ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ
ಪಟ್ಟಣದ ಪೊಲೀಸ್ ಮೈದಾನದಲ್ಲಿ ತಾಲೂಕು ಆಡಳಿತ ವತಿಯಿಂದ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ತಹಸಿಲ್ದಾರ್ ಪ್ರವೀಣ್ ಕರಾಂಡೆಯವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ತಹಸೀಲ್ದಾರ್ ಕನ್ನಡ ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ. ಕನ್ನಡ ತನ್ನದೆ ಆದ ಹಿರಿಮೆ, ಪರಂಪರೆ ಹೊಂದಿದೆ. ಅಲ್ಲದೆ ಭಾಷೆಗೆ ತನ್ನದೆ ಆದ ಇತಿಹಾಸವಿದೆ. ನಮ್ಮದು ಸಮೃದ್ಧ ಭಾಷೆಯಾಗಿದೆ. ಆಂಗ್ಲ ಪದವನ್ನು ಬಳಸದೆ ಯಕ್ಷಗಾನ ಕಲೆ ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದೆ. ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಕಲಿಯುವವರಿಗೆ ಹೆಚ್ಚು ಮನದಟ್ಟಾಗುತ್ತದೆ ಎಂದರು.ನಂತರದಲ್ಲಿ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರವುಳ್ಳ ಆಕರ್ಷಕ ಮೆರವಣಿಗೆ ತಾಲೂಕಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಎಂಪಿಇ ಸೊಸೈಟಿಯ ಸೆಂಟ್ರಲ್ ಶಾಲೆಯ ಕಾಳು ಮೆಣಸಿನ ರಾಣಿ ಹಾಗೂ ಮಾರ್ಥೋಮಾ ಶಾಲೆಯ ವಿಜಯನಗರ ಸಾಮ್ರಾಜ್ಯದ ಸ್ತಬ್ಧಚಿತ್ರಗಳು ಆಕರ್ಷಕವಾಗಿ ಕಂಡುಬಂದಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸುರೇಶ್ ಹೊನ್ನಾವರ, ಪಪಂ ಮುಖ್ಯಾಧಿಕಾರಿ ಏಸು ಸುಬ್ಬಣ್ಣ ಬೆಂಗಳೂರು, ಶಿವರಾಜ್ ಮೇಸ್ತ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚೇತನ್ ಕುಮಾರ್ ಪಿ., ತಾಲೂಕು ಶಿಕ್ಷಣಾಧಿಕಾರಿ ವಿನಾಯಕ ಅವಧಾನಿ, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಕರವೇ ತಾಲೂಕಾಧ್ಯಕ್ಷ ಮಂಜುನಾಥ್ ಗೌಡ ಹಾಗೂ ಇತರರಿದ್ದರು.ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಂಘ-ಸಂಸ್ಥೆಯವರು ಈ ವೇಳೆ ಹಾಜರಿದ್ದರು. ಸೆಂಟ್ ಥಾಮಸ್ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಗೀತೆ, ನ್ಯೂ ಇಂಗ್ಲೀಷ್ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಸರ್ಕಾರಿ ಪ್ರೌಢಶಾಲೆ ಪ್ರಭಾತನಗರ ವಿದ್ಯಾರ್ಥಿಗಳು ರೈತಗೀತೆ ಹಾಡಿದರು. ಸುದೀಶ್ ನಾಯ್ಕ ನಿರೂಪಿಸಿದರು.