ಕೆಮಿಕಲ್‌ ಕಂಪನಿ ವಿರುದ್ಧ ನ್ಯಾಯಾಲಯಕ್ಕೆ ರಿಟ್‌ ಸಿದ್ಧತೆ

KannadaprabhaNewsNetwork |  
Published : Aug 08, 2025, 01:00 AM IST
ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ನೋಟ. | Kannada Prabha

ಸಾರಾಂಶ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ ಹಾಗೂ ದುರ್ನಾತದ ಪರಿಣಾಮ, ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿನ ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಹಾಗೂ ಜಲ-ಜೀವಸಂಕುಲದ ಮೇಲೆ ಆತಂಕ ಮೂಡಿಸಿದೆ ಎಂದು ದೂರಿ, "ಕೈಗಾರಿಕಾ ಹಠಾವೋ, ಕಡೇಚೂರು ಬಚಾವೋ ಸಮಿತಿ " ಹಾಗೂ ಬಳ್ಳಾರಿಯ "ಜನಸಂಗ್ರಾಮ ಪರಿಷತ್‌ " ಜಂಟಿಯಾಗಿ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದೆ.

ಬಳ್ಳಾರಿ ಜನಸಂಗ್ರಾಮ ಪರಿಷತ್ , ಕಡೇಚೂರು ಬಾಡಿಯಾಳ ಹೋರಾಟ ಸಮಿತಿ ಜಂಟಿಯಾಗಿ ಕಾನೂನು ಸಮರಕ್ಕೆ ಸಿದ್ಧತೆ

- ಕನ್ನಡಪ್ರಭ ಸರಣಿ ವರದಿ ಭಾಗ : 122

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್‌ ತ್ಯಾಜ್ಯ ಕಂಪನಿಗಳಿಂದ ಹೊರಹೊಮ್ಮುತ್ತಿರುವ ವಿಷಗಾಳಿ ಹಾಗೂ ದುರ್ನಾತದ ಪರಿಣಾಮ, ಸುತ್ತಮುತ್ತಲ ಹತ್ತಾರು ಹಳ್ಳಿಗಳಲ್ಲಿನ ಜನರ ಆರೋಗ್ಯದ ಮೇಲೆ ಅಡ್ಡಪರಿಣಾಮಗಳು ಹಾಗೂ ಜಲ-ಜೀವಸಂಕುಲದ ಮೇಲೆ ಆತಂಕ ಮೂಡಿಸಿದೆ ಎಂದು ದೂರಿ, "ಕೈಗಾರಿಕಾ ಹಠಾವೋ, ಕಡೇಚೂರು ಬಚಾವೋ ಸಮಿತಿ " ಹಾಗೂ ಬಳ್ಳಾರಿಯ "ಜನಸಂಗ್ರಾಮ ಪರಿಷತ್‌ " ಜಂಟಿಯಾಗಿ ಕಾನೂನು ಸಮರಕ್ಕೆ ಸಿದ್ಧತೆ ನಡೆಸಿದೆ.

2011 ರಲ್ಲಿ ಭೂಸ್ವಾಧೀನ ವೇಳೆ ರೈತರಿಗೆ ನೀಡಲಾಗಿದ್ದ ಭರವಸೆಯಂತೆ, "ಬಿ " ಕೆಟಗರಿ ಕೈಗಾರಿಕೆಗಳ ಬದಲು ಅಪಾಯಕಾರಿ ಕಾರ್ಖಾನೆಗಳ ಸ್ಥಾಪನೆ ಸೇರಿದಂತೆ, ರಾಸಾಯನಿಕ ಕಾರ್ಖಾನೆಗಳಿಂದ ಅಲ್ಲುಂಟಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ದಾಖಲೆಗಳ ಸಮೇತ ವರದಿ ಸಲ್ಲಿಸಿ, ಕೈಗಾರಿಕೆಗಳ ಸ್ಥಾಪನೆಗೂ ಮುನ್ನ, ಭೂಮಿ ಪಡೆಯುವ ವೇಳೆ ಸರ್ಕಾರ ಜನರಿಗೆ ನೀಡಿದ್ದ ಭರವಸೆ ಹಾಗೂ ಒಪ್ಪಂದಗಳ ಉಲ್ಲಂಘನೆ ಆಧಾರದಡಿ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಲಿದ್ದೇವೆ ಎಂದು ಸೈದಾಪುರದ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಭೀಮಣ್ಣ ವಡವಟ್‌ ಹಾಗೂ ಸಂಡೂರಿನ ಪರಿಸರ ಹೋರಾಟಗಾರ ಶ್ರೀಶೈಲ ಆಲದಹಳ್ಳಿ "ಕನ್ನಡಪ್ರಭ "ಕ್ಕೆ ತಿಳಿಸಿದ್ದಾರೆ.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ದುಸ್ಥಿತಿ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಯೊಂದಿಗೆ ತಾವು ಈಗಾಗಲೇ ಮಾತನಾಡಿದ್ದು, ಇದಕ್ಕೆಂದು ಡಬ್ಲ್ಯೂಎಚ್‌ಓ ತಂಡದಿಂದ ಪ್ರತ್ಯೇಕ ಅಧ್ಯಯನಕ್ಕೆ ಮನವಿ ಮಾಡಿದ್ದೇವೆ, ಸರ್ಕಾರ ಭೂಬೆಲೆ ನಿರ್ಧರಣಾ ಸಭೆಯಲ್ಲಿ ಸಂತ್ರಸ್ತರಿಗೆ ಹೇಳಿದ್ದೊಂದು, ಆಗಿದ್ದೊಂದು ಎಂದು. ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರಗಳು, ಜನರು/ರೈತರ ಯಾಮಾರಿಸಿ ಭೂಸ್ವಾಧೀನಕ್ಕೆ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ. ಹಾಗೆ ನೋಡಿದರೆ, ಅಪಾಯಕಾರಿ "ರೆಡ್‌ ಝೋನ್‌ " ರಾಸಾಯನಿಕ ತ್ಯಾಜ್ಯ ಕಾರ್ಖಾನೆಗಳ ಸ್ಥಾಪಿಸುವ ಉದ್ದೇಶವೇ ಇಲ್ಲಿರಲಿಲ್ಲ. ಜನಸಂಪರ್ಕ ಸಭೆಯಲ್ಲಿ ಇದನ್ನು ಮರೆ ಮಾಚಲಾಗಿದೆ ಎಂಬ ಸಂತ್ರಸ್ತರ ದೂರಿನಡಿ

ನ್ಯಾಯಾಲಯಕ್ಕೆ ಮೊರೆ ಹೋಗಲಾಗುವುದು ಎಂದು ಭೀಮಣ್ಣ "ಕನ್ನಡಪ್ರಭ "ಕ್ಕೆ ತಿಳಿಸಿದರು.

ಕೆಮಿಕಲ್‌ ಕಂಪನಿಗಳ ವಿರುದ್ಧ ಈಗಾಗಲೇ ನಾಲ್ಕು ಗ್ರಾಮ ಪಂಚಾಯ್ತಿಗಳು ಸಾಮಾನ್ಯ ಸಭೆಯಲ್ಲಿ ಠರಾವು ಹೊರಡಿಸಿವೆ, ವಿವಿಧ ಆಯೋಗಗಳಲ್ಲಿ ದೂರು ದಾಖಲಾಗಿವೆ, ಸರ್ಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಚಿವರುಗಳಿಗೂ ಸಮಸ್ಯೆಗಳ ಬಗ್ಗೆ ಗಮನಕ್ಕಿದೆ. ಪರಿಸರ ಮಂಡಳಿಯ ಷರತ್ತುಗಳ ಉಲ್ಲಂಘಿಸಿದ ಆರೋಪದಡಿ 27 ಕಾರ್ಖಾನೆಗಳಿಗೆ ನೋಟೀಸ್‌ ನೀಡಿ, ಒಂದು ಕಂಪನಿ ಸೀಝ್ ಮಾಡಲಾಗಿತ್ತು. ಕಳೆದ ತಿಂಗಳು ಅದನ್ನೂ ಸಹ ಷರತ್ತಿನ ಮೇಲೆ ಮತ್ತೇ ಮರು ಚಾಲನೆಗೊಳಿಸಲಾಗಿದೆ. ಷರತ್ತುಗಳ ಉಲ್ಲಂಘನೆಯಾಗಿದ್ದ ಬಗ್ಗೆ ಸರ್ಕಾರ ಅವರಿಗೆ ಏನು ದಂಡ ವಿಧಿಸಿತು ? ಜನರ ಜೀವದ ಜೊತೆ ಚೆಲ್ಲಾಟ ಆಡಿರುವ ಅವರಿಗೆ ನೀಡಿದ ಶಿಕ್ಷೆಯಾದರೂ ಯಾವುದು ? ಯಾವ ಆಧಾರದ ಮೇಲೆ ಮತ್ತೇ ಅನುಮತಿ ನೀಡಿದೆ ? ಉಳಿದ ಕಂಪನಿಗಳು ನಿರಂತರವಾಗಿ ಮಾಲಿನ್ಯಕ್ಕೆ ಕಾರಣವಾಗುತ್ತಿದ್ದರೂ ಕ್ರಮ ಕೈಗೊಳ್ಳಲು ಆಡಳಿತ ಹಿಂದೇಟು ಏಕೆ ಹಾಕುತ್ತಿದೆ ? ಇದನ್ನು ಹೊರತುಪಡಿಸಿ ಮತ್ತೇ 3269 ಎಕರೆ ಹೆಚ್ಚುವರಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ್ದನ್ನು ರದ್ದುಪಡಿಸುವಲ್ಲಿ ಸರ್ಕಾರ ಯಾಕೆ ಮುಂದಾಗುತ್ತಿಲ್ಲ ? ಎಂಬ ಮುಂತಾದವುಗಳ ಬಗ್ಗೆ ಕಾನೂನು ಸಮರಕ್ಕೆ ಸಿದ್ಧವಾಗುವುದಾಗಿ ಹೇಳಿದರು.

