ಯಡೂರ ವೀರಭದ್ರೇಶ್ವರನಿಗೆ ಜನದಿಗ್ಬಂಧನ

KannadaprabhaNewsNetwork | Published : Jul 29, 2024 12:59 AM
Follow Us

ಸಾರಾಂಶ

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಪುರಾಣ ಪ್ರಸಿದ್ಧ ದೇವಸ್ಥಾನ ಯಡೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ಕೃಷ್ಣಾ ನದಿಯ ನೀರು ನುಗ್ಗಿದೆ. ಗರ್ಭಗುಡಿ ಸಂಪೂರ್ಣ ಜಲಾವೃತಗೊಂಡಿದ್ದು, ಭಕ್ತರಿಗೆ ದರ್ಶನ ನಿರ್ಬಂಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿರುವುದರಿಂದ ಕೃಷ್ಣಾ ನದಿಯ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಚಿಕ್ಕೋಡಿ ತಾಲೂಕಿನ ಪುರಾಣ ಪ್ರಸಿದ್ಧ ದೇವಸ್ಥಾನ ಯಡೂರ ವೀರಭದ್ರೇಶ್ವರ ದೇವಸ್ಥಾನಕ್ಕೆ ನದಿಯ ನೀರು ನುಗ್ಗಿದ್ದು, ಗರ್ಭಗುಡಿ ಸಂಪೂರ್ಣ ಜಲಾವೃತಗೊಂಡಿದ್ದು, ಭಕ್ತರಿಗೆ ದರ್ಶನ ನಿರ್ಬಂಧಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ಭಾಗಗಳ ಭಕ್ತರ ಆರಾಧ್ಯ ದೇವರಾಗಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಶನಿವಾರ ರಾತ್ರಿ 10.30ರ ಸುಮಾರಿಗೆ ದಕ್ಷಿಣದ ಬಾಗಿಲಿನಿಂದ ಪ್ರವೇಶಿಸಿದ ಕೃಷ್ಣಾ ನೀರು ಗರ್ಭಗುಡಿಯ ಒಳಹೊಕ್ಕಿದೆ. ಗರ್ಭಗುಡಿಗೆ ನೀರು ಪ್ರವೇಶಿಸುತ್ತಿದ್ದಂತೆ ಅರ್ಚಕರು ಸಕಲವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ, ಶ್ರೀ ಭದ್ರಕಾಳೇಶ್ವರಿ ದೇವಿಗೆ ಪೂಜೆ, ಆರತಿ ನೆರವೇರಿಸಿ ಶ್ರೀ ಕಾಡಸಿದ್ದೇಶ್ವರ ಮಠಕ್ಕೆ ತರಲಾಯಿತು.ಪಂಚ ನದಿಗಳಿಗೆ 2,77,703 ಕ್ಯುಸೆಕ್ ನೀರು:

ಶನಿವಾರ ಹಾಗೂ ಭಾನುವಾರ ಮಳೆ ಅಬ್ಬರ ಸ್ವಲ್ಪ ಕಡಿಮೆಯಾಗಿರುವುದರಿಂದ ನದಿ ನೀರಿನ ಮಟ್ಟದಲ್ಲಿ ಒಂದು ಅಡಿಯಷ್ಟು ಮಾತ್ರ ಹೆಚ್ಚಳ ಕಂಡಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿನ ಪಂಚ ನದಿಗಳಿಗೆ 2,77,703 ಕ್ಯುಸೆಕ್ ನೀರು ಇಂದು ಹರಿದು ಬರುತ್ತಿದೆ.

ದೂಧಗಂಗಾ ನದಿಗೆ 47,520 ಕ್ಯುಸೆಕ್ ಮತ್ತು ಕೃಷ್ಣಾ ನದಿಗೆ 2,30,183 ಕ್ಯುಸೆಕ್ ಹೀಗೆ ಒಟ್ಟು 2,77,702 ಕ್ಯುಸೆಕ್ ನೀರು ರಾಜ್ಯಕ್ಕೆ ಹರಿದು ಬರುತ್ತಿದ್ದು, ನದಿ ತೀರದ ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡಿವೆ.

ಅಧಿಕಾರಿಗಳ ವಿರುದ್ಧ ಆಕ್ರೋಶ:

