ಕನ್ನಡಪ್ರಭ ವಾರ್ತೆ ಶಹಾಪುರ
ಬಸವ ಸಾಗರ ಜಲಾಶಯದಿಂದ ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯಲ್ಲಿ ಮೆಣಸಿನಕಾಯಿ ಬೆಳೆಗೆ ನೀರು ಹರಿಸಬೇಕು ಎಂದು ಕಳೆದ 23 ದಿನಗಳಿಂದ ತೀವ್ರ ಹೋರಾಟಕ್ಕಿಳಿದಿದ್ದ ರೈತರ ಬೇಡಿಕೆಗೆ ಅಸ್ತು ಎನ್ನುವ ಮೂಲಕ ಕೊನೆಗೂ ಸರ್ಕಾರ ಮಣಿದಿದೆ.ಶನಿವಾರ ರಾತ್ರಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಡನೆ ಈ ಭಾಗದ ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ನಡೆಸಿದ ಸಭೆ ಫಲಪ್ರದವಾಗಿದ್ದು, ರೈತರ ಪರಿಸ್ಥಿತಿ ಅರಿತ ಸರ್ಕಾರ ಕಾಲುವೆಗೆ ನೀರು ಹರಿಸಲು ಭಾನುವಾರ ಆದೇಶಿಸಿದೆ.
ಈ ಮೂಲಕ, ಬಣಗಳ ದೃಷ್ಟಿಕೋನ ದೂರವಿಟ್ಟು, ರೈತ ಸಂಘಟನೆಗಳೆಲ್ಲವೂ ಒಂದಾಗಿ ನಡೆಸಿದ 23 ದಿನಗಳ ಕಾಲದ ತೀವ್ರ ಪ್ರತಿಭಟನೆಗೆ ಸುಖಾಂತ್ಯ ಹಾಡಿದಂತಾಗಿದೆ. ರೈತರಲ್ಲಿ ಸಂಭ್ರಮ ಮನೆ ಮಾಡಿತ್ತು.ರೈತರ ಹೋರಾಟದ ಹಾದಿ :
ತಾಲೂಕಿನ ಭೀಮರಾಯನ ಗುಡಿಯ ಕೃಷ್ಣ ಭಾಗ್ಯ ಜಲ ನಿಗಮ ಲಿಮಿಟೆಡ್ ಆಡಳಿತ ಕಚೇರಿ ಮುಂದೆ ಡಿ.18 ರಂದು ಬೆಳೆದು ನಿಂತ ಮೆಣಸಿನ ಬೆಳೆಗೆ ಫೆಬ್ರವರಿ ಅಂತ್ಯದವರಿಗೆ ನೀರು ಒದಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಹೋರಾಟ ಪ್ರಾರಂಭಿಸಿತ್ತು.ರೈತರ ಸಮಸ್ಯೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಸ್ಪಂದಿಸದೆ ಇರುವುದನ್ನು ಕಂಡ ರೈತರ ಮುಖಂಡರು ಡಿ.21, 22 ಮತ್ತು 23 ತನಕ ಆಡಳಿತ ಕಚೇರಿಗೆ ಬೀಗ ಜಡಿದು, ಬಾಗಿಲಿಗೆ ಎತ್ತು ಕಟ್ಟುವ ಮೂಲಕ ಪ್ರತಿಭಟನೆ ನಡೆಸಿದ್ದರು.
