ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಬನಹಟ್ಟಿಯ ಕುಸ್ತಿ ಮೈದಾನದಲ್ಲಿ ಭಾನುವಾರ ಜೈ ಹನುಮಾನ್ ವ್ಯಾಯಾಮ ಶಾಲೆ ಮತ್ತು ವಿವಿಧೋದ್ದೇಶ ಕುಸ್ತಿ ಸಂಘದಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿಯಲ್ಲಿ ಪೈಲ್ವಾನರು ಜಗಜಟ್ಟಿಗಳು ಮದಗಜಗಳಂತೆ ಕಾದಾಡಿದರು.ಮಹಿಳೆಯರ ಕುಸ್ತಿಗಳು ಪ್ರೇಕ್ಷಕರಿಗೆ ರಸದೌತಣ ನೀಡಿದರೆ, ಕುಸ್ತಿ ವೀಕ್ಷಿಸಲು ಅನೇಕ ಗ್ರಾಮ ಮತ್ತು ಪಟ್ಟಣಗಳಿಂದ ಅಪಾರ ಪ್ರಮಾಣದ ಜನಸಾಗರ ಹರಿದು ಬಂದಿತ್ತು. ಹೊಡಿ, ಎತ್ತ, ತಿರುವ ಹಾಕ.. ಉಕಾಡ್ ಹಾಕ್ಯಾನ್ರಿ.. ಟಾಂಗ್ ಜೋಡಿ ಒಳ ಟಾಂಗ್, ಹೊರ ಟಾಂಗ್, ದಿಸೆ ಜೋಡಿ ಚಿತ್ತ ಹಾಕ್ಯಾನ್ರೀ... ಹೀಗೆ ಪ್ರೇಕ್ಷಕರ ಕಡೆಯಿಂದ ಕಿರುಚಾಟ ಸಿಳ್ಳೆ, ಚಪ್ಪಾಳೆ ಸದ್ದು ಪೈಲ್ವಾನರಲ್ಲಿ ಗೆಲ್ಲಬೇಕೆಂಬ ಹುಮ್ಮಸ್ಸು ಮೂಡಿಸುತ್ತಿತ್ತು.ಗೆಲುವಿಗಾಗಿ ಜಟ್ಟಿಗಳ ಪರಸ್ಪರ ಕಾದಾಟ ರೋಮಾಂಚನಗೊಳಿಸಿತು.
ಸಿಂಧು ಹಳಂಗಳಿ (ನೀಲಿ ಟೀ ಶರ್ಟ್) ಅವರು ಡಾಕ್ (ಎದುರು-ಬದುರು ಬೆನ್ನು ಹಿಡಿದು ನೆಲಕ್ಕೆ ಹಾಕುವುದು) ಚಿತ್ ಡಾವ್ ಮಾಡಿ ಸೌಜನ್ಯ ಹಳಿಂಗಳಿ ಅವರನ್ನು ಮಣಿಸುಲ್ಲಿ ಯಶಸ್ವಿಯಾದರು.೨೦೦ಕ್ಕೂ ಅಧಿಕ ಕುಸ್ತಿ ಪಟುಗಳು ವಿಭಿನ್ನ ಕಾದಾಟ ನಡೆಸಿ ತಮ್ಮದೇ ಆದ ಟಾಂಗ್ ಹಾಕುತ್ತ ಎದುರಾಳಿಯನ್ನು ಚಿತ್ ಮಾಡಲು ಸೆಣಸಾಟ ನಡೆಸಿ ನೆರೆದ ಜನರನ್ನು ರಂಜಿಸಿದರು. ಕೆಲವೊಮ್ಮೆ ನಿರ್ಣಾಯಕರು ಗಲಿಬಿಲಿಯಾಗಿ ತಪ್ಪು ನಿರ್ಣಯ ನೀಡಿದಾಗ ಪ್ರೇಕ್ಷಕರು ಕೇಕೆ ಹಾಕಿ ಪಟುಗಳಿಗೆ ನ್ಯಾಯ ದೊರಕಿಸಿಕೊಟ್ಟರು.
ಶಾಸಕ ಸಿದ್ದು ಸವದಿ, ಪ್ರೊ.ಬಿ.ಕೆ. ಕೊಣ್ಣೂರ, ನಗರಾಧ್ಯಕ್ಷೆ ವಿದ್ಯಾ ದಭಾಡಿ, ಸಂಜಯ ಜವಳಗಿ, ಸಿದ್ದನಗೌಡ ಪಾಟೀಲ, ಶ್ರೀಶೈಲ ದಭಾಡಿ, ರಾಜು ಭದ್ರನ್ನವರ, ಬಾಳು ಗಣೇಶನವರ, ಮಹಾಶಾಂತ ಶೆಟ್ಟಿ, ಸಿದ್ರಾಮಪ್ಪ ಸವದತ್ತಿ, ಶಿವು ಜಾಲಿಗಿಡದ, ಮೀನಾಕ್ಷಿ ಸವದಿ, ಶಾಂತಾ ಸೊರಗಾಂವಿ, ಸುವರ್ಣ ಕೊಪ್ಪದ, ಕಮಲಾ ಹಾರೂಗೇರಿ, ಮಾಲಾ ಬಾವಲತ್ತಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.