ಸದಲಗಾ ಪಟ್ಟಣಕ್ಕೆ ಚಿಕ್ಕೋಡಿ ತಾಲೂಕು ರೈತ ಮುಖಂಡ ಮಂಜುನಾಥ ಪರಗೌಡ ಬೇಟಿ ನೀಡಿ, ಸದಲಗಾ ಪ್ರವಾಹ ಪೀಡಿತ ಪ್ರದೇಶ ಆಗಿದ್ದು, ಇದುವರೆಗೆ ಯಾವುದೇ ಅಧಿಕಾರಿಗಳು ರೈತರ ಮನೆಗಳಿಗೆ ಭೇಟಿ ನೀಡಿ, ದನ ಕರುಗಳಿಗೆ ಮೇವಿನ ವ್ಯವಸ್ಥೆ ಮಾಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿಗಳು ಬಂದು ಪ್ರವಾಹ ಪೀಡಿತ ಪ್ರದೇಶಗಳ ಪರಿಸ್ಥಿತಿ ನೋಡಿ ಶಾಶ್ವತ ಪರಿಹಾರ ಕಲ್ಪಿಸಿ, ಗಂಜಿ ಕೇಂದ್ರ ಮತ್ತು ಗೋ ಶಾಲೆ ತೆರೆದು ದನ ಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ವೇದಗಂಗಾ ನದಿಯ ಭೋಜವಾಡಿ-ಶಿವಾಪುರವಾಡಿ, ಬಾರವಾಡ-ಕುನ್ನೂರ, ಸಿದ್ನಾಳ-ಅಕ್ಕೋಳ ಮತ್ತು ಜತ್ರಾಟ-ಭಿವಸಿ ದೂಧಗಂಗಾ ನದಿಯ ಕಾರದಗಾ-ಭೋಜ ಮತ್ತು ಮಲಿಕವಾಡ-ದತವಾಡ ಮತ್ತು ಕೃಷ್ಣಾ ನದಿಯ ಮಾಂಜರಿ-ಸವದತ್ತಿ ಬ್ಯಾರೇಜ್‌ಗಳು ಹಾಗೂ ಯಕ್ಸಂಬಾ-ದಾನವಾಡ ಹಾಗೂ ಸದಲಗಾ-ಬೋರಗಾಂವ ಸೇತುವೆ ಜಲಾವೃಗೊಂಡಿದ್ದು, ಬೇಡಕಿಹಾಳ-ಬೋರಗಾಂವ ಮುಂಖಾಂತರ ಮಾತ್ರ ಮಹಾರಾಷ್ಟ್ರಕ್ಕೆ ಸಂಚರಿಸುವ ಮಾರ್ಗ ಸಂಪರ್ಕ ಕೊಂಡಿಯಾಗಿದೆ.

ಎನ್‌ಡಿಆರ್‌ಎಫ್‌ ತಂಡದ ಕಣ್ಗಾವಲು

ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ ಹಿನ್ನೆಲೆ ಜಿಲ್ಲಾಡಳಿತ ಜಿಲ್ಲಾಡಳಿತ ಹೈ ಅಲರ್ಟ್‌ ಘೊಷಣೆ ಮಾಡಿದ್ದು, ಯಡೂರ ಗ್ರಾಮದ ನದಿ ತೀರದಲ್ಲಿ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಿದೆ.

ಎನ್‌ಡಿ ಆರ್‌ಎಫ್‌ ತಂಡದೊಂದಿಗೆ ಶಾಸಕ ಗಣೇಶ ಹುಕ್ಕೇರಿ ಪ್ರವಾಹ ಪರಿಸ್ಥಿತಿ ಆಲಿಸಿದರು. ಬಳಿಕ ಶಾಸಕರು ಮಾತನಾಡಿ, ಪ್ರವಾಹ ಪರಿಸ್ಥಿತಿ ಬಂದರೂ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಜಿಲ್ಲಾಡಳಿತದ ಜೊತೆಗೆ ನಮ್ಮ ಸ್ವಂತ 11 ಬೋಟ್‌ ಗಳನ್ನು ಜನರ ಸ್ಥಳಾಂತರಿಸಲು ನಿಯೋಜಿಸಲಾಗಿದೆ ಎಂದು ಹೇಳಿದರು.

ಶಾಲಾ-ಕಾಲೇಜುಗಳಿಗೆ ಇಂದು, ನಾಳೆ ರಜೆ:

ಬೆಳಗಾವಿ: ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಗೋಕಾಕ‌ ಮತ್ತು ಮೂಡಲಗಿ ತಾಲೂಕುಗಳಲ್ಲಿ ಮಾತ್ರ ಅಂಗನವಾಡಿ, ಎಲ್ಲ‌ ಸರಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜು. 29, ಜು.30ರಂದು ರಜೆ‌ ಘೋಷಿಸಲಾಗಿದೆ.

ನಿಪ್ಪಾಣಿಯ ಸಿದ್ನಾಳ, ಹುನ್ನರಗಿ, ಕುನ್ನೂರ, ಮಮದಾಪುರ ಕೆ.ಎಲ್., ಬಾರವಾಡ, ಕಾರದಗಾ ಗ್ರಾಮಗಳ, ಹುಕ್ಕೇರಿ ತಾಲೂಕಿನ ಸಂಕೇಶ್ವರ, ಹೊಸೂರ‌ ಮತ್ತು‌ ಬಡಕುಂದ್ರಿ ಗ್ರಾಮಗಳ, ಕಾಗವಾಡ ತಾಲೂಕಿನ ಜೂಗೂಳ, ಶಾಪುರ, ಮಂಗಾವತಿ, ಕೃಷ್ಣಾ ಕಿತ್ತೂರ, ಕಾತ್ರಾಳ ಮತ್ತು‌ ಬನಜವಾಡ ಗ್ರಾಮಗಳ,ಚಿಕ್ಕೋಡಿ ತಾಲೂಕಿನ ಇಂಗಳಿ, ಜನವಾಡ, ಕಲ್ಲೋಳ ಹಾಗೂ ಅಂಕಲಿ ಗ್ರಾಮಗಳ ಶಾಲೆಗಳಿಗೆ ಜು. 29, ಜು.30 ರಂದು ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.