ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಮಾಜಿಕ-ಆರ್ಥಿಕ -ಶೈಕ್ಷಣಿಕ ಸಮೀಕ್ಷೆಯಲ್ಲಿ ಆಧಾರ್ ಸಂಖ್ಯೆ ಪಡೆಯುವುದು ಜನರ ಖಾಸಗಿತನದ ಉಲ್ಲಂಘನೆಯ ಭೀತಿ ಸೃಷ್ಟಿಸುವುದಿಲ್ಲವೇ? ಸೇರ್ಪಡೆ ಮಾಡಲಾಗಿರುವ 1,561 ಜಾತಿ-ಧರ್ಮ ವರ್ಗೀಕರಣಕ್ಕೆ ಆಧಾರವೇನು? ಜನರು ಸಮೀಕ್ಷೆಯಲ್ಲಿ ಭಾಗಿಯಾಗುವುದು ಕಡ್ಡಾಯವಲ್ಲ ಎಂದು ಗಣತಿದಾರರಿಗೆ ಮನವರಿಕೆ ಮಾಡಿಕೊಡಲಾಗಿದೆಯೇ? ಇನ್ನೂ ಬಹಿರಂಗಪಡಿಸದ 2015ರ ಸಮೀಕ್ಷೆಯ ವರದಿಯನ್ನು ಈ ಸಮೀಕ್ಷೆಗೆ ಆಧರಿಸುವುದು ಹೇಗೆ? ಸಮೀಕ್ಷೆಗೆ ಈಗಾಗಲೇ 20 ಕೋಟಿ ರು. ವ್ಯಯಿಸಲಾಗಿದೆ. ಹಾಗಾದರೆ, ಸಮೀಕ್ಷೆಗೆ ತಡೆ ನೀಡಿದರೆ ಸರ್ಕಾರಕ್ಕೆ ಬಾಕಿ ಹಣ ಉಳಿತಾಯವಾಗುವುದಿಲ್ಲವೇ?ಹೀಗೆಂದು ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಹೈಕೋರ್ಟ್ ಪ್ರಶ್ನೆಗಳನ್ನು ಕೇಳಿದೆ.
ಸಮೀಕ್ಷೆ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ ಹಾಗೂ ಇತರೆ ಸಂಘಟನೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಜತೆಗೆ ಸಮೀಕ್ಷೆಗೆ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರರ ಮಧ್ಯಂತರ ಮನವಿ ಕುರಿತು ಬುಧವಾರ ಸಹ ಒಂದು ತಾಸಿಗೂ ಅಧಿಕ ಸಮಯ ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ಗುರುವಾರಕ್ಕೆ ವಿಚಾರಣೆ ಮುಂದೂಡಿದೆ.ಹಿಂದುಳಿದ ವರ್ಗಗಳ ಆಯೋಗ ಮತ್ತು ರಾಜ್ಯ ಸರ್ಕಾರದ ವಾದಕ್ಕೆ ಉತ್ತರಿಸಲು ಅರ್ಜಿದಾರರಿಗೆ ಸೂಚಿಸಿದೆ. ಗುರುವಾರ ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನ್ಯಾಯಾಲಯವು ತನ್ನ ಮಧ್ಯಂತರ ಆದೇಶವನ್ನು ಗುರುವಾರವೇ ಪ್ರಕಟಿಸಲಿದೆಯೇ ಅಥವಾ ಮತ್ತೊಂದು ದಿನಕ್ಕೆ ಕಾಯ್ದಿರಿಸಲಿದೆ ಎಂಬುದು ಕುತೂಹಲ ಮೂಡಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ್ ಕಾಮತ್, ಸಮೀಕ್ಷೆಯ ಹೆಸರಿನಲ್ಲಿ ರಾಜ್ಯ ಸರ್ಕಾರ ಜನಗಣತಿ ಮಾಡುತ್ತಿದೆ. ಆದರೆ, 2027ರಲ್ಲಿ ಕೇಂದ್ರ ಸರ್ಕಾರವೇ ಜಾತಿಗಣತಿ ಆರಂಭಿಸಲಿದೆ. ಜನಗಣತಿ ಜೊತೆಗೆ ಜಾತಿ ಗಣತಿಯನ್ನೂ ನಡೆಸಲಿದೆ. ಎಲ್ಲ ರಾಜ್ಯಗಳೂ ಪ್ರತ್ಯೇಕ ಸಮೀಕ್ಷೆಗೆ ಮುಂದಾದರೆ ಸಮಸ್ಯೆ ಎದುರಾಗಲಿದೆ. ರಾಜ್ಯದ ಸಮೀಕ್ಷೆಯಲ್ಲಿ ಜನರು ಉತ್ತರ ನೀಡುವುದು ಕಡ್ಡಾಯ ಅಲ್ಲ ಎಂದಾದರೆ, ಇಂತಹ ಸಮೀಕ್ಷೆಯಿಂದ ಆಗುವ ಪ್ರಯೋಜನವಾದರೂ ಏನು? ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಮೀಕ್ಷೆಗೆ ಇತಿಮಿತಿಗಳಿವೆ ಎಂದು ಆರೋಪಿಸಿದರು.ಇದಕ್ಕೆ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ , ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸಲು ಐದಾರು ವರ್ಷಗಳು ಬೇಕಾಗಬಹುದು. ಅಲ್ಲಿಯವರೆಗೆ ರಾಜ್ಯಗಳು ಜಾತಿಗಳ ಸಮೀಕ್ಷೆ ನಡೆಸಬಾರದು ಎಂದೇನಿಲ್ಲ. ಹಿಂದುಳಿದ ಜನರಿಗೆ ಸವಲತ್ತು ನೀಡಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಜಾತಿಗಳ ಅಂಕಿ- ಅಂಶಗಳನ್ನು ಸಂಗ್ರಹಿಸದೆ ಯೋಜನೆಗಳನ್ನು ರೂಪಿಸಲು ಸಾಧ್ಯವಿಲ್ಲ. ಅಂಕಿ-ಅಂಶಗಳನ್ನು ಸಂಗ್ರಹಿಸುವ ಮುನ್ನವೇ ತಪ್ಪು ಹುಡುಕಲಾಗದು. ಮಾಹಿತಿ ಸಂಗ್ರಹಿಸುವುದು ಹಕ್ಕಿನ ಉಲ್ಲಂಘನೆಯಾಗುವುದಿಲ್ಲ. ಸಮೀಕ್ಷೆ ನಡೆದ ಬಳಿಕ ಅದರಲ್ಲಿ ಲೋಪವಿದ್ದರೆ ಪ್ರಶ್ನಿಸಲಿ. ಸಮೀಕ್ಷೆಯ ಆರಂಭಕ್ಕೂ ಮೊದಲೇ ಪ್ರಶ್ನಿಸಲಾಗಿದೆ. ಸಮೀಕ್ಷೆಯಲ್ಲಿ ಯಾವ ತಪ್ಪಿದೆ ಎಂಬುದನ್ನು ಅರ್ಜಿದಾರರು ಕಾಣಿಸಿಲ್ಲ. ಹೀಗಾಗಿ, ಸಮೀಕ್ಷೆಗೆ ಮಧ್ಯಂತರ ತಡೆ ನೀಡಬಾರದು ಎಂದು ಕೋರಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಸುಪ್ರೀಂಕೋರ್ಟ್ ಕೂಡ ಹಿಂದುಳಿದ ವರ್ಗಗಳ ಸಮೀಕ್ಷೆಗೆ ಸೂಚಿಸಿದೆ. ರಾಜಕೀಯ ಮೀಸಲಾತಿಗೂ ಸಮೀಕ್ಷೆ ಅಗತ್ಯ ಎಂದಿದೆ. ಆಧಾರ್ ಸಂಖ್ಯೆಯನ್ನು ಸಿಸ್ಟಮ್‌ನಲ್ಲಿ ದಾಖಲಿಸಿದ ಬಳಿಕ ಉಳಿದವರಿಗೆ ಸಿಗುವುದಿಲ್ಲ. ಹೀಗಾಗಿ, ದುರುಪಯೋಗವಾಗುವ ಪ್ರಶ್ನೆಯಿಲ್ಲ. ಇನ್ನೂ 1,561 ಜಾತಿ/ಧರ್ಮ ವರ್ಗೀಕರಣ ಕೇವಲ ಕರಡು ಆಗಿದೆ. ಇದೇ ಅಂತಿಮವಲ್ಲ. ಯಾವುದಾದರೂ ಜಾತಿ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅದನ್ನು ನಮೂದಿಸುವುದಿಲ್ಲ, ಸಮೀಕ್ಷೆಗೆ ಅನುಮತಿಸಬೇಕು ಎಂದು ಕೋರಿದರು.