗೂ ವಾದ್ಯ ಮೇಳಗಳು ಪಾಲ್ಗೊಂಡು ಮೆರಗು ನೀಡಿದವು. 6 ಕಡೆ ದಾಸೋಹ....ಶ್ರೀಗಳ ೬ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಶ್ರೀಮಠದ 6 ಕಡೆಗಳಲ್ಲಿ ಸಹಸ್ರಾರು ಭಕ್ತಾದಿಗಳಿಗಾಗಿ ಬಗೆ ಬಗೆಯ ಖಾದ್ಯಗಳೊಂದಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮಠದ ಕೈಗಾರಿಕಾ ವಸ್ತುಪ್ರದರ್ಶನದ ಆವರಣ, ಸಾದರ ಕೊಪ್ಪಲು, ಕೆಂಪಹೊನ್ನಯ್ಯ, ಅತಿಥಿಗೃಹ, ಹೊಸ ಪ್ರಸಾದ ನಿಲಯ, ಹಳೆ ಪ್ರಸಾದ ನಿಲಯ ಸೇರಿದಂತೆ 6 ಕಡೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು., ಬೆಳಗಿನ ಉಪಹಾರ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನ ಚಿತ್ರಾನ್ನ, ಪಾಯಸ, ಮಾದ್ಲಿ, ಖಾರಬೂಂದಿ, ಅನ್ನಸಾಂಬರು, ಸಿಹಿ ಬೂಂದಿ, ಮೈಸೂರು ಪಾಕ್ ಸೇರಿದಂತೆ ವಿವಿಧ ಖಾದ್ಯಗಳನ್ನು ಭಕ್ತರು ಸವಿದು ಪುನೀತರಾದರು.ಮುಂಜಾನೆಯಿಂದಲೇ ನಾಡಿನ ವಿವಿಧೆಡೆಯಿಂದ ಧಾವಿಸಿದ್ದ ಸಹಸ್ರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀಗಳ ಗದ್ದುಗೆ ದರ್ಶನ ಪಡೆದರು. ಶ್ರೀಮಠದಲ್ಲಿ ಭಕ್ತಾದಿಗಳಿಗೆ, ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ಅಡಿಷನಲ್ ಎಸ್ಪಿ ವಿ. ಮರಿಯಪ್ಪ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು.