ಕನ್ನಡಪ್ರಭ ವಾರ್ತೆ ಯಾದಗಿರಿ
ಪವಿತ್ರ ರಮಝಾನ್‌ನ 30 ವೃತಗಳನ್ನು ಅನುಷ್ಠಾನಗೊಳಿಸಿದ ಯಾದಗಿರಿ ಜಿಲ್ಲೆಯ ಮುಸ್ಲಿಮ್ ಬಾಂಧವರು, ಗುರುವಾರ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರೆ’ ಆಚರಿಸಿದರು.ಯಾದಗಿರಿ ನಗರದ ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್, ಈದ್ ಖುತ್ಭಾ ಈದ್ ಸಂದೇಶ, ಪ್ರವಚನ, ಈದ್ ಶುಭಾಶಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತಂದರು.
ಈದ್ ನಮಾಝ್-ಖುತಬಾದ ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.ನಗರದ ಬಹುತೇಕ ಮಸೀದಿ-ಈದ್ಗಾಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ಕಂಡು ಬಂತು.ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಉಪವಾಸಿಗರು ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ವಿಶಿಷ್ಟ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.
ನಗರದ ಚಿತ್ತಾಪೂರ ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಸಮೀಪದ ಈದ್ಗಾದಲ್ಲಿ ಖಾಝಿ ಮುಹಮ್ಮದ್ ಹಸನ್ ಸಿದ್ದಿಕಿ ಖುತ್ಭಾ ಪಾರಾಯಣಗೈದರು ಮತ್ತು ಈದ್ ನಮಾಝ್ ಗೆ ನೇತೃತ್ವ ನೀಡಿದರು.ಈದ್ಗಾ ಸಮಿತಿ ಅಧ್ಯಕ್ಷ ಮನ್ಸೂರ್ ಅಹ್ಮದ್ ಅಫ್ಘಾನ್, ಖಾಜಿ ಮೊಹಮ್ಮದ್ ಇಮ್ತಿಯಾಜುದ್ದೀನ್ ಸಿದ್ದಿಕಿ ವಕೀಲರು, ಜಿಲಾನಿ ಆಫ್ಘನ್, ಇನಾಯತ್ ರೆಹಮಾನ್, ಮತ್ತಿತರರು ಪಾಲ್ಗೊಂಡಿದ್ದರು.
ಸುರಪುರದಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ: ನಗರದ ಈದ್ಗಾ ಮೈದಾನದಲ್ಲಿ ಈದುಲ್ ಫಿತ್ರೆ ರಂಜಾನ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.ನಗರ ವ್ಯಾಪ್ತಿಯಲ್ಲಿ ವಿವಿಧ ಎಲ್ಲ ಮಸೀದಿಗಳಿಂದ ಮುಸ್ಲಿಂ ಬಾಂಧವರು ತಂಡೋಪತಂಡವಾಗಿ ಈದ್ಗಾ ಮೈದಾನದಲ್ಲಿ ಸೇರಿ ಪ್ರಾರ್ಥನೆಯನ್ನು ಸಲ್ಲಿಸಿದರು.
