ವೀರಶೈವ ಲಿಂಗಾಯತ ಎಂದು ಬರೆಸಿ: ಖಂಡ್ರೆ

KannadaprabhaNewsNetwork |  
Published : Sep 08, 2025, 01:00 AM IST
Eshwar Khandre 7 | Kannada Prabha

ಸಾರಾಂಶ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಸಮುದಾಯದವರು ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.

 ಬೆಂಗಳೂರು :  ಇದೇ ತಿಂಗಳ 22ರಿಂದ ಆರಂಭವಾಗಲಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಸಮುದಾಯದವರು ವೀರಶೈವ ಲಿಂಗಾಯತ ಎಂದು ಬರೆಸಬೇಕು. ಹಿಂದೂ ಎಂದು ಬರೆಸಬಾರದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರೂ ಆಗಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.22 ರಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯಲಿದೆ. ಹಿಂದಿನಿಂದಲೂ ಮಹಾಸಭಾವು ವೀರಶೈವ ಲಿಂಗಾಯತ ಧರ್ಮದ ಪ್ರತಿಪಾದನೆ ಮಾಡುತ್ತಾ ಬಂದಿದೆ. ಹೀಗಾಗಿ ಧರ್ಮದ ಕಾಲಂನ ಇತರೆ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕು ಎಂಬುದು ಸಾರ್ವತ್ರಿಕ ಅಭಿಪ್ರಾಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನುಳಿದಂತೆ, ಜಾತಿಯ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು, ಉಪ ಜಾತಿಯ ಕಾಲಂನಲ್ಲಿ ತಮ್ಮ ತಮ್ಮ ಉಪಜಾತಿ ಹೆಸರು ಬರೆಸಬೇಕು. ಸರ್ಕಾರಕ್ಕೆ ನಾಡಿನ ಜನರ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ನಿಖರ ಮಾಹಿತಿ ದೊರೆತರೆ, ಕಲ್ಯಾಣ ಕಾರ್ಯಕ್ರಮ ರೂಪಿಸಲು ಅನುಕೂಲವಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸಮೀಕ್ಷೆಯಲ್ಲಿ ತಮ್ಮ ಮಾಹಿತಿ ದಾಖಲಾಗುವಂತೆ ನೋಡಿಕೊಳ್ಳಬೇಕು ಎಂದು ಕರೆ ನೀಡಿದರು.

ಜಾತಿ ಪ್ರಮಾಣ ಪತ್ರಕ್ಕೂ ಸಮೀಕ್ಷೆಗೂ ಸಂಬಂಧವಿಲ್ಲ

ಮೀಸಲಾತಿಗಾಗಿ ನೀಡುವ ಜಾತಿ ಪ್ರಮಾಣ ಪತ್ರಕ್ಕೂ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೂ ಸಂಬಂಧವಿಲ್ಲ. ನೈಜ ಜಾತಿ, ಶಾಲಾ ದಾಖಲಾತಿ ಇತ್ಯಾದಿ ಪರಾಮರ್ಶಿಸಿದ ಬಳಿಕವಷ್ಟೇ ಜಾತಿ ಪ್ರಮಾಣ ಪತ್ರ ನೀಡಲಾಗುತ್ತದೆ. ಹೀಗಾಗಿ ಪ್ರತಿಯೊಬ್ಬರೂ ತಮ್ಮ ನೈಜ ಜಾತಿಯನ್ನೇ ಸಮೀಕ್ಷೆಯಲ್ಲಿ ಬರೆಸಬೇಕು, ನಮ್ಮ ಸಮುದಾಯದ ನೈಜ ಸಂಖ್ಯೆ ಹೊರಹೊಮ್ಮಲು ಸಹಕರಿಸಬೇಕು ಎಂದು ಸಮಾಜ ಬಾಂಧವರಿಗೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಹಾಸಭಾ ಕಾರ್ಯದರ್ಶಿ ರೇಣುಕ ಪ್ರಸನ್ನ, ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ವೀಣಾ ಕಾಶೆಪ್ಪನವರ್ ಹಾಜರಿದ್ದರು.

ಸಮಾಜ ವಿಭಜಿಸಬೇಡಿ: ಬಿದರಿ

ಜಗಜ್ಯೋತಿ ಬಸವಣ್ಣನವರ ಹೆಸರನ್ನು ಹೇಳಿಕೊಂಡು ಸಮಾಜವನ್ನು ವಿಭಜಿಸಬೇಡಿ ಎಂದು ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಮನವಿ ಮಾಡಿದರು.

ಕೆಲವರು ಬಸವಣ್ಣನವರ ಹೆಸರನ್ನು ಹೇಳಿಕೊಂಡು ಸಮಾಜ ವಿಭಜಿಸುವ ಯತ್ನ ನಡೆಸುತ್ತಿದ್ದಾರೆ. ಇದು ಸರಿಯಲ್ಲ. ಹಾಗೆಯೇ ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಬಾರದು. ಹಿಂದಿನ ಸಮೀಕ್ಷೆಗಳಲ್ಲಿ ವೀರಶೈವ ಮತ್ತು ಲಿಂಗಾಯತರನ್ನು ಜಾತಿ ಎಂದು ಪರಿಗಣಿಸಲಾಗಿದೆ. ಪ್ರತ್ಯೇಕ ಧರ್ಮದ ಮಾನ್ಯತೆಯನ್ನು ಅಧಿಕೃತವಾಗಿ ನೀಡಿಲ್ಲ. ಅದನ್ನು ಪರಿಗಣಿಸುವ ಅಗತ್ಯವಿದೆ ಎಂದರು.

PREV
Read more Articles on

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