ಯಾದಗಿರಿ: ಭೀಕರ ಬರಗಾಲ, ರಾಷ್ಟ್ರೀಯ ವಿಪತ್ತು ಘೋಷಿಸಲು ಆಗ್ರಹ

KannadaprabhaNewsNetwork |  
Published : Jan 21, 2024, 01:30 AM IST
ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಶಹಾಪುರ ನಗರದ ತಹಸಿಲ್ ಕಚೇರಿ ಮುಂದೆ ಆಹೋರಾತ್ರಿ ಧರಣಿ ನಡೆಯಿತು. | Kannada Prabha

ಸಾರಾಂಶ

ರಾಜ್ಯ ಸರ್ಕಾರ 236 ತಾಲೂಕುಗಳ ಪೈಕಿ 223 ತಾಲೂಕುಗಳು ತೀವ್ರ ಬರಪೀಡಿತವೆಂದು ಘೋಷಿಸಿದೆ. ಬೆಳೆ ನಷ್ಟದಿಂದ ಪ್ರತಿಯೊಬ್ಬ ರೈತನಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ರೈತರ ಹಿತ ಕಾಪಾಡಬೇಕಾದ ಸರ್ಕಾರ ನೆರವಿಗೆ ಬಾರದೆ ಸಾವಿನ ದವಡಿಗೆ ತಳ್ಳುತ್ತಿದೆ ಎಂದು ಪ್ರಾಂತ ರೈತ ಸಂಘ ಆರೋಪಿಸಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ರಾಜ್ಯದಲ್ಲಿ ಭೀಕರ ಬರಗಾಲದಿಂದ ಜನ ತತ್ತರಿಸಿದ್ದಾರೆ. ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದ ತಹಸೀಲ್ದಾರ್‌ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿ, ನಂತರ ತಹಸೀಲ್ದಾರರ ಮುಖಾಂತರ ಪ್ರಧಾನ ಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ ಅವರು, ಶತಮಾನಗಳಲ್ಲೆ ಎಂದೂ ಕಾಣದ ಬರಗಾಲಕ್ಕೆ ರಾಜ್ಯ ತತ್ತರಿಸಿದೆ. ಕೇಂದ್ರ ಸರ್ಕಾರ ಕೂಡಲೇ ಅನುದಾನ ಬಿಡುಗಡೆಗೊಳಿಸ‌ಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರವೇ 236 ತಾಲೂಕುಗಳ ಪೈಕಿ 223 ತಾಲೂಕುಗಳು ತೀವ್ರ ಬರಪೀಡಿತವೆಂದು ಘೋಷಿಸಿದೆ. ಬೆಳೆ ನಷ್ಟದಿಂದ ಪ್ರತಿಯೊಬ್ಬ ರೈತನಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದ್ದು, ಬಿತ್ತಿದ ಬೆಳೆ ಕೈಗೆ ಬಾರದೆ ರೈತ ಕಂಗಲಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ರೈತರ ಹಿತ ಕಾಪಾಡಬೇಕಾದ ಸರ್ಕಾರ ರೈತರ ನೆರವಿಗೆ ಬಾರದೆ ರೈತರನ್ನು ಸಾವಿನ ದವಡಿಗೆ ತಳ್ಳುತ್ತಿದೆ. ಬರಪೀಡಿತ ಜನರ ಅಗತ್ಯಗಳನ್ನು ಪೂರೈಸಬೇಕಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅತೀವ ನಿರ್ಲಕ್ಷ್ಯ ವಹಿಸಿವೆ ಎಂದು ದೂರಿದರು.

ಬರಗಾಲದ ಪರಿಹಾರಕ್ಕಾಗಿ ಕೇಂದ್ರದಿಂದ 18,177 ಕೋಟಿ ರು. ಒದಗಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿ ಹಲವಾರು ನಿಯೋಗಗಳ ಮೂಲಕ ಒತ್ತಾಯಿಸಿದ್ದರೂ ಒಂದು ನಯಾ ಪೈಸೆ ಕೊಟ್ಟಿಲ್ಲ. ಬೇಸಿಗೆಯಲ್ಲಿ ನೀರು, ಮೇವು, ಆಹಾರ, ಉದ್ಯೋಗಕ್ಕೆ ಹಾಹಾಕಾರ ಇರುವಾಗ ಈ ದೇಶದ ರೈತರ ಕಾರ್ಮಿಕರ ಬಗ್ಗೆ ಚಿಂತಿಸದ ಸರ್ಕಾರ, ಒಬ್ಬರ ಮೇಲೊಬ್ಬರು ಕೆಸರು ಎರಚಾಟ ನಡೆಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬರ ಪರಿಹಾರವನ್ನು ಒದಗಿಸಬೇಕು. ಒಂದು ಎಕರೆಗೆ ಬೆಳೆನಷ್ಟ ಪರಿಹಾರವಾಗಿ 1 ಲಕ್ಷ ನೀಡಬೇಕು. ಪ್ರತಿಯೊಬ್ಬ ಕೂಲಿ ಕಾರ್ಮಿಕನಿಗೆ 200 ದಿನ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ 600 ರು. ಗಳ ಕೂಲಿ ಕೊಡಬೇಕು. ಸರ್ಕಾರ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು. ಕೂಡಲೇ ಕೇಂದ್ರ ಸರ್ಕಾರವು ಎಲ್ಲ ರೈತರ, ಕೃಷಿ ಕೂಲಿಕಾರರ, ಗ್ರಾಮೀಣ ಮಹಿಳೆಯರ ಸಾಲ ಮನ್ನಾ ಹಾಗೂ ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಕಾರ್ಯದರ್ಶಿ ಎಸ್. ಎಂ. ಸಾಗರ್, ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲ್ ಸಾಬ್ ನದಾಫ್, ತಾಲೂಕು ಕಾರ್ಯದರ್ಶಿ ಭೀಮರಾಯ, ರಂಗಮ್ಮ ಕಟ್ಟಿಮನಿ, ಶಿವಪ್ಪ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