ಡಿ.23 ರಂದು ಆಡಳಿತ ಕಚೇರಿಯಿಂದ ಭೀಮರಾಯನ ಗುಡಿಯ ಬಾಪುಗೌಡ ವೃತ್ತದವರೆಗೆ ಉರುಳು ಸೇವೆ ಮತ್ತು ದೀಡ್ ನಮಸ್ಕಾರ ಹಾಕುವ ಮೂಲಕ, ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಬಂದ್ ಮಾಡಿ ಸರ್ಕಾರಕ್ಕೆ ಬಿಸಿ ತಟ್ಟಿಸುವಂತೆ ಮಾಡಿತು. ಆದರೂ ರೈತರ ಸಮಸ್ಯೆಗೆ ಸರ್ಕಾರ ಹಾಗೂ ಅಧಿಕಾರಿಗಳು ಜಗ್ಗಲಿಲ್ಲ.ಡಿ.25 ರಂದು ನಗರದ ಸಿ.ಬಿ. ಕಮಾನದಿಂದ ಬಸವೇಶ್ವರ ವೃತ್ತದವರೆಗೆ ಸಾವಿರಾರು ಸಂಖ್ಯೆಯಲ್ಲಿ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, 5 ತಾಸುಗಳ ಕಾಲ ಶಹಾಪುರ ಬಂದ್ ಮತ್ತು ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ತೀವ್ರ ಗೊಳಿಸಿದರು. ಈ ಸಂದರ್ಭದಲ್ಲಿ ಕೆಲ ರೈತ ಮುಖಂಡರು ತಲೆ ಬೋಳಿಸಿಕೊಳ್ಳುವ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.
ಆದರೂ ಸರ್ಕಾರ ತನ್ನ ನಿಲುವು ಬದಲಿಸದೆ ಡ್ಯಾಮಿನಲ್ಲಿ ನೀರಿಲ್ಲ ಎಂದು ಒಂದೇ ವಾದ ಮಾಡುತ್ತಾ, ಕಾದು ನೋಡುವ ತಂತ್ರ ಅನುಸರಿಸಿತು.ಜಿಲ್ಲೆಯಲ್ಲಿ 14,000 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದ ರೈತರಲ್ಲಿ ಬೆಳೆ ಒಣಗುವ ಆತಂಕದಿಂದ ಜ.4ರಂದು ಆಡಳಿತ ಕಚೇರಿ ಮುಂದೆ ರೈತರು ಕುಣಿ ತೋಡಿ ನಮಗೆ ನೀರು ಕೊಡಿ ಇಲ್ಲ, ನಮ್ಮನ್ನು ಕುಣಿಯಲ್ಲಿಟ್ಟು ಮಣ್ಣು ಮುಚ್ಚಿ ಎಂದು ಹಠ ಹಿಡಿದರು.
ಪರಿಸ್ಥಿತಿ ಕೈಮೀರುವ ಸೂಚನೆ ಕಂಡ ಅಧಿಕಾರಿಗಳು ರೈತ ಮುಖಂಡರ ಮನವೊಲಿಸಲು ಮುಂದಾದರು. ಇದು ವಿಫಲವಾಯಿತು. ಜ.5ರಂದು ಸಂದಾನಕ್ಕೆ ಬಂದ ಜಿಲ್ಲಾಧಿಕಾರಿಗಳು ಹಾಗೂ ಎಸ್ಪಿ ಅವರ ಸಮಕ್ಷಮದಲ್ಲಿ ರೈತನೊಬ್ಬ ವಿಷದ ಬಾಟಲಿ ಹಿಡಿದು ವಿಷ ಕುಡಿಯಲು ಮುಂದಾದ ಘಟನೆಯೂ ನಡೆಯಿತು. ಕ್ಷಣ ಕಾಲ ಹೋರಾಟ ಸ್ಥಳ ಗೊಂದಲದ ಗೂಡಾಯಿತು. ತಕ್ಷಣಕ್ಕೆ ಸಮಸ್ಯೆ ಅರಿತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವರಿಗೆ ವಿವರ ವರದಿ ಮಾಡಿದರು.ಜ.6 ರಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಿ ಜ.7ರಂದು 2.75 ನೀರು ಬಿಡಲು ಸರ್ಕಾರ ತೀರ್ಮಾನಿಸಿತು ಎಂದು ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ್ ಸತ್ಯಂಪೇಟೆ ತಿಳಿಸಿದ್ದಾರೆ.
