ಆನಂದ್ ಎಂ. ಸೌದಿ
ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಟ್ಟಹಾಸ ಮಿತಿಮೀರಿದೆ. ಕೃಷ್ಣಾ ನದಿಯೊಡಲನ್ನೇ ಬಗೆಯುತ್ತಿರುವ ಮರಳುಗಳ್ಳರು, ಇಡೀ ನೈಸರ್ಗಿಕ ಸಂಪತ್ತನ್ನೇ ಕೊಳ್ಳೆ ಹೊಡೆಯುತ್ತಿದ್ದಾರೆ. ಆದರೆ, ಅಕ್ರಮ ತಡೆಗಟ್ಟಬೇಕಾದ ಆಡಳಿತ ರಾಜಕೀಯ ಪ್ರಭಾವಕ್ಕೆ ಅಂಜಿ ಮುದುಡಿ ಕುಳಿತಂತಿದೆ.
ಜಿಲ್ಲೆಯ ಕೃಷ್ಣಾ ನದಿ ಪಾತ್ರದ ಗ್ರಾಮಗಳಾದ ಕೊಳ್ಳೂರು (ಎಂ), ಹಯ್ಯಾಳ್, ಟೊಣ್ಣೂರು, ಗೌಡೂರು, ಐಕೂರು ಹಾಗೂ ಗೊಂದೆನೂರು ಮುಂತಾದ ಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ಹತ್ತಿಗೂಡೂರು ಸಮೀಪದ ಕ್ರಾಸ್ ಬಳಿ ಚೆಕ್ಪೋಸ್ಟ್ ಮೂಲಕ ಅಕ್ರಮ ಮರಳು ಹೊತ್ತ ಸಾವಿರಾರು ಟಿಪ್ಪರ್‌ಗಳು ದಿನಂಪ್ರತಿ ಸಂಚರಿಸುತ್ತವೆ.ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಯಾವುದೇ ಪರವಾನಗಿ ಇರದಿದ್ದರೂ, ಇಂತಹ ಅಕ್ರಮಕ್ಕೆ ಆಡಳಿತ ಮುಗುಮ್ಮಾಗಿರುವುದು ಅಚ್ಚರಿ ಮೂಡಿಸಿದೆ. ಹತ್ತಾರು ಜೆಸಿಬಿಗಳು ನದಿ ಪಾತ್ರದಲ್ಲೇ ಮರಳು ಬಗೆಯುತ್ತಿವೆ. ಟೊಣ್ಣೂರು ಭಾಗದಲ್ಲಿ ಕೃಷ್ಣಾ ನದಿಯಲ್ಲೇ ಲಕ್ಷಾಂತರ ರು.ಗಳ ಖರ್ಚು ಮಾಡಿ, ಅಕ್ರಮಕ್ಕೆ ಅನುವಾಗಲೆಂದು ಪ್ರತ್ಯೇಕ ಮಣ್ಣಿನ ರಸ್ತೆಯನ್ನೇ ನಿರ್ಮಾಣ ಮಾಡಲಾಗಿದೆ.
ಲಂಗು ಲಗಾಮಿಲ್ಲದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ತಡೆಯಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದಕ್ಕೆ ರಾಜಕೀಯ ಪ್ರಭಾವ ಅಡ್ಡಿ ಅನ್ನೋ ಮಾತುಗಳಿವೆ. ಜೊತೆಗೆ, ಆಯಾ ಸ್ಟೇಷನ್ ವ್ಯಾಪ್ತಿ ಇಂತಿಂಥ ಅಧಿಕಾರಿಗಳಿಗೆ ಇಂತಿಷ್ಟು ಹಣ ಹಫ್ತಾ (ಲಂಚ) ಎಂದು ಮೊದಲೇ ಮರಳುಗಳ್ಳರು ಹೊಂದಾಣಿಕೆ ಮಾಡಿಕೊಂಡಿರುತ್ತಾರೆ. ಶಹಾಪುರ ಹಾಗೂ ಭೀಮರಾಯ ಗುಡಿ ಭಾಗದಲ್ಲಿ ಲಂಚದ ಪಾಲು ಹೆಚ್ಚು ಹೋಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಭಂಗಿ ಆರೋಪಿಸುತ್ತಾರೆ.
ಕೋಹಿನೂರ್ ಕೊಳ್ಳೂರಿನಲ್ಲಿ 60% ಗುತ್ತಿಗೆದಾರಗೆ, 40% ಬೆಂಬಲಿಸಿದವರಿಗೆ!