ಅಣ್ಣಾಸಾಬ ತೆಲಸಂಗ
ಕನ್ನಡಪ್ರಭ ವಾರ್ತೆ ಅಥಣಿತಾಲೂಕಿನಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಥಣಿ ಪೂರ್ವ ಹಾಗೂ ಉತ್ತರ ಭಾಗದ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಇನ್ನೂ ಎರಡು ತಿಂಗಳು ಬೇಸಿಗೆ ಮುಂದುವರಿಯಲಿದ್ದು, ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವು ಹೇಗೆ ಮಾಡೋದು ಎಂಬ ಚಿಂತೆ ಅನ್ನದಾತರು, ಸಾರ್ವಜನಿಕರನ್ನು ಕಾಡುತ್ತಿದ್ದರೆ, ಟ್ಯಾಂಕರ್ ಮೂಲಕ ನೀರು ಪೂರೈಸಲು ಸಮಾಜಸೇವಕರು, ಜನಪ್ರತಿನಿಧಿಗಳು ಮುಂದಾಗಿದ್ದರೂ ನೀತಿ ಸಂಹಿತೆ ಅಡ್ಡಿಯಾಗಿದೆ.
ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಇನ್ನೂ ಅಲ್ಪಸ್ವಲ್ಪ ನೀರು ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಕಂಡುಬಂದಿಲ್ಲ. ಆದರೆ ತಾಲೂಕಿನ ಪೂರ್ವ ಭಾಗ ಮತ್ತು ಉತ್ತರ ಭಾಗದ ಹಳ್ಳಿಗಳಲ್ಲಿ ಅಂತರ್ಜಲಮಟ್ಟ ಕುಸಿದು ಬಾವಿ ಹಾಗೂ ಕೊಳವೆಬಾವಿಗಳಲ್ಲಿ ನೀರಿಲ್ಲದೆ ಜೀವಜಲಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಗ್ರಾಮಮಟ್ಟದ ಅಧಿಕಾರಿಗಳಿಗೆ ಮೇಲಧಿಕಾರಿಗಳು ಅನುಮತಿ ನೀಡದಿರುವುದರಿಂದ ತೋಟದ ವಸತಿ ಜನರಿಗೆ ಸಕಾಲಕ್ಕೆ ನೀರು ಸರಬರಾಜು ಆಗದೆ ಜನಾಕ್ರೋಶಕ್ಕೆ ಕಾರಣವಾಗಿದೆ.ತಾಲೂಕಿನ ಪೂರ್ವ ಭಾಗದ ತೆಲಸಂಗ ಹೋಬಳಿಯ ತೆಲಸಂಗ, ಪಡತರವಾಡಿ, ಐಗಳಿ, ಕೋಹಳ್ಳಿ, ಕೆಸ್ಕರದಡ್ಡಿ, ಕಕಮರಿ, ರಾಮತೀರ್ಥ, ಕೊಟ್ಟಲಗಿ, ಬನ್ನೂರ, ಕನ್ನಾಳ, ಹಾಲಳ್ಳಿ, ಅರಟಾಳ, ಬಾಡಗಿ, ಮಾಣಿಕರಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಉತ್ತರ ಭಾಗದ ಅನಂತಪುರ ಹೋಬಳಿಯಲ್ಲಿ ಬರುವ ಅನಂತಪುರ, ಅರಳಿಹಟ್ಟಿ, ಖಿಳೇಗಾವಿ, ಮದಬಾವಿ, ಜಂಬಗಿ, ಸಂಬರಗಿ, ಪಾಂಡೆಗಾಂವ ಸೇರಿ ಇನ್ನಿತರ ಗ್ರಾಮಗಳ ತೋಟದ ವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಗ್ರಾಪಂ ಆಡಳಿತ ಸಮರ್ಪಕ ನೀರು ಪೂರೈಕೆಯಲ್ಲಿ ವಿಫಲವಾಗಿದೆ. ಇಲ್ಲಿನ ಜನರು ದಿನವಿಡಿ ನೀರಿಗಾಗಿಯೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬಹುಗ್ರಾಮ ಯೋಜನೆಯ ಪಂಪ್‌ಸೆಟ್ ದುರಸ್ತಿ:
ತಾಲೂಕಿನ ಐಗಳಿ ಕ್ರಾಸ್ ಮಾಣಿಕ ನಗರದಲ್ಲಿ ಮತ್ತು ಗುಂಡಿವಾಡಿ ಗ್ರಾಮದ ಹತ್ತಿರ ನಿರ್ಮಾಣ ಸ್ಥಾಪನೆಗೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪಂಪ್ ಸೆಟ್ ದುರಸ್ತಿಯಲ್ಲಿದ್ದು, ಕಳೆದ 15 ದಿನಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಹೆಚ್ಚುವರಿ ಪಂಪಸೆಟ್ ಇಟ್ಟುಕೊಂಡು ಕುಡಿಯುವ ನೀರು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ 30 ಗ್ರಾಮಗಳ ಜನರು ಗ್ರಾಪಂಗಳ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಳ್ಳುತ್ತಿರುವ ಪ್ರಸಂಗ ಸಾಮಾನ್ಯವಾಗಿವೆ.ಸಮಾಜ ಸೇವಕರಿಗೆ ನೀತಿ ಸಂಹಿತೆ ಅಡ್ಡಿ:
ಅನೇಕ ಸಮಾಜ ಸೇವಕರು, ಗ್ರಾಮ ಪಂಚಾಯತಿ ಸದಸ್ಯರು ಮತ್ತು ಪುರಸಭೆ ಸದಸ್ಯರು ಸ್ವಂತ ಖರ್ಚಿನಲ್ಲಿ ನೀರಿನ ಟ್ಯಾಂಕರ್ ಮೂಲಕ ಅಗತ್ಯವಿರುವಲ್ಲಿ ಜನರಿಗೆ ನೀರನ್ನು ಪೂರೈಸಿ ಮಾನವೀಯತೆ ಮೆರೆಯುತ್ತಿದ್ದರು. ಆದರೆ ಈಗ ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಲೂ ಅವಕಾಶ ಇಲ್ಲದಂತಾಗಿದೆ. ಬರದ ಸಂಕಷ್ಟದಲ್ಲಿ ಸಿಲುಕಿರುವ ಜನತೆಗೆ ಚುನಾವಣೆ ನೀತಿ ಸಂಹಿತೆ ಬರೆ ಎಳೆದಂತಾಗಿದೆ.ಬರಗಾಲದ ಪರಿಸ್ಥಿತಿ ಎದುರಿಸಲು ಮೇಲ್ನೋಟಕ್ಕೆ ತಾಲೂಕು ಆಡಳಿತ ಸನ್ನವಾಗಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಈಗ ಲೋಕಸಭೆ ಚುನಾವಣೆ ಚಟುವಟಿಕೆಗಳಲ್ಲಿಯೇ ಹೆಚ್ಚಾಗಿ ತಲ್ಲೀನರಾಗಿದ್ದಾರೆ. ಇದರಿಂದ ಎಲ್ಲ ಗ್ರಾಮಗಳಿಗೆ ಸಕಾಲಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೆ, ಮೊದಲು ಅದೇ ಗ್ರಾಮದ ರೈತರಿಂದ ಕುಡಿಯುವ ನೀರು ಪಡೆದು ಪರಿಹರಿಸಲು ಅದ್ಯತೆ ನೀಡಿ ಕ್ರಮ ಕೈಗೊಳ್ಳಬೇಕು. ರೈತರಿಂದ ನೀರು ಬಿಡಿಸಲು ಅವಕಾಶವಿಲ್ಲದ ಸಂದರ್ಭದಲ್ಲಿ ಗ್ರಾಪಂ ಪಿಡಿಒಗಳು ತಹಸೀಲ್ದಾರಗೆ ದೂರು ನೀಡುವುದು, ತಹಸೀಲ್ದಾರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಬೇಕೆಂಬ ಮಾರ್ಗಸೂಚಿ ಇದೆ.