ಸಂಧಾನ ವಿಫಲ:ಕಾಲುವೆಗೆ ನೀರು ಬಿಡಲು ಒತ್ತಾಯಿಸಿ ರೈತರು ಆಹೋ ರಾತ್ರಿ ಧರಣಿ ನಡೆಸುತ್ತಿದ್ದ ರೈತ ಮುಖಂಡರ ಜೊತೆ ಜಿಲ್ಲಾಧಿಕಾರಿಗಳು ಎರಡು ಬಾರಿ, ಸಚಿವ ದರ್ಶನಾಪುರ್ ಹಾಗೂ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶ ಮಂಡಳಿಯ ಅಧ್ಯಕ್ಷ ಅಜಯ್ ಸಿಂಗ್ ಮತ್ತು ಕೆಬಿಜೆಏನ್ಎಲ್ ಸೂಪರ್ ಇಂಜಿನಿಯರ್ ಪ್ರೇಮ್ ಚಂದ್ ನಡೆಸಿದ ಹೋರಾಟ ಕೈಬಿಡಲು ನಡೆಸಿದ ಸಂದಾನ ಫಲಿಸಿರಲಿಲ್ಲ.
ಸರ್ಕಾರದ ಮೇಲೆ ರಾಜ್ಯಧ್ಯಕ್ಷರ ಒತ್ತಡ :ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರ ಪ್ರಮುಖ ಬೇಡಿಕೆಯಾಗಿರುವ ನೀರನ್ನು ಬಿಡಬೇಕು. ಇಲ್ಲದೆ ಹೋದರೆ ಸರ್ಕಾರಕ್ಕೆ ಗಂಡಾಂತರವಿದೆ ಎಂದು ಧರಣಿ ನಿರತ ಸ್ಥಳಕ್ಕೆ ಆಗಮಿಸಿ ಬೆಂಬಲಿಸಿ ನಂತರ ಮುಖ್ಯಮಂತ್ರಿ ಮತ್ತು ಜಲ ಸಂಪನ್ಮೂಲ ಸಚಿವರಿಗೆ ಒತ್ತಾಯ ಮಾಡಿದ್ದನ್ನೂ ಸ್ಮರಿಸಬಹುದು.
ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ, ಮಲ್ಲಣ್ಣ ಪರಿವಾಣ, ಶರಬಣ್ಣ ಸಾಹುಕಾರ ರಸ್ತಾಪೂರ, ಚಂದ್ರಕಲಾ, ಹಣಮಂತ ರುಕ್ಮಾಪುರ, ಮಲ್ಲಣ್ಣ ಚಿಂತಿ, ಮಲ್ಲಿಕಾರ್ಜುನ ಸಗರ, ಅಂಬ್ಲಪ್ಪ ದೊರೆ, ಗೌಡಪ್ಪಗೌಡ ಹುಲಕಲ್, ಭೀಮಣ್ಣ ಪೂಜಾರಿ, ಪ್ರಭುಗೌಡ, ಗುರಣ್ಣ ದೇಸಾಯಿ, ಶ್ರೀಮಂತಗೌಡ, ಬನಶಂಕರ ಗೌಡ, ಸಿದ್ದಣ್ಣ, ಬಾಬು ಸೇರಿದಂತೆ ಹಲವು ರೈತರು ಭಾಗವಹಿಸಿದ್ದರು.ಇದ್ದು ಸಾಯುವುದಕ್ಕಿಂತ ಹೋರಾಟ ಮಾಡಿ ಸಾಯುವುದೇ ಮೇಲು ಎನ್ನುವ ತೀರ್ಮಾನದೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗಿತ್ತು. ನೀರು ಕೊಡಿ ಇಲ್ಲ, ನಮ್ಮನ್ನು ಸಾಯಿಸಿಬಿಡಿ ಎಂಬುದು, ನಮ್ಮದು ಒಂದೇ ಗುರಿಯಾಗಿತ್ತು. ಕೊನೆಗೂ ರೈತರ ಸಮಸ್ಯೆ ಸರ್ಕಾರ ಅರ್ಥ ಮಾಡಿಕೊಂಡು ನೀರು ಬಿಟ್ಟಿದೆ.
ನಾಗರತ್ನ ಪಾಟೀಲ್, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ ಮಹಿಳಾ ಘಟಕ.