ಬೆಂಗಳೂರು : ‘ರಾಜ್ಯದಲ್ಲಿ ಮಹಿಳೆಯರ ಮೇಲಿನ ಹಿಂಸೆ ತಡೆಯಲು ವಿ.ಎಸ್.ಉಗ್ರಪ್ಪ ಅವರ ಸಮಿತಿ ನೀಡಿರುವ ವರದಿ ಅನುಷ್ಠಾನಗೊಳಿಸಬೇಕು ಹಾಗೂ ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಭೀಕರ ಅತ್ಯಾ*ರ, ಬರ್ಬರ ಕೊಲೆ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು’ ಎಂದು ಲೇಖಕಿಯರು, ಮಹಿಳಾ ಹೋರಾಟಗಾರರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಹಕ್ಕೊತ್ತಾಯ ಮಾಡಿದೆ.
ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ವಿವಿಧ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು, ಲೇಖಕಿಯರು ಹಾಗೂ ಮಹಿಳಾ ಹೋರಾಟಗಾರರ ನಿಯೋಗ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಮನವಿ ಪತ್ರ ಸಲ್ಲಿಸಿತು.
ಹಕ್ಕೊತ್ತಾಯ ಪತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸುತ್ತಮುತ್ತ ನಡೆದಿರುವ ಭೀಕರ ಅತ್ಯಾಚಾರ, ಬರ್ಬರ ಕೊಲೆಗಳ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಹಾಗೂ ಅವರ ಕುಟುಂಬದವರು, ಸಾಕ್ಷಿಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.
ಧರ್ಮಸ್ಥಳ ಪ್ರಕರಣದ ಕುರಿತು ವಿಶೇಷ ತನಿಖಾದಳ ರಚಿಸಿದ ನಿಮ್ಮ ಸರ್ಕಾರದ ದಿಟ್ಟತನ ಸ್ವಾಗತಿಸುತ್ತೇವೆ. ಆಗಸ್ಟ್ ತಿಂಗಳಲ್ಲಿ ಆರಂಭಿಸಿದ ಕೊಂದವರು ಯಾರು ಎಂಬ ಆಂದೋಲನದ ಪ್ರತಿನಿಧಿಗಳು ನಾವು. ನೀವು ರಚಿಸಿರುವ ಎಸ್‌ಐಟಿಗೆ ಸ್ವಾತಂತ್ರ್ಯ ನೀಡಬೇಕು. ವಿಶೇಷವಾಗಿ ಸೌಜನ್ಯ, ಪದ್ಮಲತಾ, ಯಮುನಾ, ನಾರಾಯಣರಂತಹ ಕೊಲೆ ಪ್ರಕರಣಗಳಲ್ಲಿ ಮರು ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಜತೆಗೆ ಪ್ರಕರಣಗಳಲ್ಲಿ ಅನುಮಾನಾಸ್ಪದವಾಗಿ ಮರಣ ಹೊಂದಿರುವ ಉದಾ: ಸೌಜನ್ಯ ಪ್ರಕರಣದ ಸಾಕ್ಷಿಗಳಾದ ರವಿ ಪೂಜಾರಿ, ಗೋಪಾಲಕೃಷ್ಣಗೌಡ, ದಿನೇಶ್ ಗೌಡ, ವಾರಿಜ ಆಚಾರ್ಯ, ಹರೀಶ್ ಮಡಿವಾಳ ಅವರ ಮರಣ ಪ್ರಕರಣಗಳನ್ನು ತನಿಖೆಗೆ ಒಳಪಡಿಸಬೇಕು. ಈ ಪ್ರಕರಣಗಳಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ:
ಮಹಿಳೆಯರ ಸುರಕ್ಷತೆಗೆ ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಸಿಸಿ ಟಿವಿ ಕಣ್ಗಾವಲು, ಮಹಿಳಾ ಸಹಾಯ ಡೆಸ್ಕ್ ಸೇರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲಾ ಧರ್ಮಗಳ, ಧಾರ್ಮಿಕ ಸಂಸ್ಥೆಗಳಲ್ಲಿ ಆಂತರಿಕ ಸಮಿತಿ ರಚಿಸಿ ಲೈಂಗಿಕ ಕಿರುಕುಳಗಳ ಪ್ರಕರಣ ತೆಗೆದುಕೊಳ್ಳಲು ಪಾಶ್ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು. ಆರೋಗ್ಯಕರ ಲೈಂಗಿಕತೆ ಕುರಿತು ಶಿಕ್ಷಣ ನೀಡಬೇಕು ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.