ಧಾರವಾಡ: ತಾಲೂಕಿನ ಯಾದವಾಡ ಗ್ರಾಮದಲ್ಲಿ ಗ್ರಾಮದೇವಿ ಕಳೆದ ನಾಲ್ಕು ದಿನಗಳಿಂದ ಜಾತ್ರೆ ಸಂಭ್ರಮ ಮನೆಮಾಡಿದೆ. ಎರಡು ದಿನಗಳಿಂದ ನಡೆಯುತ್ತಿರುವ ದೇವಿಯರ ಮೆರವಣಿಗೆ ಹಾಗೂ ಬೀದಿ ಬೀದಿಗಳಲ್ಲಿ ನಡೆದ ಹೊನ್ನಾಟ ಇಡೀ ಗ್ರಾಮವನ್ನು ಭಂಡಾರಮಯಗೊಳಿಸಿತು. ಮಹಿಳೆಯರು, ಪುರುಷರು, ವೃದ್ಧರು, ಮಕ್ಕಳು, ಯುವಕರು ಬೇಧಭಾವ ಇಲ್ಲದೆ ಸಡಗರದಲ್ಲಿ ಪಾಲ್ಗೊಂಡು ಗಮನ ಸೆಳೆದರು.
21 ವರ್ಷಗಳ ನಂತರ ಜಾತ್ರೆ ನಡೆಯುತ್ತಿರುವುದರಿಂದ ಗ್ರಾಮದಲ್ಲಿ ವಿಶೇಷ ಸಂಭ್ರಮ ಮನೆ ಮಾಡಿದೆ. ಜಾತ್ರೆ ನಿಮಿತ್ತ ಮೂರು ದಿನಗಳ ಕಾಲ ಹೊನ್ನಾಟ ನಡೆಯುತ್ತಿದ್ದು, ಇದಕ್ಕೆ ಶನಿವಾರ ಹಾಗೂ ಭಾನುವಾರ ಅದ್ಧೂರಿಯಾಗಿ ನಡೆಯಿತು. ಗ್ರಾಮದೇವಿಯರ ಮೂರ್ತಿಗಳೊಂದಿಗೆ ಮೆರವಣಿಗೆ ಹೊರಟಾಗ ಜನ ಭಂಡಾರ, ಹೂವುಗಳನ್ನು ತೂರಿ ಭಂಡಾರದ ಮಳೆ ಸುರಿಸಿದರು.ದುಷ್ಟ ಶಕ್ತಿಗಳನ್ನು ನಿಗ್ರಹಿಸುವ ಸಂಕೇತವಾಗಿ ಹೊನ್ನಾಟ ನಡೆಸಲಾಗುತ್ತದೆ. ವಿರಾಟ ರೂಪ ತಾಳಿದ ದೇವಿಯು ರಥಿಕಳಾಗಿ ದುಷ್ಟಶಕ್ತಿಗಳನ್ನು ನಿಗ್ರಹಿಸಲು ದುರ್ಗಿ ರೂಪಿಣಿಯಾದ ದೇವಿಯನ್ನು ಹೆಗಲ ಮೇಲೆ ಹೊತ್ತ ಭಕ್ತರು ಬಡಾವಣೆಗಳಲ್ಲಿ ಸಾಗುವುದು ವಾಡಿಕೆ. ದೇವಿ ರಕ್ತ ಚಿಮ್ಮಿವಿಕೆಯ ಸಂಕೇತವೇ ಕುಂಕುಮ- ಭಂಡಾರ ಹಾರಿಸುವಿಕೆಯಾಗಿದೆ. ಹೀಗಾಗಿ ಮೆರವಣಿಗೆಯಲ್ಲಿ ಡೊಳ್ಳು ಸೇರಿದಂತೆ ವಾದ್ಯಮೇಳದೊಂದಿಗೆ ದೇವಿಯರು ಹೊನ್ನಾಟದ ರೂಪದಲ್ಲಿ ಗ್ರಾಮವನ್ನು ಪ್ರದಕ್ಷಿಣೆ ಹಾಕಿದರು. ಹೀಗಾಗಿ ಯಾದವಾಡ ಊರಿಗೆ ಊರೇ ರಂಗೇರಿತ್ತು.