ಹಿಂದುಳಿದ ವರ್ಗಗಳ ಆಯೋಗ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಸಮೀಕ್ಷೆಯ ಅನುಕೂಲಕ್ಕಾಗಿ ಮಾತ್ರವೇ 1,561 ಜಾತಿಗಳನ್ನು ಗುರುತಿಸಲಾಗಿದೆ. ನಮ್ಮ ಜಾತಿ ಸೇರಿಸಿಲ್ಲವೆಂಬ ಕೆಲವರ ಮನವಿ ಮೇರೆಗೆ ಸಮಾಲೋಚನೆ ನಡೆಸಿದ ನಂತರವೇ ಹೊಸ ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆ. ಸಮೀಕ್ಷೆಯಲ್ಲಿ ಜನರು ಹೇಳುವ ಜಾತಿಗಳನ್ನು ನಮೂದಿಸಿಕೊಳ್ಳುತ್ತೇವೆ. ವ್ಯಕ್ತಿಯ ಗುರುತಿಗಾಗಿ ಮಾತ್ರವೇ ಆಧಾರ್ ನಂಬರ್ ಪಡೆಯಲಾಗುತ್ತಿದೆ. ಬೇರೆ ರಾಜ್ಯದವರನ್ನು ಪರಿಗಣಿಸದೇ ಇರಲು ಈ ಆಧಾರ್ ಸಂಖ್ಯೆ ಸಹಾಯವಾಗುತ್ತದೆ. 60 ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯ ಮಾಡುವುದಿಲ್ಲ. ಮಾಹಿತಿ ನಿರಾಕರಿಸಲಾಗಿದೆ ಎಂಬುದನ್ನು ನಮೂದಿಸಲು ಕಲಂ 10ರಲ್ಲಿ ಅವಕಾಶ ಮಾಡಿಕೊಡಲಾಗಿದೆ. ನೀಡುವ ಉತ್ತರವನ್ನಷ್ಟೇ ಬರೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆಗ ಪೀಠ, ಸಮೀಕ್ಷೆ ನಡೆಸುತ್ತಿರುವ ರೀತಿಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಜಾತಿಗಳ ನಡುವೆ ಧರ್ಮ ಸೇರಿಸಲಾಗಿದೆ ಮತ್ತು ಜಾತಿಗಳ ಪಟ್ಟಿ ಪ್ರಕಟಿಸುವ ಮುನ್ನ ವಿಶ್ಲೇಷಣೆ ನಡೆಸಿಲ್ಲ ಎಂಬ ಆರೋಪವಿದೆಯಲ್ಲಾ? ಆಧಾರ್ ನೀಡಬೇಕಿಲ್ಲ, ಗಣತಿ ಮಾಡುವ 1.61 ಲಕ್ಷ ಮಂದಿಗೆ ಮಾಹಿತಿ ಪಡೆಯುವುದು ಕಡ್ಡಾಯವಲ್ಲ ಎಂದು ತಿಳಿಸಲಾಗಿದೆಯೇ? 2015ರಲ್ಲಿ ಸರ್ಕಾರ ನಡೆಸಿರುವ ಸಮೀಕ್ಷೆ ಬಹಿರಂಗಪಡಿಸಿಲ್ಲ. ಹಾಗಾದರೆ, ಈ ಸಮೀಕ್ಷೆಗೆ ಅದನ್ನು ಆಧರಿಸುವುದು ಹೇಗೆ ಎಂದು ಪ್ರಶ್ನಿಸಿತು.ಈ ಪ್ರಶ್ನೆಗಳಿಗೆ ಉತ್ತರಿಸಲು ಕೊಂಚ ತಡವರಿಸಿದ ಪ್ರೊ.ರವಿವರ್ಮ ಕುಮಾರ್, ಜನರು ಮಾಹಿತಿ ನೀಡುವುದು ಕಡ್ಡಾಯವಲ್ಲ. ಹಿಂದಿನ ಸಮೀಕ್ಷೆಯ ಆಧಾರದಲ್ಲಿ 1,561 ಜಾತಿಗಳನ್ನು ಸೇರ್ಪಡೆ ಮಾಡಲಾಗಿದೆಯಷ್ಟೆ. ಜಾತಿ, ಧರ್ಮದ ಮಾಹಿತಿ ನೀಡುವುದು ಸಮೀಕ್ಷೆಯಲ್ಲಿ ಭಾಗವಹಿಸುವ ಜನರ ವಿವೇಚನೆಗೆ ಬಿಟ್ಟ ವಿಚಾರ ಎಂದರು.
