ಗದಗ: ರಾಜ್ಯದಲ್ಲಿ ಸರ್ಕಾರ ಜಾತಿಗಣತಿ ಪ್ರಾರಂಭಿಸಿದ್ದು, ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡುವುದು ಇದರ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತರೆಲ್ಲರೂ ಕಾಲಂ 8ರಲ್ಲಿ "ಲಿಂಗಾಯತ ಧರ್ಮ " ಎಂದು ಬರೆಸುವಂತೆ ಗದಗ-ಡಂಬಳ ಜ. ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ತಿಳಿಸಿದರು.
ಸಂವಿಧಾನದ ಕಲಂ 25ರ ಪ್ರಕಾರ ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲ ಧರ್ಮಗಳನ್ನು ಮಾನ್ಯ ಮಾಡಬೇಕಾಗಿರುವುದು ಸರ್ಕಾರದ ಆದ್ಯ ಕರ್ತವ್ಯ. ಈ ಕಾರಣಕ್ಕಾಗಿಯೇ ಜನಗಣತಿ ಫಾರ್ಮ್‌ದಲ್ಲಿ 8ನೇ ಕಾಲಂನ 11ನೇ ಉಪಕಾಲಂದಲ್ಲಿ ಇತರೆ ಎಂದು ಪ್ರತ್ಯೇಕ ಕಾಲಂ ಮೀಸಲಾಗಿರಿಸಿದೆ. ಇಲ್ಲಿ ಲಿಂಗಾಯತ ಧರ್ಮ ಎಂದು ಬರೆಯಲು ಗಣತಿದಾರರಿಗೆ ಸೂಚಿಸಬೇಕು. ಹಾಗೆಯೇ ಅವರು ಬರೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇತ್ತೀಚೆಗೆ ಅನೇಕ ಮಠಾಧಿಪತಿಗಳು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯವರು ಧರ್ಮದ ಕಾಲಂದಲ್ಲಿ ಹಿಂದೂ ಎಂದು ಬರೆಸಬಾರದು ಎಂದೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಈ ವಿಷಯವನ್ನು ಲಿಂಗಾಯತರ ವಿವೇಚನೆಗೆ ಬಿಟ್ಟಿರುವುದನ್ನು ಎಲ್ಲರೂ ಗಮನಿಸಿ 8ನೇ ಧರ್ಮದ ಕಾಲಂದಲ್ಲಿ ಲಿಂಗಾಯತ ಧರ್ಮ ಎಂದೇ ಬರೆಸಬೇಕು. 9ನೇ ಜಾತಿ ಕಾಲಂದಲ್ಲಿ ವೀರಶೈವರು ವೀರಶೈವ ಎಂದು, ವೀರಶೈವ ಲಿಂಗಾಯತರು ವೀರಶೈವ ಲಿಂಗಾಯತರೆಂದು, ಲಿಂಗಾಯತದ ಬೇರೆ ಬೇರೆ ಪಂಗಡದವರು ತಮ್ಮ ತಮ್ಮ ಜಾತಿಗಳ ಹೆಸರನ್ನು ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಡುವಕ್ಕಲಿಗ, ಲಿಂಗಾಯತ ಬಣಜಿಗ, ಲಿಂಗಾಯತ ರೆಡ್ಡಿ ಇತ್ಯಾದಿ ಬರೆಸಬೇಕು. ಜಾತಿಗಳಲ್ಲಿ ಉಪಜಾತಿಗಳಿದ್ದರೆ ಉಪಜಾತಿ ಕಾಲಂದಲ್ಲಿ ಅವುಗಳನ್ನು ನಮೂದಿಸಬಹುದು. ಇದರಿಂದ ಲಿಂಗಾಯತರ ಜನಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದು.
ಲಿಂಗಾಯತ ಒಂದು ವಿಶಿಷ್ಟ ಧರ್ಮ. ವಿವಿಧ ಕಾಯಕಗಳನ್ನು ಮಾಡುವ ಪಂಗಡಗಳನ್ನು ಇಂದು ಜಾತಿಗಳೆಂದು ಗುರುತಿಸಲಾಗುತ್ತಿದ್ದರೂ ಎಲ್ಲರಿಗೂ ದೊರೆಯುವ ಸಂಸ್ಕಾರ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಏನೂ ವ್ಯತ್ಯಾಸವಿಲ್ಲ. ಸ್ತ್ರೀ- ಪುರುಷರಿಬ್ಬರಿಗೂ ಸಮಾನ ಧಾರ್ಮಿಕ ಸ್ವಾತಂತ್ರ್ಯವಿದೆ. ಕಾಯಕ- ದಾಸೋಹ ತತ್ವಗಳ ಅಡಿಯಲ್ಲಿ ಈ ಧರ್ಮ ಬಸವಾದಿ ಶರಣರಿಂದ ರೂಪುಗೊಂಡಿದೆ. ಸಮಾನತೆ ಈ ಧರ್ಮದ ಮೂಲ ಆಶಯ. ಸಕಲ ಜೀವಿಗಳಿಗೆ ಲೇಸು ಬಯಸುವುದೇ ಇದರ ಉದ್ದೇಶ. ಈ ಧರ್ಮಾನುಯಾಯಿಗಳು ಜಗತ್ತಿನಲ್ಲಿಯೇ ಒಂದು ವಿಶಿಷ್ಟ ಜನಾಂಗ. ಇವರ ಸಂಸ್ಕೃತಿಯೂ ವೈಶಿಷ್ಟಪೂರ್ಣ. ಈ ಜನಾಂಗದ ಅಸ್ಮಿತೆ ಕಣ್ಮರೆಯಾಗಬಾರದು. ಈ ಜನಾಂಗ ಹಾಗೂ ಸಂಸ್ಕೃತಿಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.