ಯಲ್ಲಾಪುರ: ಯಕ್ಷಗಾನ, ತಾಳಮದ್ದಲೆಯಲ್ಲಿ ತೊಡಗಿಸಿಕೊಂಡರೆ ಮಾತಿನ ಸಂಸ್ಕಾರ, ಪ್ರಬುದ್ಧತೆ ಹಾಗೂ ಶಿಸ್ತನ್ನು ರೂಢಿಸಿಕೊಳ್ಳಬಹುದು ಎಂದು ಹಿರಿಯ ಅರ್ಥಧಾರಿ ವೇ. ರಾಮಕೃಷ್ಣ ಭಟ್ಟ ಮಾಗೋಡ ಹೇಳಿದರು.
ಯಾವ ಸೌಕರ್ಯ, ವ್ಯವಸ್ಥೆಗಳಿಲ್ಲದ ಕಾಲದಲ್ಲಿ ಶ್ರದ್ಧೆಯಿಂದ ಈ ಕಲೆಯನ್ನು ನಮ್ಮ ಹಿರಿಯರು ಮುಂದುವರಿಸಿಕೊಂಡು ಬಂದಿದ್ದಾರೆ. ಅದನ್ನು ಅನುಸರಿಸುತ್ತ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆ ನಮ್ಮದು ಎಂದರು.
ಕೇಂದ್ರದ ಶಿಕ್ಷಕ ನರಸಿಂಹ ಭಟ್ಟ ಕುಂಕಿಮನೆ ಮಾತನಾಡಿ, ಸಂಪೂರ್ಣ ಕನ್ನಡದಲ್ಲಿ ಪ್ರದರ್ಶಲ್ಪಡುವ ಏಕೈಕ ಕಲೆ ಯಕ್ಷಗಾನ. ಅರ್ಥಗಾರಿಕೆ ಕಲಿಯಲು ಬಂದ ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ. ಆದರೆ ಸುಸಂಸ್ಕೃತ ಮಾತುಗಾರಿಕೆ, ಭಾಷಾ ಜ್ಞಾನವನ್ನು ಖಚಿತವಾಗಿ ಹೊಂದುತ್ತಾರೆ. ಇದು ಶೈಕ್ಷಣಿಕ ಸಾಧನೆಗೂ ಸಹಕಾರಿಯಾಗುತ್ತದೆ ಎಂದರು.ಶಿಕ್ಷಕ ವಿ.ಪಿ. ಭಟ್ಟ ಕೋಣೆಮನೆ ಮಾತನಾಡಿ, ಶಾಲೆಯ ಪಠ್ಯ ಕೇವಲ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಯಕ್ಷಗಾನದಂತಹ ಕಲೆ ಜೀವನ ಶಿಕ್ಷಣ ಕಲಿಸುತ್ತದೆ. ವಿದ್ಯಾರ್ಥಿಗಳು ಕೇವಲ ಓದಿಗೆ ಸೀಮಿತರಾಗದೇ ಇಂತಹ ಕಲೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್. ಭಟ್ಟ ಮಾತನಾಡಿ, ಶತಮಾನಗಳ ಇತಿಹಾಸ ಹೊಂದಿದ ಯಕ್ಷಗಾನ ಕಲೆಗೆ ಎಂದಿಗೂ ಅಳಿವಿಲ್ಲ. ಇತ್ತೀಚಿನ ವರ್ಷಗಳಲ್ಲಿ ಯುವಕರು ಹೆಚ್ಚು ಆಸಕ್ತಿಯಿಂದ ಯಕ್ಷಗಾನದತ್ತ ಬರುತ್ತಿದ್ದಾರೆ. ಕಲೆಯ ಪರಂಪರೆಯನ್ನು ಉಳಿಸಿಕೊಂಡು, ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುವ ಕಾರ್ಯ ಹಿಂದಿನಿಂದ ನಡೆದುಕೊಂಡು ಬಂದಿದೆ. ಅದು ನಿರಂತರವಾಗಿ ಮುಂದುವರಿಯಲು ಇಂತಹ ಕೇಂದ್ರಗಳು ವೇದಿಕೆಯಾಗುತ್ತವೆ ಎಂದರು.