--------

ಕಳೆದ ಕೆಲವು ದಿನಗಳಿಂದ ಕೆಮಿಕಲ್ ಕಂಪನಿಗಳು ಹೊರಹಾಕುತ್ತಿರುವ ದಟ್ಟವಾದ ಕಪ್ಪುಹೊಗೆಯಿಂದಾಗಿ ಉಸಿರಾಡಲೂ ಕಷ್ಟವಾಗುತ್ತಿದೆ. ತ್ಯಾಜ್ಯ ವಿಲೇವಾರಿ ಅವೈಜ್ಞಾನಿಕವಾಗಿ ನಡೆದಿದೆ, ಕೆಲವು ಕಂಪನಿಗಳಲ್ಲಿ ರಾಸಾಯನಿಕ ಸ್ಫೋಟ ಸಂಭವಿಸಿ ಅವಘಡಗಳು ನಡೆದಿವೆ. ಇವೆಲ್ಲವನ್ನೂ ಮರೆ ಮಾಚುತ್ತಿರುವ ಪರಿಸರ ಮಂಡಳಿ, ಮೇಲಾಧಿಕಾರಿಗಳಿಗೆ ವಾಸ್ತವ ವರದಿ ನೀಡುವಲ್ಲಿನ ನಿರ್ಲಕ್ಷ್ಯ ಕಾರ್ಖಾನೆಗಳ ಪರವಾಗಿದ್ದಂತಿದೆ ಎಂಬ ಅನುಮಾನ ಮೂಡುತ್ತಿದೆ.

: ಭೀಮಣ್ಣ ವಡವಟ್‌, ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ.

---------

ರಾಜ್ಯದ ಹಿರಿಯ ಖ್ಯಾತ ನ್ಯಾಯವಾದಿಯೊಬ್ಬರ ಮೂಲಕ ಕೈಗಾರಿಕೆಗಳಿಗೆ ನೀಡಲಾಗಿರುವ ಪರಿಸರ ಅನುಮತಿ ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಮೊರೆ ಹೋಗಲಾಗುವುದು, ಇದಕ್ಕೆಂದು ಇದೇ ತಿಂಗಳಲ್ಲಿ ಕೈಗಾರಿಕಾ ಪ್ರದೇಶಕ್ಕೆ ಬಳ್ಳಾರಿಯ ಜನಸಂಗ್ರಾಮ ಪರಿಷತ್‌ ಪದಾಧಿಕಾರಿಗಳು ಭೇಟಿ ನೀಡಲಿದ್ದು, ಮುಂದಿನ ಕ್ರಮಗಳ ಬಗ್ಗೆ ಗ್ರಾಮಗಳ ಸಮಾನ ಮನಸ್ಕರ ಜೊತೆ ಚರ್ಚೆ ನಡೆಸಲಿದ್ದೇವೆ. ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ಜನ ಸಹಕಾರ ನೀಡಿದರೆ ದೊಡ್ಡ ಜನಾಂದೋಲನ ರೂಪಿಸಲು ಸಿದ್ಧ.

: ಶ್ರೀಶೈಲ ಆಲದಹಳ್ಳಿ, ಪರಿಸರ ಹೋರಾಟಗಾರ, ಸಂಡೂರು, ಬಳ್ಳಾರಿ ಜಿಲ್ಲೆ.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