ಕನ್ನಡಪ್ರಭ ವಾರ್ತೆ ಕೊಡೇಕಲ್
ಮಹಾರಾಷ್ಟ್ರ ಸೇರಿ ಉತ್ತರ ಕರ್ನಾಟಕದ ಮಲಪ್ರಭಾ-ಘಟಪ್ರಭಾ ಹಾಗೂ ಸ್ಥಳೀಯವಾಗಿ ಕೃಷ್ಣೆ ಕಣಿವೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೊಡೇಕಲ್ ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದ್ದು, ಬುಧವಾರ ಸಂಜೆ ಸುಮಾರಿಗೆ 21 ಕ್ರಸ್ಟ್‌ಗೇಟುಗಳ ಮೂಲಕ 49 ಸಾವಿರ ಕ್ಯೂಸೆಕ್ ಪ್ರಮಾಣದಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.
ಮಹಾರಾಷ್ಟ್ರ ಮಹಾಬಲೇಶ್ವರ, ಮುಂಬೈ, ಸಾಂಗ್ಲಿ, ಮೀರಜ್ ಪಶ್ಚಿಮ ಘಟ್ಟ ಅಲ್ಲದೇ ರಾಜ್ಯದ ಹುಬ್ಬಳ್ಳಿ, ಧಾರವಾಡ, ಮಲಪ್ರಭಾ-ಘಟಪ್ರಭಾ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ನಿಟ್ಟಿನಲ್ಲಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ನೀರಿನ ಒಳ ಹರಿವು ಹೆಚ್ಚಾಗಿದೆ, ಇದರಿಂದ ನಾರಾಯಣಪುರದ ಬಸವಸಾಗರ ಜಲಾಶಯವು ಕೂಡ ಭರ್ತಿಯಾಗಿದೆ.- ನದಿತಟದ ಗ್ರಾಮಸ್ಥರಿಗೆ ಎಚ್ಚರಿಕೆ :
ಸದ್ಯ ಕೃಷ್ಣೆಯ ಒಡಲು ಭೋರ್ಗರೆಯುತ್ತಿದ್ದು ಜಲಾಶಯಕ್ಕೆ ಒಳಹರಿವು ಹೆಚ್ಚಾದಲ್ಲಿ ನದಿಗೆ ಬಿಡುವ ನೀರಿನ ಪ್ರಮಾಣವು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಕೃಷ್ಣಾ ತೀರದ ಬಂಡೊಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಜನ-ಜಾನುವಾರು/ಮೀನುಗಾರರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.