ಮೌಲ್ವಿ ಮೌಲಾನಾ ಮೊಹಮ್ಮದ್ ಅಬ್ದುಲ್ಲಾ ನೂರಿ ಬೋಧಿಸಿದರು. ಒಂದು ತಿಂಗಳ ಉಪವಾಸ ಮುಗಿದ ಬಳಿಕ ಮರುದಿನವೇ ಈದುಲ್ ಫಿತರ್ ಹಬ್ಬ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಸಮಸ್ತ ಮನುಕುಲದ ಶಾಂತಿ ಮತ್ತು ಸೌಹಾರ್ಧತೆ, ಮಳೆಗಾಗಿ ಪ್ರಾರ್ಥಿಸಲಾಯಿತು. ಪ್ರಾರ್ಥನೆಯ ನಂತರ ಪ್ರತಿಯೊಬ್ಬ ಮುಸ್ಲಿಂ ಬಾಂಧವರು ತಮ್ಮ ಶಕ್ತ್ಯಾನುಸಾರ ಬಡಬಗ್ಗರಿಗೆ ದಾನ ಮಾಡಿದರು.ಪ್ರಮುಖರಾದ ಈದ್ಗಾ ಕಮಿಟಿಯ ಅಧ್ಯಕ್ಷ ಎ.ಆರ್. ಪಾಷಾ, ಸೈಯದ್ ಅಹ್ಮದ್ ಪಾಶಾ ಖಾದ್ರಿ, ಖಾಜಾ ಖಲೀಲ ಅಹ್ಮದ್ ಅರಕೇರಿ, ವಕೀಲ ಉಸ್ತಾದ್ ಫಿರಾಸತ್ ಹುಸೇನ್, ಉಸ್ತಾದ್ ವಜಾಹತ್ ಹುಸೇನ್, ಅಹ್ಮದ್ ಪಠಾಣ, ತೌಫಿಕ್ ಅಹ್ಮದ್ ಅರಕೇರಿ, ಮೌಲಾಲಿ ಸೌದಾಗರ್, ಮಹಮ್ಮದ್ ಖಾಜಾ ಗುಡುಗುಂಟಿ, ವಕೀಲ ಮಹ್ಮದ್ ಹುಸೇನ್, ಅಬೀದ್ ಹುಸೇನ್ ಪಗಡಿ, ಮೆಹಬೂಬ್ ಸಾಬ್ ಜಮಾದಾರ್, ಕಲೀಮುದ್ದೀನ್ ಫರೀದಿ, ಗೌಸಮಿಯಾ ಜಮಾದಾರ್ ಸೇರಿದಂತೆ ಸಮಸ್ತ ಸುರಪುರದ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ವಡಗೇರಾದಲ್ಲಿ ರಂಜಾನ್ ಹಬ್ಬ ಆಚರಣೆ: ರಂಜಾನ್ ಹಬ್ಬದ ಪ್ರಯುಕ್ತ ವಡಗೇರಾ ಪಟ್ಟಣದಲ್ಲಿರುವ ಈದ್ಗ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಮೌಲಿ ಅಸ್ಪಕ್ ಮೌಲನ್, ರಂಜಾನ್ ಹಬ್ಬವು ಮುಸ್ಲಿಂರ ಪವಿತ್ರ ಹಬ್ಬವಾಗಿದೆ. ರಂಜಾನ್ ಹಬ್ಬದಲ್ಲಿ ವೃದ್ಧರು, ಚಿಕ್ಕ ಮಕ್ಕಳು, ಹಿರಿಯರು ಒಂದು ತಿಂಗಳವರೆಗೆ ರೋಜಾ ಆಚರಣೆ ಮಾಡುತ್ತಾರೆ. ಅದು ತುಂಬಾ ಕಠಿಣ ವ್ರತವಾಗಿರುತ್ತದೆ ಎಂದರು.
ರಂಜಾನ್ ಹಬ್ಬದಂದು ಪ್ರಾರ್ಥನೆ ಸಲ್ಲಿಸಿ, ನಂತರ ಬೇರೆ ಬೇರೆ ಸಮುದಾಯದವರನ್ನು ತಮ್ಮ ಮನೆಗಳಿಗೆ ಕರೆಯಿಸಿ, ಹಾಲಿನ ಸಿಹಿ ಖಾಧ್ಯ ಕುಡಿಸುವ ಮೂಲಕ ಪರಸ್ಪರ ಶುಭಾಶಯ ಕೋರುವವರು ಎಂದರು.ಮುಸ್ಲಿಂ ಮುಖಂಡರಾದ ಬಾಶುಮಿಯಾ ನಾಯ್ಕೋಡಿ , ಅಬ್ದುಲ್ ಕರೀಂ ಸಾಬ್, ಜಲಾಲ್ ಸಾಬ್ ಚಿಗನೂರ, ಬಾಶುಮಿಯಾ ಕತಾಲಿ, ಮೈನುದ್ದೀನ್ ದೇವದುರ್ಗ, ಸೈಯದ್ ಅಲಿ ಮುಲ್ಲಾ, ಉಸ್ಮನ್ ಭಾಷ ತಡಬಿಡಿ, ರುಕುಮುದ್ದೀನ್ ದೇವದುರ್ಗ, ಅಬ್ದುಲ್ ಚಿಗನೂರ, ಭಾಷಾ ಸಾಬ್ ಪಾನ್ ಶಾಪ್, ಶಕೀಲ್ ಸಾಬ್, ತನ್ವೀರ್ ಸಾಬ್, ಶರಮೊದ್ದೀನ್ ಕಲ್ಮನಿ, ಮೊಹ್ಮದ್ ಖುರಸಿ, ಅಜಿಮ್ ಸಾಬ್, ಭಾಷಾ ಸಾಬ್ ,ಆಸಿಫ್ , ಅಬ್ದುಲ್ ಭಾಷಾ ಚಪ್ರಸಿ, ಬಂದೇನವಾಜ, ಸೈಯದ್ ಮರಡಿ ಇತರರಿದ್ದರು.