ಈ ಹಿನ್ನೆಲೆಯಲ್ಲಿ ಗ್ರಾಪಂ ಪಿಡಿಒ ತುರ್ತು ಕ್ರಮಕೈಗೊಳ್ಳಲು ಅಗತ್ಯ ಹಣವಿಲ್ಲ. ಹೀಗಾಗಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ 20 ದಿನಗಳಿಂದ ಆರಂಭವಾಗಿರುವ ನೀರಿನ ಟ್ಯಾಂಕರ್ ಗಳಿಗೆ ತಾಲೂಕು ಆಡಳಿತದಿಂದ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಜನರು, ನೀರಿನ ಟ್ಯಾಂಕರ್ ಗಳ ನಿರ್ವಹಣೆ ಮಾಡುವುದು ಕಷ್ಟವಾಗಿದೆ ಎಂಬುದು ಗ್ರಾಮ ಪಂಚಾಯಿತಿ ಅಧಿಕಾರಿಗಳ ಅಳಲು.ಸರ್ಕಾರ ಅಥಣಿ ಮತ್ತು ಕಾಗವಾಡ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದರೂ ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ. ಬರ ಪರಿಹಾರ ಕಾಮಗಾರಿಗಳು ಆರಂಭವಾಗಿಲ್ಲ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಇಲ್ಲ, ಸ್ಥಳೀಯವಾಗಿ ನೀರಿನ ಸಮಸ್ಯೆ ಪರಿಹರಿಸಲು ಗ್ರಾಪಂ ಅಧಿಕಾರಿಗಳಿಗೆ ಬಳಿ ಹಣವಿಲ್ಲ. ಜಿಲ್ಲಾಡಳಿತ ಕೂಡಲೇ ಟೆಂಡರ್ ಪ್ರಕ್ರಿಯೆ ನಡೆಸಿ ತೋಟದ ವಸತಿಗಳಿಗೆ ನೀರು ಪೂರೈಕೆ ಮಾಡಬೇಕು. - ದೇವೇಂದ್ರ ಬೆಳಗಲಿ, ಗ್ರಾಪಂ ಮಾಜಿ ಸದಸ್ಯ ಐಗಳಿತಾಲೂಕಿನ ಅನೇಕ ಗ್ರಾಮಗಳಲ್ಲಿ ಮತ್ತು ತೋಟದ ವಸತಿ ಜನರಿಗೆ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಕಳೆದ 3-4 ದಿನಗಳಿಂದ ಟ್ಯಾಂಕರ್ ಗಳ ಬೇಡಿಕೆ ಹೆಚ್ಚಾಗಿದ್ದು, ಗ್ರಾಪಂ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಹೆಚ್ಚುವರಿ ಟ್ಯಾಂಕರ್ ಗಳನ್ನು ಒದಗಿಸಲಾಗುವುದು. ನೀರು ಪೂರೈಸಿದ ಟ್ಯಾಂಕರ್ ಗಳಿಗೆ ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಅವರ ಖಾತೆಗೆ ವರ್ಗಾಯಿಸಲಾಗುವುದು. ಯಾವುದೇ ಟ್ಯಾಂಕರ್ ಗಳ ಬಿಲ್ ಬಾಕಿ ಉಳಿಸಿಕೊಳ್ಳಲ್ಲ. ಕೃಷ್ಣಾ ನದಿಯಲ್ಲೂ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ಸಾರ್ವಜನಿಕರು ನೀರನ್ನು ಹಿತ ಮಿತವಾಗಿ ಬಳಸಬೇಕು.
-ವಾಣಿ ಯು., ತಹಸೀಲ್ದಾರ್ ಅಥಣಿ