ನಂತರ ಸಮೀಕ್ಷೆಗೆ ಈವರೆಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಪೀಠದ ಮತ್ತೊಂದು ಪ್ರಶ್ನೆಗೆ ಪ್ರೊ.ರವಿರ್ಮ ಕುಮಾರ್ ಉತ್ತರಿಸಿ, 20.31 ಕೋಟಿ ಖರ್ಚು ಮಾಡಲಾಗಿದೆ ಎಂದರು.ಕೂಡಲೇ ಸಮೀಕ್ಷೆಗೆ ತಡೆ ನೀಡಿದರೆ ಬಾಕಿ ಹಣ ಸರ್ಕಾರಕ್ಕೆ ಉಳಿತಾಯವಾಗುತ್ತದೆಲ್ಲವೇ? ಎಂದು ನುಡಿದ ಪೀಠ, ಸೈಬರ್ ಅಪರಾಧ ಹೆಚ್ಚುತ್ತಿರುವ ಈ ದಿನಗಳಲ್ಲಿ ಎಲ್ಲರ ಆಧಾರ್ ಸಂಖ್ಯೆ ಪಡೆಯುವುದು ಜನರ ಖಾಸಗಿತನ ಉಲ್ಲಂಘನೆಯ ಭೀತಿ ಸೃಷ್ಟಿಸುವುದಿಲ್ಲವೇ ಎಂದು ಸರ್ಕಾರವನ್ನು ಪ್ರಶ್ನಿಸಿತು.
ಪ್ರೊ. ರವಿವರ್ಮಕುಮಾರ್ ಅವರು, 1918 ರಿಂದಲೂ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲಾಗಿದೆ. ಬ್ರಿಟಿಷರ ಕಾಲದಲ್ಲೂ ಮಿಲ್ಲರ್ ಸಮಿತಿ ವರದಿ ನೀಡಿದೆ. ಈಗ ಎರಡು ಕೋಟಿ ಮನೆಗಳ ವಿದ್ಯುತ್ ಮೀಟರ್‌ಗಳಿಗೆ ಜಿಯೋ ಟ್ಯಾಗ್ ಮಾಡಲಾಗಿದೆ. ಅದಕ್ಕಾಗಿ ಮಾತ್ರವೇ ಮೀಟರ್ ರೀಡರ್‌ಗಳನ್ನು ಬಳಸಿಕೊಳ್ಳಲಾಗಿದೆ. ಸ್ಟಿಕರ್ ಅಂಟಿಸಿ ಕ್ಯೂಆರ್ ಕೋಡ್ ನಮೂದಿಸಲಾಗಿದೆ. ಸಮೀಕ್ಷೆಯ ನಂತರವೇ ಈ ಸ್ಟಿಕರ್ ಭರ್ತಿ ಮಾಡಲಾಗುತ್ತದೆ. ಸ್ಟಿಕ್ಕರ್ ತೆಗೆಯಬಾರದು ಎಂದು ಬಲವಂತ ಏನಿಲ್ಲ. ದೇಶದಲ್ಲೇ ಮೊದಲ ಬಾರಿಗೆ ಹೌಸ್ ಲಿಸ್ಟಿಂಗ್ ಮಾಡಲಾಗಿದೆ ಎಂದರು.