ಎತ್ತ ನೋಡಿದರೂ ಭಂಡಾರದ ಹುಡಿಯಲ್ಲಿ ಹುದುಗಿದ ಜನಸಾಗರ ಮೇರೆಮೀರಿ ಹರಿದು ಬರುವಂತೆ ತೋರಿತು. ರಸ್ತೆ ಇಕ್ಕೆಲಗಳಲ್ಲಿ ಜನ ಕಿಕ್ಕಿರಿದು ಜಮಾಯಿಸಿದ್ದರು. ಹಿಂದೂ- ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದವರೂ ಹಳದಿ, ಬಿಳಿ ಜುಬ್ಬಾ ಧರಿಸಿದ್ದರೆ ಮಹಿಳೆಯರು ಹಳದಿ ಸೀರೆಯಲ್ಲಿ ಮಿಂಚಿ ಹೊನ್ನಾಟಕ್ಕೆ ರಂಗು ನೀಡಿದರು. ಬೀದಿಗಳಲ್ಲಿ ಮೆರವಣಿಗೆ ಹೋಗುತ್ತಿರುವಾಗ ಜನರ ಮಹಡಿಯ ಮೇಲೆ ನಿಂತು ಭಂಡಾರ ಎರಚುತ್ತಿದ್ದರು. ಊರಿಗೆ ಬಂದ ಗ್ರಾಮಸ್ಥರ ಸಂಬಂಧಿಕರೂ ಈ ಸಂಭ್ರಮದಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸಿದರು. ಇದೇ ರೀತಿ ಸೋಮವಾರ ಕೂಡ ಹೊನ್ನಾಟ ನಡೆಯಲಿದ್ದು, ನಂತರ ದೇವಿಯರನ್ನು ಊರ ಅಗಸಿಯಲ್ಲಿ ಪ್ರತಿಷ್ಠಾಪನೆಗೊಳಿಸಲಾಗುವುದು.ಈಗಾಗಲೇ ಸಮೀಪದ ಊರುಗಳ ಸಂಬಂಧಿಕರು ಗ್ರಾಮದಲ್ಲಿ ಠಿಕಾಣಿ ಹೂಡಿದ್ದು, ಮನೆ ತುಂಬ ಜನರೋ ಜನ. ಪ್ರತಿಯೊಬ್ಬರ ಮನೆಗಳಲ್ಲಿ ಹಬ್ಬದ ಸಂಭ್ರಮ ಮೂಡಿದೆ. ಜಾತ್ರೆ ನಿಮಿತ್ತ ಯಾರೊಬ್ಬರ ಮನೆಯಲ್ಲೂ ಅಡುಗೆ ಮಾಡುವಂತಿಲ್ಲ. ಇಡೀ ಊರಿನ ಜನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸಾಮೂಹಿಕವೇ ಆಗಬೇಕು. ದಿನಕ್ಕೊಂದು ರೀತಿಯ ಆಹಾರ ಸಿದ್ಧಪಡಿಸುತ್ತಿದ್ದು, ದಿನಕ್ಕೆ ಐದಾರು ಸಾವಿರ ಜನರು ಪ್ರಸಾದ ಸೇವಿಸುತ್ತಿದ್ದು ಸುತ್ತಲಿನ ಊರುಗಳಿಗೆ ಯಾದವಾಡ ಜಾತ್ರೆ ಹೆಸರಾಗುತ್ತಿದೆ.
ಪ್ರತಿ ದಿನ ಸಂಜೆ ವೇದ ಮೂರ್ತಿ ಕಲ್ಲಿನಾಥ ಶಾಸ್ತ್ರಿಗಳು ಪುರಾಣ ಹೇಳುತ್ತಿದ್ದಾರೆ. ಮಹಾಂತೇಶ ಹಡಪದ ಹಾಗೂ ಈಶ್ವರ ಹಿರೇಮಠ ವರಿಂದ ಶನಿವಾರ ಭಜನಾ ಸ್ಪರ್ಧೆಗಳು ನಡೆದರೆ, ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ದೇವಿಯರಿಗೆ ಅಭಿಷೇಕ ಕುಂಕುಮಾರ್ಚನೆ, ಹೋಮ- ಹವನ, ಹೊನ್ನಾಟ ನಡೆದವು. ರಾತ್ರಿ ಗಾಯಕ ಹಾವೇರಿಯ ಖಾಸಿಂ ಅವರಿಂದ ಸಂಗೀತ ಸಮಾರಂಭ ನಡೆಯಿತು. ನಸುಕಿನಲ್ಲಿ ಚಂಡಿಕಾ ಹೋಮ ಮತ್ತು ಹೊನ್ನಾಟ ನಡೆಯಲಿದೆ. ರಾತ್ರಿ 8ಕ್ಕೆ ದೊಡವಾಡದ ಡಾ.ವಾಲ್ಮಿಕಿ ಪ್ರಸನ್ನಾನಂದ ಸ್ವಾಮೀಜಿಯಿಂದ ಪ್ರವಚನ ನಡೆಯಲಿದೆ. ತದನಂತರ ಜೀವರ್ಗಿಯ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯಸಂಘದಿಂದ ಕುಂಟ ಕೋಣ, ಮೂಕ ಜಾಣ ನಾಟಕ ಪ್ರದರ್ಶನವಾಗಲಿದೆ.