ಮೈಸೂರು- ಕೊಡಗು ಕ್ಷೇತ್ರದಲ್ಲಿ ಮತ್ತೆ ಅರಳಿದ ಕಮಲ

KannadaprabhaNewsNetwork | Published : Jun 5, 2024 12:31 AM

ಸಾರಾಂಶ

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅವರು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಸಿ.ಎಚ್. ವಿಜಯಶಂಕರ್ ಅವರನ್ನು ಸೋಲಿಸಿದ್ದರು.

ಅಂಶಿ ಪ್ರಸನ್ನ ಕುಮಾರ್

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ. ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ. ಲಕ್ಷ್ಮಣ ಹೀನಾಯವಾಗಿ ಸೋತಿದ್ದಾರೆ.

ಇವತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜಯಂತಿ. ಅದೇ ದಿನ ಯದುವೀರ್ ಅವರು ಲೋಕಸಭೆಗೆ ಆಯ್ಕೆಯಾಗುವ ಮೂಲಕ ಭರ್ಜರಿ ಉಡುಗೊರೆ ಸಿಕ್ಕಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ ಅವರು ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದ ಸಿ.ಎಚ್. ವಿಜಯಶಂಕರ್ ಅವರನ್ನು ಸೋಲಿಸಿದ್ದರು. ಕಳೆದ ಎರಡು ಬಾರಿಯೂ ಜೆಡಿಎಸ್‌ನ ಪರೋಕ್ಷ ಬೆಂಬಲದಿಂದ ಬಿಜೆಪಿಯ ಪ್ರತಾಪ್ ಸಿಂಹ ಗೆದ್ದಿದ್ದರು. ಈ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಲಾಭ ಬಿಜೆಪಿಗೆ ನೇರವಾಗಿ ಆಗಿದೆ.

ಒಡೆಯರ್ ನಂತರ ಯದುವೀರ್

ಮೈಸೂರು ರಾಜವಂಶಸ್ಥರಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ನಾಲ್ಕು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಎರಡು ಬಾರಿ ಸೋತಿದ್ದರು. ಅವರ ನಿಧನಾನಂತರ ಅವರ ಪತ್ನಿ ಪ್ರಮೋದಾದೇವಿ ಒಡೆಯರ್ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ದತ್ತು ತೆಗೆದುಕೊಂಡಿದ್ದರು. ಇದೀಗ ಯದುವೀರ್ ಅವರು ಒಡೆಯರ್ ಅವರಂತೆ ಮೊದಲ ಯತ್ನದಲ್ಲಿಯೇ ಲೋಕಸಭೆ ಪ್ರವೇಶಿಸಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್- 5, ಜೆಡಿಎಸ್-2, ಬಿಜೆಪಿ-1 ಸ್ಥಾನಗಳನ್ನು ಹೊಂದಿವೆ.

ಮೈಸೂರು ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರ. ನಂತರದ ಸ್ಥಾನದಲ್ಲಿ ಇತರೆ ಹಿಂದುಳಿದವರು, ಮುಸ್ಲಿಮರು, ವೀರಶೈವ- ಲಿಂಗಾಯತರು, ಕುರುಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಬ್ರಾಹ್ಮಣರು ಬರುತ್ತಾರೆ.

ಬಿಜೆಪಿಯು ಒಕ್ಕಲಿಗರಾದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿಸಿದೆ. ನಾವು 47 ವರ್ಷಗಳ ನಂತರ ಒಕ್ಕಲಿಗ ಜನಾಂಗದ ಲಕ್ಷ್ಮಣ ಅವರಿಗೆ ಟಿಕೆಟ್ ನೀಡಿದ್ದೇವೆ ಎಂದು ಕಾಂಗ್ರೆಸ್ ಒಕ್ಕಲಿಗಾಸ್ತ್ರ ಪ್ರಯೋಗಿಸಿದ್ದರು. ಆದರೆ ಒಕ್ಕಲಿಗರು ಮೈತ್ರಿಕೂಟದ ಪರ ಹೆಚ್ಚಿನ ಒಲವು ವ್ಯಕ್ತಪಡಿಸಿರುವುದು ಫಲಿತಾಂಶದಿಂದ ವ್ಯಕ್ತವಾಗಿದೆ.

ಈ ಬಾರಿ ಮಂಡ್ಯದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಕಣದಲ್ಲಿದ್ದುದು, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಜಂಟಿ ಸಾರ್ವಜನಿಕ ಸಭೆ ನಡೆಸಿದ್ದು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರೂ ಆದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಯದುವೀರ್ ಪರ ಪ್ರಚಾರ ಮಾಡಿದ್ದು ಅನುಕೂಲವಾಗಿದೆ.

ಇದಲ್ಲದೇ ಕಳೆದೆರಡು ಬಾರಿಯಿಂದ ಕೈತಪ್ಪಿರುವ ತವರು ಜಿಲ್ಲೆಯ ಮೈಸೂರು ಕ್ಷೇತ್ರದಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದರು. ಚುನಾವಣೆ ಘೋಷಣೆ ಪೂರ್ವ ಹಾಗೂ ನಂತರ ಕ್ಷೇತ್ರಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ, ಗೆಲ್ಲುವ ಯತ್ನ ನಡೆಸಿದ್ದರು. ಆದರೆ ಅದು ಫಲ ನೀಡಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಸುದ್ದಿಗೋಷ್ಠಿ ನಡೆಸಿ, ಅವರಿವರ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂಬ ಭಾವನೆ ಜನರಲ್ಲಿ ಇದ್ದದ್ದು, ಮೈಸೂರು ರಾಜಮನೆತನದ ಮೇಲಿನ ಗೌರವ,. ಜೆಡಿಎಸ್‌ನ ನೇರ ಬೆಂಬಲದಿಂದ ಕಾಂಗ್ರೆಸ್‌ಗೆ ಸತತ ಮೂರನೇ ಬಾರಿಗೆ ಮುಖಭಂಗವಾಗಿದೆ ಎನ್ನಬಹುದು.

Share this article